ಸ್ಮೃತಿ ಇರಾನಿ ಬೆಂಬಲಿಗನ ಹತ್ಯೆ: ಅಮೇಥಿ ಉದ್ವಿಗ್ನ

0
7

ಅಮೇಥಿ:  ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಬೆಂಬಲಿಗನೊಬ್ಬನನ್ನು ಶನಿವಾರ ರಾತ್ರಿ ಇಲ್ಲಿನ ಜಮೊ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆಯ ಬಳಿಕ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಸಿಆರ್‌ಪಿಎಫ್ ಮತ್ತು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಅಮೇಥಿ ಕ್ಷೇತ್ರದ ಬಿಜೆಪಿ ಸಂಸದೆ ಸ್ಮೃತಿ ಇರಾನಿ ಇಂದು ಮಧ್ಯಾಹ್ನ ಇಲ್ಲಿಗೆ ಆಗಮಿಸಲಿದ್ದಾರೆ. ಸಾವನ್ನಪ್ಪಿದ ನಾಯಕನ ಮನೆಗೆ ಅವರು ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬರೌಲಿಯಾ ಗ್ರಾಮದ ಮಾಜಿ ಮುಖ್ಯಸ್ಥ (ಪ್ರಧಾನ್) ಸುರೇಂದ್ರ ಸಿಂಗ್ ಅವರನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅವರ ಮನೆಯಲ್ಲೇ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಯುಎನ್‌ಐಗೆ ತಿಳಿಸಿದ್ದಾರೆ.
ತಕ್ಷಣ ಅವರನ್ನು ಲಕ್ನೋದ ಆಸ್ಪತ್ರೆಯೊಂದಕ್ಕೆ ಕೊಂಡೊಯ್ಯಲಾಯಿತಾದರೂ ಅವರು ಅಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಲೋಕಸಭಾ ಚುನಾವಣೆಯಲ್ಲಿ ಸುರೇಂದ್ರ ಅವರು ಸ್ಮೃತಿ ಇರಾನಿ ಪರ ಸಕ್ರಿಯವಾಗಿ ಪ್ರಚಾರ ನಡೆಸಿದ್ದರು. ಈ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅವರು 55,000 ಮತಗಳ ಅಂತರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎದುರು ಜಯಗಳಿಸಿದ್ದರು.

ಇರಾನಿ ಅವರ ಉಪಕ್ರಮದಿಂದಾಗಿ ದಿವಂಗತ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಬರೌಲಿ ಗ್ರಾಮವನ್ನು ದತ್ತು ಪಡೆದಿದ್ದರು. ಆರೋಪಿಗಳಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.
ಆಸ್ತಿಯ ವಿವಾದದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಮೃತ ಸುರೇಂದ್ರ ಸಿಂಗ್ ಅವರು, ಮೌನಿ ಬಾಬಾ ಅವರ ನೇತೃತ್ವದ ಸಗ್ರಾ ಆಶ್ರಮದ ಟ್ರಸ್ಟಿ ಆಗಿದ್ದರು. ಆಶ್ರಮದ ಆಸ್ತಿಯನ್ನು ಮೌನಿ ಬಾಬಾ ಅವರ ಸಹೋದರನಿಗೆ ಅಕ್ರಮವಾಗಿ ಮಾರಾಟ ಮಾಡುವುದಕ್ಕೆ ಸುರೇಂದ್ರ ವಿರೋಧ ವ್ಯಕ್ತಪಡಿಸಿದ್ದರು. ಇದೇ ಅವರ ಕೊಲೆಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.

ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದಕ್ಕಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಇದುವರೆಗೆ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

loading...