ಸ್ಕೌಟ್ ಮೂಲಕ ಸಾಮಾಜಿಕ ಜವಾಬ್ದಾರಿಗಳು ಬಲಗೊಳ್ಳಲಿ: ಬಡಿಗೇರ

0
11

ಬೆಳಗಾವಿ: ಕಾಳಜಿಯಂತಹ ಭಾವನೆಗಳು ಜನಾಂಗದಿಂದ ಜನಾಂಗಕ್ಕೆ ವರ್ಗಾವಣೆ ಗೊಂಡಾಗ ಸಾಮಾಜಿಕ ಜವಾಬ್ದಾರಿಗಳ ಅರಿವು ಮುಂದಿನ ಪೀಳಿಗೆಯ ಮನವನ್ನು ತಟ್ಟುವದರಲ್ಲಿ ಸಂದೇಹವಿಲ್ಲ ಎಂದು ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಡಿ. ಬಡಿಗೇರ ಹೇಳಿದರು.

ಅವರು ಬೆಳಗಾವಿ ಟಿಳಕವಾಡಿಯ ರಾಯ್ ರಸ್ತೆಯ ಭಾರತ ಸ್ಕೌಟ್ ಮತ್ತು ಗೈಡ್ಸ ಕಚೇರಿ ಸಭಾಗೃಹದಲ್ಲಿ ಪುನಶ್ಚೇತನ – ಸ್ಕೌಟರ್ ಮತ್ತು ಗೈಡರ್ ಸಮಾವೇಶ ಶಿಬಿರ ಹಾಗೂ ವಾರ್ಷಿಕ ಕ್ರಿಯಾ ಯೋಜನೆಯ ಪುಸ್ತಕ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಎಲ್ಲ ಸ್ಕೌಟರಗಳು ಗಿಡ ಮರಗಳನ್ನು ನೆಟ್ಟು ಅವನ್ನು ಪೋಷಿಸುವ ಹೊಣೆ ಹೊರಬೇಕು ಇಲ್ಲವಾದರೆ ಮನುಜ ಕುಲ ನಾಶವಾದರೂ ಅಚ್ಚರಿಯಿಲ್ಲ ಎಂದರು.

ಇನ್ನೋರ್ವ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿ ಡಾ.ರಾಜಶೇಖರ ಚಳಗೇರಿ ಆಗಮಿಸಿ, ಸ್ಕೌಟ ಮತ್ತು ಗೈಡ್ಸ ಮೂಲಕ ಮಕ್ಕಳಲ್ಲಿ ಶಿಸ್ತು,ಮಾನವೀಯ ಮೌಲ್ಯ, ಒಗ್ಗಟ್ಟು ಬೆಳೆಸಬೇಕಿದೆ. ಒಬ್ಬರು ಮತ್ತೊಬ್ಬರಿಗೆ ತಿಳಿಸಿ ಸ್ಕೌಟ್ ವಿಭಾಗವನ್ನು ಉನ್ನತಕ್ಕೆ ಒಯ್ಯಬೇಕು ಎಂದರು. ಸಹಾಯಕ ನಿರ್ದೇಶಕ ಪ್ರಕಾಶ ಬೂತಾಳೆ ಮಾತನಾಡಿ ನಾವು ಸ್ವ ಅವಲೋಕನದ ಮೂಲಕ ಬೆಳವಣಿಗೆ ಹೊಂದಬೇಕು. ಪ್ರೇರೆಪಣೆಯೇ ಮಗುವಿನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಅಂದಾಗ ಸಾಂಘಿಕವಾಗಿ ದೇಶದ ಕಾಳಜಿ ಬಗ್ಗೆ ಕಲ್ಪನೆ ಒಡಮೂಡಲು ಸಾಧ್ಯ. ಈ ಬಗ್ಗೆ ಶಿಕ್ಷಕರು ಅವಿರತ ಶ್ರಮ ವಹಿಸಬೇಕು ಎಂದರು.

ಜಿಲ್ಲಾ ಸಲಹಾ ಸಮಿತಿಯ ಸದಸ್ಯ ಟಿ.ಡಿ.ಕಾಂಬೋಜಿ, ಜಿಲ್ಲಾ ಸಂಘಟಕರುಗಳಾದ ವಿಠ್ಠಲ ಎಸ್.ಬಿ. ಡಿ.ಬಿ.ಅತ್ತಾರ, ಸ್ಥಳೀಯ ಸಂಸ್ಥೆ ಖಜಾಂಚಿ ಬಾಬು ಸೊಗಲನ್ನವರ, ಸ್ಕೌಟರ್‌ಗಳಾದ ಶಿವರಾಯ ಏಳುಕೋಟಿ,ಮಹೇಶ ಪೂಜಾರ್ ಹಾಜರಿದ್ದು ಕಾರ್ಯಕ್ರಮ ಸಂಘಟಿಸಿ ಯಶಸ್ವಿಗೊಳಿಸಿದರು. ಜಿಲ್ಲಾ ಕಾರ್ಯದರ್ಶಿ ಎಸ್.ಎಂ ನದಾಫ ಸ್ವಾಗತಿಸಿ ವಂದಿಸಿದರು.

loading...