ಸಾಮಾನ್ಯ ಓದುಗನಿಗೂ ಅರ್ಥವಾಗುವಂತೆ ಸಾಹಿತ್ಯ ರಚಿಸಿ

0
42

ಕನ್ನಡಮ್ಮ ಸುದ್ದಿ-ಧಾರವಾಡ : ಓದುಗನ ಹೃದಯವನ್ನು ಗೆಲ್ಲಬಲ್ಲ ದಿವ್ಯಶಕ್ತಿ ಅವರ ಕಾವ್ಯದಲ್ಲಿದೆ. ದೇಸಾಯಿಯವರು ಪರಂಪರೆಯನ್ನು ಪ್ರೀತಿಸುವ ಮಾನವೀಯತೆ ಬದುಕನ್ನು ರೂಪಿಸುವ ಶಕ್ತಿ ಅವರ ಕಾವ್ಯದಲ್ಲಿ ಕಾಣಬಹುದು ಎಂದು ಹಾರೋಗೇರಿ ಶ್ರೀ ವೃಷಭೇಂದ್ರ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ವ್ಹಿ. ಎಸ್. ಮಾಳಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಕವಿ ಜಿನದತ್ತ ದೇಸಾಯಿ ದತ್ತಿ ಕಾರ್ಯಕ್ರಮದಲ್ಲಿ ‘ಜಿನದತ್ತರ ಕಾವ್ಯ ವಿಶೇಷತೆ’ ಕುರಿತು ಮಾತನಾಡಿ, ಜಿನದತ್ತರ ಕಾವ್ಯದ ವಿಶೇಷತೆಯೆಂದರೆ ಶಬ್ದವೇದಿ ಶರಸಂಧಾನ. ಅವರದು ಮುಕ್ತಕ ಪ್ರತಿಭೆ, ಹೀಗಾಗಿ ಮುಕ್ತಕಗಳ ಮೂಲಕವೇ ಹೆಚ್ಚು ಆಪ್ತರಾಗಿದ್ದಾರೆ. ಸಹಜ ಮಾತನ್ನು ಕಾವ್ಯವಾಗಿಸುವ ಕೌಶಲ ದೇಸಾಯಿ ಅವರಲ್ಲಿ ಇದೆ. ಮಾತು ಮೃದುವಾಗಿದ್ದರು ಬಾಣದಂತೆ ನೇರವಾಗಿ ನಾಟುವಂತಹದ್ದು. ಅವರ ಭಾವದಲ್ಲಿ ದ್ವಂದ್ವವಿಲ್ಲ. ಶೈಲಿಯಲ್ಲಿ ಯಾಂತ್ರಿಕ ಕಸರತ್ತಿಲ್ಲ ಸಾಮಾನ್ಯ ಓದುಗನಿಗೂ ಅರ್ಥವಾಗುತ್ತದೆ ಎಂದರು.
ಕವಿ ಜಿನದತ್ತ ದೇಸಾಯಿ ಮಾತನಾಡಿ, ಕವಿಯಾದವರು ಸಾಮಾಜಿಕ ಬದ್ಧತೆ ಉಳ್ಳವರಾಗಿರಬೇಕು. ಬರಹದಲ್ಲಿ ಸಮನ್ವಯತೆ ಇರಬೇಕು. ನಮ್ಮ ಪರಂಪರೆಯನ್ನು ಪ್ರೀತಿಸಿದಾಗ ಮಾತ್ರ ಕಾವ್ಯಕ್ಕೆ ಒಂದು ಶಕ್ತಿ ಬರುತ್ತದೆ ಎಂದರು.
ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆವಹಿಸಿ ಮಾತನಾಡಿ, ದೇಸಾಯಿಯವರು ಸಂಘದ ಹಿರಿಮೆ, ಅವರು ರಚಿಸಿದ ಚುಟುಕುಗಳು ಮೌಲಿಕವಾಗಿವೆ. ಜಿನದತ್ತರು ಪಡೆದದ್ದಕ್ಕಿಂತ ಕಳೆದುಕೊಂಡಿದ್ದೇ ಜಾಸ್ತಿ. ಅವರೊಬ್ಬ ಸೂಕ್ಷ್ಮ ಸಂವೇದನೆಯುಳ್ಳ ಕವಿ ಆಗಿರುವರು ಎಂದರು.
ಗುರು ತಿಗಡಿ ನಿರೂಪಿಸಿದರು. ವೀರಣ್ಣ ಒಡ್ಡೀನ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಹಾಂತೇಶ ನರೇಗಲ್ ವಂದಿಸಿದರು.

loading...