ಶಿಕ್ಷಕರ ವೃಂದಕ್ಕೆ ಪದನಾಮಕರಿಸಲು ಆಗ್ರಹಿಸಿ ಮನವಿ

0
8

ಮುಂಡಗೋಡ: ಪ್ರಾಥಮಿಕ ಶಾಲೆಗಳಲ್ಲಿ ಪದವಿ ವಿದ್ಯಾರ್ಹತೆ ಮತ್ತು ಸೇವಾನುಭವ ಪಡೆದಿರುವ ಸೇವಾ ನಿರತ ಪ್ರಾಥಮಿಕ ಶಾಲಾ ಸಹ ಶಿಕ್ಷಕರನ್ನು ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಕ್ಕೆ ಪದನಾಮಕರಿಸಲು ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವಿಧರ ಶಿಕ್ಷಕರ ಸಂಘ ತಾಲೂಕು ಘಟಕದವರು ಇಲ್ಲಿನ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಸಾಂಕೇತಿಕ ಧರಣಿ ನಡೆಸಿ ಇಲ್ಲಿನ ಕೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪರವರಿಗೆ ಮನವಿ ಸಲ್ಲಿಸಿದರು.
1 ರಿಂದ 7ನೇ ತರಗತಿಗೆ ನೇಮಕವಾದ ಶಿಕ್ಷಕರು, 2005ರಿಂದ 8ನೇ ತರಗತಿ ಪ್ರಾರಂಭಿಸಿದಾಗಿನಿಂದಲೂ ಸೇವೆಯಲ್ಲಿರುವ ಪದವಿಧರ ಶಿಕ್ಷಕರು 6ರಿಂದ 8ನೇ ತರಗತಿಗಳನ್ನು ಬೋಧಿಸುತ್ತಾ ಬಂದಿದ್ದೇವೆ. ರಾಜ್ಯದಲ್ಲಿ 82ಸಾವಿರಕ್ಕೂ ಅಧಿಕ ಪದವಿ ಪಡೆದ ಅನುಭವಿ ಶಿಕ್ಷಕರು 6ರಿಂದ 8ನೇ ತರಗತಿಗಳನ್ನು 14ವರ್ಷಗಳಿಂದ ಬೋಧಿಸುತ್ತಿದ್ದರೂ ಅವರನ್ನು ಮುಂಬಡ್ತಿಗೆ ಪರಿಗಣಿಸದೇ ಪ್ರಾಥಮಿಕ ಶಾಲಾ ಶಿಕ್ಷಕರು (6-8) ಹುದ್ದೆಗಳನ್ನು 2ಬಾರಿ ನೇಮಕ ಮಾಡಿ ಈಗ ಮತ್ತೆ 3ನೇ ಬಾರಿ ನೇರ ನೇಮಕಾತಿ ನಡೆಯುತ್ತಿದೆ. ಈ ಬಗ್ಗೆ ಇಲಾಖೆ ಮುಖ್ಯಸ್ಥರು ಮತ್ತು ಸಚಿವರನ್ನು ಕೂಡ ಕಂಡು ಮನವರಿಕೆ ಮಾಡಿದ್ದೇವೆ. ಅಲ್ಲದೇ ದಿ.ಫೆ 2018ರಂದು ಫ್ರೀಡಂ ಪಾರ್ಕ್‌ನಲ್ಲಿ 25ಸಾವಿರ ಶಿಕ್ಷಕರು ಉಪವಾಸ ಸತ್ಯಾಗ್ರಹ ಮಾಡಿ ಸರ್ಕಾರಕ್ಕೆ ಬೇಡಿಕೆ ಬಗ್ಗೆ ವಿನಂತಿಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದೇವೆ. ಆದರೆ ಈವರೆಗೂ ನ್ಯಾಯ ದೊರಕಿರುವುದಿಲ್ಲ. ಆದ್ದರಿಂದ ನಾವು ಸಾಂಕೇತಿಕ ಧರಣಿಯನ್ನು ಹಮ್ಮಿಕೊಂಡಿದ್ದು ಧರಣಿ ಸತ್ಯಾಗ್ರಹದ ಮೂಲಕ ಪ್ರಬಲವಾಗಿ ಆಗ್ರಹಿಸುವುದೇನೆಂದರೆ ಅರ್ಹ ಸೇವೆಯಲ್ಲಿರುವ ಪದವಿಧರ ಶಿಕ್ಷಕರನ್ನು ಪ್ರಾಥಮಿಕ ಪದವಿಧರ ಶಿಕ್ಷಕರು ಎಂದು ಪರಿಗಣಿಸಿ.
ಇಲ್ಲವಾದಲ್ಲಿ ನಾವು ನಮ್ಮ ಹೊಸ ವೃಂದ ನಿಯಮಗಳಂತೆ ಬರುವ ಜು.1ರಿಂದ 1ರಿಂದ5ನೇ ತರಗತಿಗಳನ್ನು ಮಾತ್ರ ಬೋಧಿಸುತ್ತೇವೆ. 6ರಿಂದ8ನೇ ತರಗತಿಗಳನ್ನು ಬಹಿಷ್ಕರಿಸುತ್ತೇವೆ. ನ್ಯಾಯ ದೊರೆಯುವಂತೆ ನಮ್ಮ ಬೇಡಿಕೆಯನ್ನು ಈಡೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ವೇಳೆ ಸಂಘಟನೆ ಅಧ್ಯಕ್ಷ ನಾಗರಾಜ ನಾಯ್ಕ, ಉಪಾಧ್ಯಕ್ಷ ಪ್ರಕಾಶ ಬಾಳಮ್ಮನವರ, ಕಾರ್ಯದರ್ಶಿ ಸತೀಶ ಕಾನಡೆ,ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರದೀಪ್‌ ಕುಲಕರ್ಣಿ,ಎನ್‌ ಪಿ ಎಸ್‌ ಸಂಘದ ಅಧ್ಯಕ್ಷ ವಿರೇಶ ಕುರಟ್ಟಿಮಠ, ಶಿಕ್ಷಕರಾದ ಬಸವರಾಜ ತುರಮರಿ, ಬಸವರಾಜ ಬೆಂಡಲಗಟ್ಟಿ, ಸೋಮಶೇಖರ ಲಮಾಣಿ, ಹನುಮಂತ ತಳವಾರ, ಸುರೇಶ ಪೂಜಾರ, ವಸಂತ ರಾಠೋಡ ಹಾಗೂ ಇತರರಿದ್ದರು.

loading...