ಸಿಎಂ ಅವರು ಈ ಬಾರಿಯ ಬಜೆಟ್‍ನಲ್ಲಿ ರೈತರ ಸಾಲಮನ್ನಾ ಘೋಷಿಸಲಿ: ಮಂಜುನಾಥ

0
58

ಕನ್ನಡಮ್ಮ ಸುದ್ದಿ-ರಾಣೇಬೆನ್ನೂರ : ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡುವ ವಿಚಾರವಾಗಿ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತಿರುವುದು ಸರಿಯಲ್ಲ. ಸತತ ಬರಗಾಲದಿಂದಾಗಿ ರೈತರ ಜೀವನ ತತ್ತರಿಸಿ ಹೋಗಿದ್ದು, ಸಿಎಂ ಸಿದ್ದರಾಮಯ್ಯನವರು ಈ ಬಾರಿಯ ಬಜೆಟ್‍ನಲ್ಲಿ ರೈತರ ಸಾಲಮನ್ನಾ ಘೋಷಿಸಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಒತ್ತಾಯಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ ಬಣ)ದ ವತಿಯಿಂದ ನಗರದ ಮಿನಿವಿಧಾನ ಸೌಧದ ಎದುರು ಸೋಮವಾರ ಏರ್ಪಡಿಸಿದ್ದ ರೈತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಬೆನ್ನೆಲು ಆಗಿರುವ ಅನ್ನದಾತರ ಪ್ರಮುಖ ಬೇಡಿಕೆಗಳಾದ ರೈತರ ಸಾಲಮನ್ನಾ, ರೈತರ ಎತ್ತುಗಳು ಮೃತಪಟ್ಟಾಗ 50ಸಾವಿರ ರೂ. ಪರಿಹಾರ ನೀಡಬೇಕು. ರಾಷ್ಟ್ರೀಕೃತ ಮತ್ತು ಖಾಸಗಿ ಫೈನಾನ್ಸ್‍ಗಳಿಂದ ರೈತರ ಸಾಲ ವಸುಲಾತಿ ಕಿರುಕುಳ ತಡೆ, ಬಗರಹುಕುಂ ಸಾಗುವಳಿ ಹಾಗೂ ಅರಣ್ಯ ಸಾಗುವಳಿ ಮಾಡಿದ ರೈತರಿಗೆ ಹಕ್ಕು ಪತ್ರ ವಿತರಣೆಯಲ್ಲಿ ವಿಳಂಬ ನೀತಿ ಸೇರಿದಂತೆ ರೈತರ ಹಲವಾರು ಸಮಸ್ಯೆಗಳಿಗೆ ಕೂಡಲೇ ಸ್ಪಂಧಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ವಿರೋಧಿ ನೀತಿ ಅನುಸರಿಸುತ್ತಿದ್ದೇವೆ. ರೈತರ ತಮ್ಮ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಹೋರಾಟ ಮಾಡಿ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಇದರ ಪರಿಣಾಮವನ್ನು ಸರ್ಕಾರಗಳು ಎದುರಿಸಬೇಕಾಗುತ್ತದೆ.

ಕಾರ್ಯಕ್ರಮಕ್ಕೂ ಮುನ್ನ ನಗರದ ಕೆಇಬಿ ಗಣೇಶ ದೇವಸ್ಥಾನದಿಂದ ಪಿ.ಬಿ. ರಸ್ತೆ ಮೂಲಕ ಮಿನಿವಿಧಾನ ಸೌಧದವರೆಗೆ ರೈತರ ಮೆರವಣಿಗೆ ನಡೆಸಿದರು.
ರೈತ ಮುಖಂಡರಾದ ಬಸಪ್ಪ ಓಲೇಕಾರ, ಶಂಕ್ರಪ್ಪ ಲಮಾಣಿ, ಮಲ್ಲೇಶಪ್ಪ ಎಸ್.ಎಚ್, ಕಾಳಪ್ಪ ಲಮಾಣಿ, ಪರಮೇಶ ಚಿನ್ನಣ್ಣನವರ, ಅಜ್ಜಪ್ಪ ರಟ್ಟಿಹಳ್ಳಿ ಸೇರಿದಂತೆ ನೂರಾರು ರೈತರು ಸಮಾವೇಶದಲ್ಲಿ ಭಾಹವಹಿಸಿದ್ದರು.

loading...