ಸೊಲೈಮಾನಿ ಹತ್ಯೆಯ ನಂತರ ಮಾತುಕತೆಗೆ ಹೆಚ್ಚು ಆಸಕ್ತಿ ತೋರಿರುವ ಇರಾನ್ : ರಾಬರ್ಟ್ ಒ’ಬ್ರಿಯೆನ್

0
6

ವಾಷಿಂಗ್ಟನ್:- ಇರಾನ್ ಕಮಾಂಡರ್ ಕಾಸೆಮ್ ಸೊಲೈಮಾನಿಯ ಹತ್ಯೆಯ ನಂತರ ಟೆಹ್ರಾನ್ ಮಾತುಕತೆಗೆ ಹೆಚ್ಚು ಆಸಕ್ತಿ ತೋರಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒ’ಬ್ರಿಯೆನ್ ಅಭಿಪ್ರಾಯಪಟ್ಟಿದ್ದಾರೆ.

“ಇರಾನಿಯನ್ನರೊಂದಿಗೆ ಕುಳಿತು ಮಾತುಕತೆ ನಡೆಸಿ ಒಪ್ಪಂದಕ್ಕೆ ಬರುವ ಸಾಧ್ಯತೆಗಳು ಗಮನಾರ್ಹವಾಗಿ ಸುಧಾರಿಸಿದೆ. ಏಕೆಂದರೆ ಸೊಲೈಮಾನಿ ಯುದ್ಧಭೂಮಿಯಿಂದ ಹೊರಗುಳಿದಿದ್ದಾನೆ” ಎಂದು ಓ’ಬ್ರಿಯೆನ್ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಜನವರಿ 3 ರ ರಾತ್ರಿ, ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಮೆರಿಕ ಕಾರ್ಯಾಚರಣೆ ನಡೆಸಿ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನ ಕಮಾಂಡರ್ ಸೊಲೈಮಾನಿ ಮತ್ತು ಇರಾಕ್ ಶಿಯಾ ನಾಯಕ ಅಬು ಮಹ್ದಿ ಮುಹಂದಿಸ್ ಸೇರಿದಂತೆ ಇತರರನ್ನು ಕೊಂದಿತು. ಡಿಸೆಂಬರ್ 31 ರಂದು ಬಾಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಲು ಈ ಇಬ್ಬರೂ ಕಮಾಂಡರ್‌ಗಳು ಸಂಚು ನಡೆಸಿದ್ದರು ಎಂದು ಟ್ರಂಪ್ ಆರೋಪಿಸಿದ್ದಾರೆ.

ಅಮೆರಿಕದ ಪಡೆಗಳಿಗೆ ಆತಿಥ್ಯ ನೀಡಿರುವ ಇರಾಕಿ ನೆಲೆಗಳ ಮೇಲೆ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಇರಾನ್ ಬುಧವಾರ ಪ್ರತೀಕಾರ ತೀರಿಸಿಕೊಂಡಿತು. ಈ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ವಾಷಿಂಗ್ಟನ್ ತಿಳಿಸಿದೆ. ಇರಾನ್‌ ನ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಅಮೆರಿಕದ ಆಡಳಿತ ದಾಳಿಯಲ್ಲಿ ಭಾಗಿಯಾಗಿರುವ ಎಂಟು ಹಿರಿಯ ಇರಾನಿನ ಅಧಿಕಾರಿಗಳನ್ನು ಮತ್ತು 17 ಇರಾನಿನ ಕಬ್ಬಿಣ ಮತ್ತು ಉಕ್ಕಿನ ಕಂಪನಿಗಳ ಮೇಲೆ ಶುಕ್ರವಾರ ಹೊಸ ನಿರ್ಬಂಧಗಳನ್ನು ಘೋಷಿಸಿತು.

loading...