ಶಾಲಾ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುಗೆ ಸಮಾರಂಭ

0
111

ಕನ್ನಡಮ್ಮ ಸುದ್ದಿ-ಮುಂಡರಗಿ : ಇಂದು ವಿಜ್ಞಾನ ಮತ್ತು ತಂತ್ರಜ್ಞಾನಗಳು ತುಂಬಾ ವೇಗವಾಗಿ ಬೆಳೆಯುತ್ತಿದ್ದು, ಅದರ ವೇಗಕ್ಕೆ ತಕ್ಕಂತೆ ನಮ್ಮ ಮಕ್ಕಳು ಓಡುತ್ತಿರುವುದು ತುಂಬಾ ಸಂತಸದ ವಿಷಯವಾಗಿದೆ. ಶಿಕ್ಷಕರು ಹಾಗೂ ಪಾಲಕರು ಮಕ್ಕಳ ಪ್ರತಿಭೆಗೆ ತಕ್ಕಂತಹ ವೇದಿಕೆಯನ್ನು ನಿರ್ಮಿಸಬೇಕಾಗಿದೆ ಎಂದು ತಹಶೀಲ್ದಾರ ಕೆ.ಬಿ.ಕೋರಿಶೆಟ್ಟರ ಹೇಳಿದರು.
ತಾಲ್ಲೂಕಿನ ಗಂಗಾಪೂರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ 8ನೇ ತರಗತಿಯ ಮಕ್ಕಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿಅ ಅವರು ಮಾತನಾಡಿದರು.
ಇಂದು ಕಲಿಕೆಗೆ ಹಲವಾರು ಅವಕಾಶಗಳಿದ್ದು, ಸರಕಾರ ಎಲ್ಲರಿಗೂ ಉನ್ನತ ಶಿಕ್ಷಣದವರೆಗೆ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತದೆ. ಗ್ರಾಮೀಣ ಭಾಗದ ಮಕ್ಕಳು ತುಂಬಾ ಬುದ್ದಿವಂತರಾಗಿದ್ದು, ಅವರಿಗೆ ಸಕಾಲದಲ್ಲಿ ಉತ್ತಮ ತರಬೇತಿ ಮತ್ತು ನಿಯಮಿತವಾಗಿ ಮಾರ್ಗದರ್ಶನ ನೀಡಿದರೆ ಅವರೆಲ್ಲ ಮುಂದೆ ಉನ್ನತ ಅಧಿಕಾರ ಹೊಂದಲಿದ್ದಾರೆ ಎಂದು ತಿಳಿಸಿದರು.
ವಿಜಯನಗರ ಸಕ್ಕರೆ ಕಾರ್ಖಾನೆಯ ಹಿರಿಯ ಅಧಿಕಾರಿ ಜಿ.ಸುರೇಶ ಮಾತನಾಡಿ, ಇಂದು ಗ್ರಾಮೀಣ ಭಾಗಗಳಲ್ಲಿ ತುಂಬಾ ಜನ ಯುವಕರು ವಿದ್ಯಾವಂತರಾಗುತ್ತಿದ್ದು, ಬಹುತೇಕ ಯುವಕರು ಉನ್ನತ ವ್ಯಾಸಂಗವನ್ನು ಪೂರೈಸುತ್ತಿದ್ದಾರೆ. ಅವರೆಲ್ಲ ವಿವಿಧ ರಂಗಗಳಲ್ಲಿ ಮುಂದೆ ಬರುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.
ಶಿಕ್ಷಕ ಉಮೇಶ ಬೂದಿಹಾಳ ಮಾತನಾಡಿ, ಶಿಕ್ಷಣದಿಂದ ಮಾತ್ರ ಬಡತನವನ್ನು ನಿವಾರಣೆ ಮಾಡಲು ಸಾಧ್ಯವಿದೆ. ಆದ್ದರಿಂದ ಗ್ರಾಮೀಣ ಭಾಗದಲ್ಲಿರುವ ಮಕ್ಕಳು ಮೊದಲು ವಿದ್ಯಾವಂತರಾಗಬೇಕು. ಉತ್ತಮ ನಾಗರಿಕರಾಗಿ ತಮ್ಮ ತಂದೆ ತಾಯಿ ಹಾಗೂ ಶಾಲೆಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಆರ್.ಎಲ್.ಬದಾಮಿ ಮಾತನಾಡಿ, ಶಾಲೆಯು ಸಾರ್ವಜನಿಕರ ಸೊತ್ತಾಗಿದ್ದು, ಶಾಲಾ ಎಸ್‍ಡಿಎಂಸಿ ಪದಾಧಿಕಾರಿಗಳು ಶಾಲಾ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಬಿಡುವಿನ ವೇಳೆಯಲ್ಲಿ ಶಾಲೆಗೆ ಭೇಟಿ ನೀಡಿ ಶಾಲೆಯ ಆಗು ಹೋಗುಗಳನ್ನು ಪರಿಶೀಲಿಸಬೇಕು ಎಂದು ತಿಳಿಸಿದರು.
ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಬೀರಪ್ಪ ಮಲ್ಲಾಪೂರ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಇತ್ತೀಚೆಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರಾದ ಎಸ್.ಎಸ್.ನಾಯ್ಕ ಅವರನ್ನು ಹಾಗೂ ಉತ್ತಮ ಸಾಧನೆ ಮಾಡಿದ ಹಲವಾರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಮುಖ್ಯೋಪಾಧ್ಯಾಯ ವಿ.ಜಿ.ಡೊಳ್ಳಿನ ಸರ್ವರನ್ನು ಸ್ವಾಗತಿಸಿದರು. ಎಸ್.ಎಸ್.ನಾಯಕ ಹಾಗೂ ಮಾರುತಿ ಮಲ್ಲಾಪೂರ ಕಾರ್ಯಕ್ರಮ ನಿರೂಪಿಸಿದರು. ಆರ್.ವಿ.ಚಂದ್ರಶೇಖರ ಕೊನೆಯಲ್ಲಿ ವಂದಿಸಿದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕøತಿ ಕಾರ್ಯಕ್ರಮಗಳು ಜರುಗಿದವು.

loading...