ಶಿವಾಜಿ ವಿದ್ಯಾಲಯ: ಶಾಲಾ ಕೊಠಡಿಗಳ ಉದ್ಘಾಟನೆ

0
60

ಕನ್ನಡಮ್ಮ ಸುದ್ದಿ-ಹಳಿಯಾಳ: ರಾಜ್ಯ ವಲಯ ಯೋಜನೆಯಡಿ ಇಲ್ಲಿನ ಶಿವಾಜಿ ಪ್ರೌಢಶಾಲೆಗೆ ಮಂಜೂರಾದ ನೂತನ ಶಾಲಾ ಕೊಠಡಿಗಳ ಉದ್ಘಾಟನೆಯು ಗುರುವಾರ ನೆರವೇರಿತು.
ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆಯವರು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸರ್ಕಾರ ಶಿಕ್ಷಣ ನೀಡಲು ಸರ್ವ ರೀತಿಯ ಸಹಾಯ-ಸಹಕಾರ ನೀಡುತ್ತದೆ. ಶಿಕ್ಷಣದಿಂದ ದಾರಿದ್ರ್ಯ, ಬಡತನ ದೂರಗೊಳಿಸಿ ಜೀವನದಲ್ಲಿ ಸಾಧನೆಗೈಯಬಹುದು. ಹೀಗಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕ ಕಾಳಜಿ, ಕಳಕಳಿಯಿಂದ ಕಾರ್ಯ ಮಾಡಬೇಕು.
ಶಿವಾಜಿ ವಿದ್ಯಾಲಯದಲ್ಲಿ ಹಲವಾರು ಮೂಲಭೂತ ಸೌಕರ್ಯಗಳನ್ನು ನೀಡಲಾಗಿದೆ. ವಿಧಾನ ಪರಿಷತ್‌ ಸದಸ್ಯರಾದ ಎಸ್‌.ಎಲ್‌. ಘೋಟ್ನೇಕರ ಅವರ ಅಧ್ಯಕ್ಷತೆಯಲ್ಲಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದೆ. ಆದರೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಿನ್ನಡೆ ಮತ್ತು ಕಳಪೆ ಸಾಧನೆ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ. ಹೀಗಾಗಿ ಶಿಕ್ಷಕರು ವಿಶೇಷ ಇಚ್ಛಾಶಕ್ತಿ ತೋರ್ಪಡಿಸಿ ಫಲಿತಾಂಶ ಉತ್ತಮಪಡಿಸಿ ವಿಶೇಷ ಪ್ರಯತ್ನ ಮಾಡುವಂತೆ ಮುಖ್ಯಾಧ್ಯಾಪಕರಿಗೆ ಸೂಚಿಸಿದರು.
ವಿದ್ಯಾಲಯ ಸಮಿತಿ ಅಧ್ಯಕ್ಷ ಎಂಎಲ್‌ಸಿ ಎಸ್‌.ಎಲ್‌. ಘೋಟ್ನೇಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಅಹ್ಮದ ಮುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ವಿಠೋಬಾ ಬೋರೆಕರ ನಿರೂಪಿಸಿದರು. ಮುಖ್ಯಾಧ್ಯಾಪಕ ವಿಷ್ಣು ನಾಯ್ಕ ವಂದಿಸಿದರು. ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ಉಪಾಧ್ಯಕ್ಷ ಅರುಣ ಬೋಬಾಟಿ, ಜಿಲ್ಲಾ ಪಂಚಾಯತ ಸದಸ್ಯೆ ಲಕ್ಷ್ಮೀ ಸುಭಾಸ ಕೋರ್ವೆಕರ, ವಕ್ಫ್‌ ಬೋರ್ಡ್‌ ಜಿಲ್ಲಾಧ್ಯಕ್ಷ ಖಯಾಂ ಮುಗದ, ತಾಲೂಕ ಪಂಚಾಯತ ಅಧ್ಯಕ್ಷೆ ರೀಟಾ ಸಿದ್ಧಿ, ಉಪಾಧ್ಯಕ್ಷೆ ನೀಲವ್ವಾ ಮೋಹನ ಮಡಿವಾಳ, ಶಾಲಾ ಸಮಿತಿ ಸದಸ್ಯರಾದ ಶಿವಪುತ್ರ ನುಚ್ಚಂಬ್ಲಿ, ಪರುಷರಾಮ ಹರ್ಲಿ, ಗುಲಾಬಶ್ಯಾ ಲತೀಫನವರ, ಮಹೇಶ ಮಿಂಡೋಳ್ಕರ, ಅಶೋಕ ಘೋಟ್ನೇಕರ, ಎಂ.ವಿ. ಘಾಡಿ, ಉದಯ ಗಿರಿ, ವಿಮಲಾ ವಡ್ಡರ್‌ ಮೊದಲಾದವರು ಸಮಾರಂಭದಲ್ಲಿದ್ದರು.

loading...