ಸ್ವಾತಂತ್ರ್ಯೋತ್ಸವಕ್ಕೆ ಸಜ್ಜುಗೊಂಡ ಮಾಣಿಕ್ ಷಾ ಪರೇಡ್ ಮೈದಾನ: ಸಕಲ ಸಿದ್ಧತೆ

0
8

ಬೆಂಗಳೂರು- ಸ್ವಾತಂತ್ರ್ಯೋತ್ಸವದ ಪ್ರಧಾನ ಸಮಾರಂಭ ನಡೆಯುವ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಮಂಗಳವಾರ ಮೈದಾನದ ಸಿದ್ಧತೆ ಮತ್ತು ಪೂರ್ವಭಾವಿ ತಾಲೀಮನ್ನು ವೀಕ್ಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಕಾಲ ಪೂರ್ವಭಾವಿ ತಾಲೀಮು ನಡೆಸಲಾಗಿದ್ದು, ಇಂದು ಅಂತ್ಯಗೊಂಡಿದೆ. ಸಮಾರಂಭಕ್ಕಾಗಿ ಮೈದಾನವನ್ನು ಸಿದ್ಧಗೊಳಿಸಲಾಗಿದೆ. ಶಾಮಿಯಾನ, ವೇದಿಕೆಯ ನಿರ್ಮಾಣ, ಬ್ಯಾರಿಕೇಡಿಂಗ್, ಆಸನಗಳ ವ್ಯವಸ್ಥೆ ಮಾಡಲಾಗಿದೆ. ವೇದಿಕೆಗೆ ಅಲಂಕಾರಿಕಾ ಬ್ರಾಸ್ ಪರಿಕರಗಳನ್ನು ಅಳವಡಿಸಲಾಗಿದೆ, ಮಳೆ ಬಂದರೂ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಗುರುವಾರ ಬೆಳಗ್ಗೆ 8.58ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕ್ರೀಡಾಂಗಣಕ್ಕೆ ಆಗಮಿಸಲಿದ್ದು, ಆಗ ರಕ್ಷಣಾ ಸೇವೆಯ ಮೂವರು ಹಿರಿಯ ಅಧಿಕಾರಿಗಳನ್ನು ಮುಖ್ಯಮಂತ್ರಿಗಳಿಗೆ ಪರಿಚಯಿಸಲಾಗುತ್ತದೆ. ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದು, ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ನಲ್ಲಿ ಪುಷ್ಪವೃಷ್ಟಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಬಳಿಕ ಮುಖ್ಯಮಂತ್ರಿ ಪರೇಡ್ ವೀಕ್ಷಿಸಿ, ಗೌರವ ರಕ್ಷೆ ಸ್ವೀಕರಿಸುತ್ತಾರೆ. ಬಳಿಕ ಅವರು ಸ್ವಾತಂತ್ರ್ಯೋತ್ಸವದ ಸಂದೇಶ ನೀಡುತ್ತಾರೆ. ನಂತರ ಜವಾಹರ್ ನವೋದಯ ಶಾಲಾ ಮಕ್ಕಳಿಂದ ರಾಷ್ಟ್ರಗೀತೆ ಮೊಳಗಲಿದೆ ಎಂದು ಅವರು ಮಾಹಿತಿ ನೀಡಿದರು.
ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪೂರ್ವಭಾವಿ ತಾಲೀಮು ಮೂರು ದಿನಗಳ ಕಾಲ ನಡೆದಿದೆ. ಪಥಸಂಚಲನದಲ್ಲಿ ಕೆಎಸ್‍ಆರ್ ಪಿ, ಸ್ಕೌಟ್ಸ್, ಗೈಡ್ಸ್, ಎನ್‍ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ಮಕ್ಕಳನ್ನು ಒಳಗೊಂಡ ಕವಾಯತು ಮತ್ತು ಬ್ಯಾಂಡ್‍ನ ಒಟ್ಟು 34 ತುಕಡಿಗಳಲ್ಲಿ ಸುಮಾರು 1130 ಮಂದಿ ಭಾಗವಹಿಸಲಿದ್ದಾರೆ. ಶಾಲಾ ಮಕ್ಕಳ ಒಟ್ಟು 2 ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು 1250 ಮಕ್ಕಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಮುಖ್ಯಮಂತ್ರಿ ವಿತೇತರಿಗೆ ಬಹುಮಾನ ವಿತರಿಸಲಿದ್ದಾರೆ.
