ಸುಡಾನ್‍ನಲ್ಲಿ ಹಿಂಸೆ ಕೊನೆಗಾಣಬೇಕು: ಯೂನಿಸೆಫ್‍ ಮುಖ್ಯಸ್ಥರ ಕರೆ

0
3

ವಿಶ್ವಸಂಸ್ಥೆ, -ಆಫ್ರಿಕಾದ ಸೂಡಾನ್‍ನಲ್ಲಿ ಈ ತಿಂಗಳ ಆರಂಭದಿಂದ ಪ್ರತಿಭಟನಾಕಾರರ ಮೇಲೆ ಸೇನೆ ನಡೆಸಿದ ಹಿಂಸಾಚಾರ ಘಟನೆಗಳಲ್ಲಿ ಇದುವರೆಗೆ ಕನಿಷ್ಠ 19 ಮಕ್ಕಳು ಮೃತಪಟ್ಟು, ಇತರ 49 ಮಂದಿ ಗಾಯಗೊಂಡಿದ್ದಾರೆ. ದೇಶದಲ್ಲಿ ಮುಂದುವರಿದ ಹಿಂಸೆ ಮತ್ತು ಅಶಾಂತಿಯಿಂದ ಮಕ್ಕಳು ಮತ್ತು ಯುವಜನರು ನಲುಗಿದ್ದಾರೆ ಎಂದು ವಿಶ್ವಸಂಸ್ಥೆ ಮಕ್ಕಳ ನಿಧಿ (ಯೂನಿಸೆಫ್‍) ಅಧ್ಯಕ್ಷರು ಕಳವಳ ವ್ಯಕ್ತಪಡಿಸಿದ್ದಾರೆ.
‘ಮಕ್ಕಳನ್ನು ಬಂಧನಕ್ಕೊಳಪಡಿಸಿ ಲೈಂಗಿಕವಾಗಿ ಶೋಷಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ, ಹೋರಾಟಕ್ಕಾಗಿ ಮಕ್ಕಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.’ ಎಂದು ಯೂನಿಸೆಫ್‍ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟ್ಟ ಫೋರ್ ಹೇಳಿದ್ದಾರೆ.

ಮೂರು ದಶಕಗಳ ಕಾಲ ಅಧಿಕಾರ ನಡೆಸಿದ್ದ ಅಧ್ಯಕ್ಷ ಒಮರ್ ಅಲ್-ಬಶೀರ್ ಅವರನ್ನು ಕಳೆದ ಏಪ್ರಿಲ್‍ನಲ್ಲಿ ಸೇನೆ ಪದಚ್ಯುತಗೊಳಿಸಿ, ಆಡಳಿತ ಕೈವಶಮಾಡಿಕೊಂಡಿತ್ತು. ಅಂದಿನಿಂದ ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ಒತ್ತಾಯಿಸಿ ನಾಗರಿಕರು ಸೇನೆ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಜೂನ್ 3 ರಂದು ರಾಜಧಾನಿ ಖರ್ಟೋಮ್‍ನಲ್ಲಿ ಭದ್ರತಾ ಪಡೆಗಳು ಮತ್ತು ಅರೆಸೇನಾ ಪಡೆಗಳು ಪ್ರಜಾಪ್ರಭುತ್ವ ಪರ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದವು. ಇದರಿಂದ ಹಲವರು ಸತ್ತು, ಅನೇಕ ಮಂದಿ ಗಾಯಗೊಂಡಿದ್ದರು.

loading...