ಸಾರ್ವಜನಿಕರ ದೂರುಗಳ ಬಗ್ಗೆ ಸ್ಪಂದಿಸಿ: ಮೇಘನ್ನವರ

0
44

ಕನ್ನಡಮ್ಮ ಸುದ್ದಿ-ಗುಳೇದಗುಡ್ಡ: ಸಾರ್ವಜನಿಕರಿಂದ ಬಂದ ದೂರಗಳ ಬಗ್ಗೆ ಯಾವ ರೀತಿ ಕ್ರಮಕೈಗೊಳ್ಳಲಾಗಿದೆ ಎಂದು ಪುರಸಭೆಯಲ್ಲಿ ಸರಿಯಾದ ದಾಖಲೆಗಳು ಇಲ್ಲ. ದೂರು ದಾಖಲಾದ ಬಗ್ಗೆ ವಿವರಗಳು ಇವೆ ಆದರೆ ಅವುಗಳ ಬಗ್ಗೆ ಏನು ಕ್ರಮ ಜರುಗಿಸಲಾಗಿದೆ ಎಂಬುದು ದಾಖಲೆಗಳು ಇಲ್ಲ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ತುರ್ತುಗಿ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಪಿ.ಎ. ಮೇಘನ್ನವರ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಪುರಸಭೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಸಾರ್ವಜನಿಕರಿಂದ ದೂರುಗಳು ಬಂದಾಗ ದೂರು ದಾಖಲು ಮಾಡಿಕೊಳ್ಳುವುದು ಮಾತ್ರವಲ್ಲ, ಅವರ ದೂರಿಗೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ನೀಡಿದ ಬಗ್ಗೆ ದಾಖಲೆ ಇಡಬೇಕು. ಪುರಸಭೆಯಲ್ಲಿ ಸರಿಯಾಗಿ ಕಡತಗಳನ್ನು ಇಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಪುರಸಭೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ನಗರಾಭಿವೃದ್ಧಿ ಕೋಶಾಧಿಕಾರಿಗಳು ಪುರಸಭೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದರು.
ನಗರದ ಸ್ವಚ್ಛತೆಗೆ ವಿವಿಧ ಸಂಘಸಂಸ್ಥೆಗಳ ಸಹಕಾರ ಪಡೆದುಕೊಂಡು ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಸ್ವಚ್ಛತೆಯ ಬಗ್ಗೆ ಜಾಥಾಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.
ಸಾರ್ವಜನಿಕರಿಗೆ ಕಸದಬುಟ್ಟಿಗಳನ್ನು ಖರೀಧಿಸಿ ಒಂದು ವರ್ಷವಾದರೂ ನೀಡದೇ ಇರುವ ಕುರಿತು, ಕೂಡಲೇ ಸಾರ್ವಜನಿಕರಿಗೆ ಮನೆಗೆರಡು ಕಸದಬುಟ್ಟಿಗಳನ್ನು ವಿತರಿಸುವಂತೆ ತಿಳಿಸಿದರು. ಬಳಿಕ ಅವರು ನೂತನ ತಾಲೂಕು ಕಚೇರಿಗಳು ಪ್ರಾರಂಭವಾಗುವ ಇಲ್ಲಿನ ನೀರಾವರಿ ಇಲಾಖೆಗಳ ಕಟ್ಟಡಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಎಇಇ ಸುಭಾಸ ಗೌಡರ, ಮುಖ್ಯಾಧಿಕಾರಿ ಏಸು ಬೆಂಗಳೂರು, ಪುರಸಭೆ ಅಧ್ಯಕ್ಷ ಶಿವಕುಮಾರ ಹಾದಿಮನಿ, ಹೊಳಬಸು ಶೆಟ್ಟರ, ಜೆ.ಇ. ಎಸ್‌.ಡಿ. ಜಾಧವ, ಕರವೇ ಅಧ್ಯಕ್ಷ ರವಿ ಅಂಗಡಿ, ಪುರಸಭೆ ಮ್ಯಾನೇಜರ ಯು.ಜಿ. ವರದಪ್ಪನವರ ಹಾಗೂ ಸಿಬ್ಬಂದಿ ಇದ್ದರು.

loading...