ದೊಡ್ಡವಾಡದ ಮೃತ್ಯುಂಜಯ ತಂಡದಿಂದ ನಾಡಗೀತೆ ಮತ್ತು ರೈತಗೀತೆ ನಡೆಯಲಿದೆ. ಬೆಂಗಳೂರು ದಕ್ಷಿಣ ವಲಯದ ಉತ್ತರಹಳ್ಳಿಯ ಸರ್ಕಾರಿ ಪ್ರೌಢಶಾಲೆಯ 650 ವಿದ್ಯಾರ್ಥಿಗಳಿಂದ “ಭಾರತಾಂಬೆಯ ಮಡಿಲಿನ ಮಕ್ಕಳು” ಎಂಬ ನೃತ್ಯರೂಪಕ, ಹೇರೋಹಳ್ಳಿಯ ಬಿಬಿಎಂಪಿ ಶಾಲೆಯ 600 ವಿದ್ಯಾರ್ಥಿಗಳಿಂದ “ಜಲಿಯನ್ ವಾಲಾಬಾಗ್ ಹತ್ಯಾಕಾಂಡ 1919” ಕುರಿತ ನೃತ್ಯ ರೂಪಕ, ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್‍ನ 26 ಸದಸ್ಯರಿಂದ ಜಿಮ್ನಾಸ್ಟಿಕ್, ಮಿಲ್ಲಿಂಗ್ ಟನ್‍ನ ಮದ್ರಾಸ್ ರೆಜಿಮೆಂಟಲ್ ಸೆಂಟರ್ ನ 29 ಸದಸ್ಯರಿಂದ ಕಲಾರಿಯಪಟ್ಟು ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಈ ಬಾರಿಯ ಪರೇಡ್‍ನಲ್ಲಿ ಗೋವಾ ಪೊಲೀಸ್, ಬಿಎಸ್‍ಎಫ್, ಸಿಆರ್ ಪಿಎಫ್, ಕೆಸ್‍ಆರ್ ಪಿ ಮತ್ತು ಇತರ ತಂಡಗಳು ಭಾಗವಹಿಸಲಿವೆ. ಶ್ವಾಸ ದಳ ಕೂಡ ಹೆಜ್ಜೆ ಹಾಕಲಿದೆ, ಮೈದಾನದ ಹೊರಗೆ ಮತ್ತು ಒಳಭಾಗದಲ್ಲಿ ಎಲ್ಲಾ ರೀತಿಯ ಭದ್ರತೆ ಒದಗಿಸಲಾಗಿದೆ. ಈ ವರ್ಷ ಎಲ್ಲಾ ರೈಲು ನಿಲ್ದಾಣ, ವಿಮಾನ ನಿಲ್ದಾಣ, ಬೃಹತ್ ಕಟ್ಟಡಗಳು, ಪಿಜಿ ಕಟ್ಟಡಗಳಿಗೂ ರಕ್ಷಣೆ ಒದಗಿಸಲಾಗಿದೆ. ಮೈದಾನಕ್ಕೆ ಒಳಪ್ರವೇಶಿಸುವ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಲಾಗುವುದು. ಒಟ್ಟು 1906 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಮೈದಾನಕ್ಕೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮೈದಾನದಲ್ಲಿ ಭದ್ರತೆ ಮತ್ತು ಸುರಕ್ಷತೆಗಾಗಿ 50 ಸಿಸಿ ಕ್ಯಾಮರಾ, 4 ಬ್ಯಾಗೇಜ್ ಸ್ಕ್ಯಾನರ್ ಮತ್ತು ವ್ಯವಸ್ಥಿತ ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಯಾವುದೇ ಆಕಸ್ಮಿಕ ವಿಪತ್ತು ಸಂಭವಿಸಿದಲ್ಲಿ ತಕ್ಷಣ ಪ್ರತಿಕ್ರಿಯಿಸಲು ಅಗತ್ಯವಿರು ವಷ್ಟು ಆಂಬುಲೆನ್ಸ್, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಗರದ ಹಲವು ಆಸ್ಪತ್ರೆಗಳನ್ನು ಗುರುತಿಸಿ ಸಾಕಷ್ಟು ಸಂಖ್ಯೆಯಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ ಎಂದು ಅವರು ತಿಳಿಸಿದರು.
