ಸಮಬಲ ಸಾಧಿಸಿಕೊಳ್ಳುವ ಯೋಜನೆಯಲ್ಲಿ ಇಂಗ್ಲೆಂಡ್‌

0
1

ಲಂಡನ್‌:- ಪ್ರತಿಷ್ಠಿತ ಆ್ಯಶಸ್‌ ಸರಣಿಯ ಮೊದಲನೇ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 251 ರನ್‌ಗಳಿಂದ ಭಾರಿ ಅಂತರದಲ್ಲಿ ಸೋಲು ಅನುಭವಿಸಿದ್ದ ಆತಿಥೇಯ ಇಂಗ್ಲೆಂಡ್‌ ನಾಳೆ ದಿ ಲಾರ್ಡ್ಸ್‌ ಅಂಗಳದಲ್ಲಿ ಆರಂಭವಾಗುವ ಎರಡನೇ ಟೆಸ್ಟ್‌ ಪಂದ್ಯದ ಗೆಲುವಿನ ಮೇಲೆ ಗಮನ ಹರಿಸಿದೆ.
ಎಜ್ಬಾಸ್ಟನ್‌ ಕ್ರೀಡಾಂಗಣದಲ್ಲಿ ಮೊದಲ ಪಂದ್ಯದ ಆರಂಭಿಕ ದಿನವೇ ಹಿರಿಯ ವೇಗಿ ಜೇಮ್ಸ್‌ ಅಂಡರ್ಸನ್‌ ಅವರು ಕೇವಲ ನಾಲ್ಕು ಓವರ್‌ ಎಸೆದು ಗಾಯಕ್ಕೆ ಒಳಗಾಗಿ ಅಂಗಳ ತೊರೆದಿದ್ದರು. ಆದಾಗ್ಯೂ ಪ್ರಥಮ ಇನಿಂಗ್ಸ್‌ನಲ್ಲಿ 90 ಮುನ್ನಡೆ ಗಳಿಸಿದ್ದ ಲಾಭ ಪಡೆದುಕೊಳ್ಳುವಲ್ಲಿ ಆಂಗ್ಲರು ವಿಫಲರಾಗಿದ್ದರು.
ಎರಡನೇ ಇನಿಂಗ್ಸ್‌ನಲ್ಲಿ ಪುಟಿದೆದ್ದ ಆಸ್ಟ್ರೇಲಿಯಾ ಏಳು ವಿಕೆಟ್‌ ನಷ್ಟಕ್ಕೆ 487 ರನ್‌ ದಾಖಲಿಸಿತ್ತು. ನಂತರ, ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಬ್ಯಾಟಿಂಗ್‌ ವಿಭಾಗ ವಿಫಲವಾಗಿತ್ತು. ಅಂತಿಮವಾಗಿ ಆಸೀಸ್‌ ಭಾರಿ ಅಂತರದಲ್ಲಿ ಗೆದ್ದು ಪಾರಮ್ಯ ಸಾಧಿಸಿತ್ತು.
ನಾಳಿನ ಪಂದ್ಯದಲ್ಲಿ ಯುವ ವೇಗಿ ಜೊಫ್ರಾ ಆರ್ಚರ್‌ ಅವರಿಗೆ ನಾಯಕ ಜೋ ರೂಟ್‌ ಮೊರೆ ಹೋಗಲಿದ್ದಾರೆ. ಕಳೆದ ಪಂದ್ಯದಲ್ಲಿ ಸ್ಟೀವ್‌ ಸ್ಮಿತ್‌ 144 ಮತ್ತು 142 ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ್ದರು. ಇವರನ್ನು ಕಟ್ಟಿ ಹಾಕಲು ಆರ್ಚರ್ ಗೆ ಜವಾಬ್ದಾರಿ ನೀಡಲಾಗಿದೆ.
2005ರ ಬಳಿಕ ಎಜ್‌ಬಾಸ್ಟನ್‌ ಅಂಗಳದಲ್ಲಿ ಆಸ್ಟ್ರೇಲಿಯಾ ಜಯಭೇರಿ ಬಾರಿಸಿರುವುದು ಇದೇ ಮೊದಲು. ಸ್ಟೀವ್‌ ಸ್ಮಿತ್‌ ಎರಡು ಶತಕ ಹಾಗೂ ಮ್ಯಾಥ್ಯು ವೇಡ್‌ ಅವರ ಶತಕ ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿತ್ತು.
ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಮಿಚೆಲ್‌ ಸ್ಟಾರ್ಕ್‌ ನಾಳಿನ ಪಂದ್ಯಕ್ಕೆ ಮರಳುತ್ತಿದ್ದಾರೆ. ಕಳೆದ ತಿಂಗಳು ಮುಕ್ತಾಯವಾಗಿದ್ದ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಸ್ಟಾರ್ಕ್‌ ಇದೇ ಅಂಗಳದಲ್ಲಿ ಎರಡು ಪಂದ್ಯಗಳಿಂದ ಒಂಬತ್ತು ವಿಕೆಟ್‌ ಕಿತ್ತಿದ್ದರು. ಹಾಗಾಗಿ, ಇವರ ಮೇಲೆ ನಾಳಿನ ಪಂದ್ಯದಲ್ಲಿ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.
ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಐದನೇ ದಿನ ನಥಾನ್‌ ಲಿಯಾನ್‌ 49 ರನ್‌ ನೀಡಿ ಆರು ವಿಕೆಟ್‌ ಕಿತ್ತು ಇಂಗ್ಲೆಂಡ್ ಪತನಕ್ಕೆ ಕಾರಣರಾಗಿದ್ದರು. ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದಿದೆ.
” ಟೆಸ್ಟ್‌ ಕ್ರಿಕೆಟ್‌ ಅನ್ನು ವೈಯಕ್ತಿಕವಾಗಿ ಹೆಚ್ಚು ನಂಬಿಕೆ ಇಡುತ್ತೇನೆ. ಏಕೆಂದರೆ, ತಪ್ಪನ್ನು ತಿದ್ದಿಕೊಳ್ಳಲು ಹೆಚ್ಚಿನ ಅವಕಾಶಗಳು ಸಿಗಲಿವೆ. ಆದರೆ, ಏಕದಿನ ಕ್ರಿಕೆಟ್‌ನಲ್ಲಿ ಕೇವಲ 10 ಓವರ್‌ ಮಾತ್ರವಿದ್ದು, ನಾವು ಎಸಗಿದ ತಪ್ಪನ್ನು ತಿದ್ದಿಕೊಳ್ಳಬೇಕಾದರೆ, ಮತ್ತೊಂದು ಪಂದ್ಯದವರೆಗೂ ಕಾಯಬೇಕು.”
ಜೊಫ್ರಾ ಆರ್ಚರ್‌, ಇಂಗ್ಲೆಂಡ್‌ ವೇಗಿ
“ಫ್ಲಾಟ್‌, ಗ್ರೀನ್‌, ಸೀಮಿಂಗ್‌, ಸ್ವಿಂಗ್‌, ಸ್ಲೋ, ಫಾಸ್ಟ್ ಸೇರಿದಂತೆ ಇಲ್ಲಿನ ಎಲ್ಲ ವಿಕೆಟ್‌ಗಳಿಗೂ ಅನುಗುಣವಾಗಿ ನಾವು ತಯಾರಿ ಮಾಡಿಕೊಂಡಿದ್ದೇವೆ. ಇದಕ್ಕೆ ಅನುಗುಣವಾಗಿ ನಮ್ಮ ಆಟಗಾರರು ಪ್ರದರ್ಶನ ತೋರಲಿದ್ದಾರೆ. ಈ ಬಾರಿ ಆಂಗ್ಲರ ನಾಡಲ್ಲಿ ಆ್ಯಶಸ್ ಟೆಸ್ಟ್ ಸರಣಿ ಗೆಲ್ಲಬೇಕು.”
ಮಿಚೆಲ್‌ ಸ್ಟಾರ್ಕ್‌, ಆಸ್ಟ್ರೇಲಿಯಾ ವೇಗಿ

loading...