ಸಂವಿಧಾನವೇ ತಮಗೆ ಪರಮೋಚ್ಛ; ಸ್ಪೀಕರ್ ರಮೇಶ್ ಕುಮಾರ್

0
3

ಬೆಂಗಳೂರು:- ತಮಗೆ ಸಂವಿಧಾನವೇ ಪರಮೋಚ್ಛವಾಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಹದಿಮೂರು ಬಂಡಕೋರ ಶಾಸಕರು ಸಲ್ಲಿಸಿರುವ ಪ್ರತಿಯೊಂದು ರಾಜೀನಾಮೆಯನ್ನೂ ಎಚ್ಚರಿಕೆಯಿಂದ ಪರಿಶೀಲಿಸಿ ತೀರ್ಮಾನ ಕೈಗೊಳ್ಳುವುದಾಗಿ ವಿಧಾನಸಭೆಯ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ವಿಧಾನ ಸೌಧದ ತಮ್ಮ ಕಚೇರಿ ಪ್ರವೇಶಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದ ಪರಮೋಚ್ಛ ಸ್ಥಾನದಲ್ಲಿ ಕುಳಿತು ತಾವು ಕೈಗೊಳ್ಳಲಿರುವ ನಿರ್ಧಾರ ಮಾದರಿ ಹಾಗೂ ಮೇಲ್ಪಂಕ್ತಿಯಾಗಿರಲಿದೆ. ತಾವು ಕೈಗೊಳ್ಳಲಿರುವ ತೀರ್ಮಾನ ಶಾಸನ ಸಭೆಯ ಇತಿಹಾಸದ ಭಾಗವಾಗುವ ಕಾರಣ ಯಾವುದೇ ತೀರ್ಮಾನಗಳನ್ನು ಅತಿ ಎಚ್ಚರಿಕೆಯಿಂದ ಕೈಗೊಳ್ಳುವುದಾಗಿ ಸ್ಪೀಕರ್ ನುಡಿದರು.
ಕಾಂಗ್ರೆಸ್ ಪಕ್ಷದ 10 ಹಾಗೂ ಮೂವರು ಜೆಡಿಎಸ್ ಶಾಸಕರ ರಾಜೀನಾಮೆ ಹಾಗೂ ಇತ್ತೀಚಿಗೆ ಸಚಿವ ಸಂಪುಟ ಸೇರಿದ್ದ ಇಬ್ಬರು ಪಕ್ಷೇತರ ಸಚಿವರು ರಾಜೀನಾಮೆ ಸಲ್ಲಿಸಿ, ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಹಿನ್ನಲೆಯಲ್ಲಿ 13 ತಿಂಗಳ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ.
ತಮಗೆ ಯಾವುದೇ ಹೈ ಕಮಾಂಡ್ ಇಲ್ಲ. ಹಾಗಾಗಿ 13 ಮಂದಿ ಶಾಸಕರ ರಾಜೀನಾಮೆ ಸಂಬಂಧ ಸಂವಿಧಾನದ ಆಶಯಯದಂತೆ ತೀರ್ಮಾನ ಕೈಗೊಳ್ಳುವುದಾಗಿ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದರು.
ಬಂಡಕೋರ ಶಾಸಕರ ವಿರುದ್ಧ ತಾವು ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ, ಒಂದು ಪಕ್ಷ ಯಾವುದೇ ದೂರು ಬಂದರೆ ಅದನ್ನೂ ಸಹ ಸೂಕ್ತವಾಗಿ ಪರಿಶೀಲಿಸಿಸುವುದಾಗಿ ಪ್ರಶ್ನೆಯೊಂದಕ್ಕೆ ಸ್ಪೀಕರ್ ಉತ್ತರಿಸಿದರು.
ಸಂವಿಧಾನ ಹಾಗೂ ಜನರ ನಿರೀಕ್ಷೆಗಳನ್ನು ಮನದಲ್ಲಿಟ್ಟುಕೊಂಡು ತಮ್ಮ ಮನಸ್ಸಾಕ್ಷಿಯಂತೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು
ತಮ್ಮ ಜತೆ ಖುದ್ದು ಮಾತನಾಡದ ಹೊರತು ಯಾವುದೇ ಶಾಸಕರ ರಾಜೀನಾಮೆ ಸ್ವೀಕರಿಸುವುದಿಲ್ಲ ಎಂದು ಸಹ ರಮೇಶ್ ಕುಮಾರ್ ಇದೇ ಸಂದರ್ಭದಲ್ಲಿ ಹೇಳಿದರು.
ಶನಿವಾರ ಸ್ಪೀಕರ್ ರಮೇಶ್ ಕುಮಾರ್ ಅನುಪಸ್ಥಿತಿಯಲ್ಲಿ ಸ್ಪೀಕರ್ ಕಾರ್ಯಾಲಯಕ್ಕೆ ರಾಜೀನಾಮೆ ಸಲ್ಲಿಸಿದ್ದ ಬಹುತೇಕ ಬಂಡುಕೋರ ಶಾಸಕರು ನಂತರ ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಿದ್ದರು
ತನ್ನ ಶಾಸಕರನ್ನು ವಿಶೇಷ ವಿಮಾನದಲ್ಲಿ ಮುಂಬೈಗೆ ರವಾನಿಸಿರುವುದನ್ನು ನೋಡಿದರೆ, ಬಿಜೆಪಿ ತಮ್ಮ ಶಾಸಕರನ್ನು ವಾಸ್ತವವಾಗಿ ಅಪಹರಿಸಿದೆ ಎಂದು ಕಾಂಗ್ರೆಸ್ ದೂರಿದೆ.

loading...