ಆಕಸ್ಮಿಕ ಬೆಂಕಿ ಅವಘಡಗಳನ್ನು ನಿಭಾಯಿಸಲು ಅಗ್ನಿಶಾಮಕ ವಾಹನಗಳೊಂದಿಗೆ ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಾರ್ಯಕ್ರಮ ವೀಕ್ಷಿಸಲು 10 ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಜಿ2 ಪ್ರವೇಶ ದ್ವಾರದಲ್ಲಿ ಅತಿ ಗಣ್ಯ ವ್ಯಕ್ತಿಗಳಿಗಾಗಿ 1200 ಆಸನ, ಜಿ1 ಪ್ರವೇಶ ದ್ವಾರದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಇಲಾಖೆಯ ಅಧಿಕಾರಿಗಳು, ಪತ್ರಿಕಾ ಪ್ರತಿನಿಧಿಗಳಿಗಾಗಿ 750 ಆಸನಗಳು, ಜಿ3 ಪ್ರವೇಶ ದ್ವಾರದಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ಬಿಎಸ್‍ಎಫ್ ಅಧಿಕಾರಿಗಳಿಗಾಗಿ 2500 ಆಸನ ಹಾಗೂ ಜಿ4 ಪ್ರವೇಶ ದ್ವಾರದಲ್ಲಿ ಸಾರ್ವಜನಿಕರಿಗಾಗಿ 7000 ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸಮಾರಂಭಕ್ಕೆ ಆಗಮಿಸುವ ಸಾರ್ವಜನಿಕರು ಕಾರ್ಯಕ್ರಮ ಪ್ರಾರಂಭಕ್ಕೆ ಒಂದು ಗಂಟೆ ಮುಂಚಿತವಾಗಿ ಆಗಮಿಸಿ ಆಸೀನರಾಗಬೇಕು, ಪ್ರತಿಯೊಬ್ಬರೂ ತಮ್ಮೊಂದಿಗೆ ಒಂದು ಗುರುತಿನ ಚೀಟಿ ತರಬೇಕು, ಬಿಬಿಎಂಪಿ ವತಿಯಿಂದ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಯಾವುದೇ ರೀತಿಯ ಅಮೂಲ್ಯವಾದ ಲಗೇಜು, ಮತ್ತು ಇತರ ವಸ್ತುಗಳನ್ನು ತರುವಂತಿಲ್ಲ. ಯಾವುದಾದರೂ ಅನುಮಾನಾಸ್ಪದ ವಸ್ತುಗಳು ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು, ಸಿಗರೇಟು, ಬೆಂಕಿ ಪೆಟ್ಟಿಗೆ, ಕರವಸ್ತ್ರ, ಬಣ್ಣದ ದ್ರಾವಣ, ವೀಡಿಯೋ ಮತ್ತು ಸ್ಟಿಲ್ ಕ್ಯಾಮರಾ, ನೀರಿನ ಬಾಟಲಿ, ಕ್ಯಾನ್, ಶಸ್ತ್ರಾಸ್ತ್ರ, ಹರಿತವಾದ ವಸ್ತು, ಚಾಕು, ಚೂರಿ, ಕಪ್ಪು ಕರವಸ್ತ್ರ, ತಿಂಡಿ ತಿನಿಸು, ಮದ್ಯದ ಬಾಟಲ್‍, ಮಾದವ ವಸ್ತು, ಬಾವುಟ, ಪಟಾಕಿ, ಸ್ಫೋಟಕ ವಸ್ತುಗಳನ್ನು ತರುವುದು ನಿಷಿದ್ಧವಾಗಿದೆ ಎಂದು ಅವರು ತಿಳಿಸಿದರು.

loading...