ಶೌಚಾಲಯ ನಿರ್ಮಿಸಿಕೊಳ್ಳುವವರಿಗೆ ಸಹಾಯಧನ: ಪ್ರಕಾಶ

0
42

ಚಿಕ್ಕೋಡಿ 15: ಪ್ರತಿಯೊಬ್ಬರು ಶೌಚಾಲಯ ನಿರ್ಮಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಶೌಚಾಲಯ ನಿರ್ಮಿಸಿಕೊಳ್ಳುವ ಪ್ರತಿ ಕುಟುಂಬಕ್ಕೂ ಸರಕಾರದ ಸಹಾಯಧನದ ಹೊರತಾಗಿ ಸಾಮಾನ್ಯ ವರ್ಗಕ್ಕೆ 8 ಸಾವಿರ ಹಾಗೂ ಪರಿಶಿಷ್ಟ ವರ್ಗಕ್ಕೆ 5 ಸಾವಿರ ಬಹುಮಾನ ರೂಪದಲ್ಲಿ ಅನ್ನಪೂರ್ಣೇಶ್ವರಿ ಫೌಂಡೇಶನ್‌ ನೀಡಲಿದೆ ಎಂದು ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು. ಕೇರೂರ ಗ್ರಾಮದ ಚಿಕ್ಕೋಡಿ-ಕೇರೂರ ರಸ್ತೆಯಿಂದ ಹುದ್ದಾರ ತೋಟದವರೆಗಿನ ರಸ್ತೆ ಮತ್ತು ಚಿಕ್ಕೋಡಿ-ಜೋಡಕುರಳಿ ರಸ್ತೆಯಿಂದ ಮೌಲಾಕೋಡಿ ರಸ್ತೆ ನಿರ್ಮಾಣಕ್ಕೆ 1.08ಕೋಟಿ ಹಾಗೂ ಕೇರೂರ-ಅಂಕಲಿ ರಸ್ತೆಯಿಂದ ತೋಟದ ರಸ್ತೆ ನಿರ್ಮಾಣ 1.65 ಕೋಟಿ ಕಾಮಗಾರಿಗೆ ಚಾಲನೆ ನೀಡಿದರು.ಕೇರೂರ ಗ್ರಾಮದ ಜನರಿಗೆ ಪೈಪ್‌ಲೈನ್‌ ಮತ್ತು ವಿವಿಧ ಅಭಿವೃದ್ಧಿಗಾಗಿ ಹೆಚ್ಚುವರಿಯಾಗಿ 2 ಕೋಟಿ ರೂ.ಗಳ ಅನುದಾನ ನೀಡುವುದಾಗಿ ಸಂಸದ ಪ್ರಕಾಶ ಹುಕ್ಕೇರಿ ಭರವಸೆ ನೀಡಿದರು. ರಾಜ್ಯದಲ್ಲಿಯೇ ಮೊದಲ ಬಾರಿಗೆ ತೋಟಪಟ್ಟಿ ಜನರಿಗೂ ನಿರಂತರ ವಿದ್ಯುತ್‌ ಪೂರೈಕೆ ಮಾಡುವ ಯೋಜನೆಯನ್ನು ಚಿಕ್ಕೋಡಿ-ಸದಲಗಾ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 158 ಕಡೆಗೆ ಜಾರಿಗೊಳಿಸಲಾಗಿದ್ದು, ಕಾಮಗಾರಿ ತೀವ್ರಗತಿಯಲ್ಲಿ ಸಾಗುತ್ತಿದೆ. ಜನೇವರಿ 30 ರೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಮುಂದಿನ ದಿನಮಾನದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಎಲ್ಲ ಗ್ರಾಮಗಳ ತೋಟಪಟ್ಟಿ ಜನರಿಗೂ ನಿರಂತರ ವಿದ್ಯುತ್‌ ಪೂರೈಕೆ ಯೋಜನೆ ಮಂಜೂರು ಮಾಡಿಸಲಾಗುವುದು ಎಂದು ಹೇಳಿದರು. ತಾಲೂಕಿನ ಜೋಡಕುರಳಿ ಗ್ರಾಮದಿಂದ ಮೇಖಳಿ ಗ್ರಾಮದ ವರೆಗಿನ ರಸ್ತೆ ನಿರ್ಮಾಣ ಕಾಮಗಾರಿಗೂ ಶುಕ್ರವಾರ ಚಾಲನೆ ನೀಡಿದರು.ಜೋಡಕುರಳಿ ಗ್ರಾಮದ ಕೆರೆಗೆ ಬರುವ ಎರಡು ತಿಂಗಳಲ್ಲಿ ನೀರು ತುಂಬಿಸುವ ಕಾಮಗಾರಿ ಪೂರ್ಣಗೊಳಿಸಿ ನೀರು ತುಂಬಿಸಲಾಗುವುದು ಎಂದು ಹೇಳಿದರು.ನಿಪ್ಪಾಣಿ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ, ಸುರೇಶ ಕೋರೆ, ಮಲ್ಲಪ್ಪ ಭಾಗಿ, ವಿರೇಂದ್ರ ಪಾಟೀಲ, ಚನಗೌಡ ಪಾಟೀಲ, ರವಿ ಪಾಟೀಲ, ಪ್ರತಾಪ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

loading...