ಹಣ ಹಿಂಪಡೆದುಕೊಳ್ಳುವಂತೆ ಬ್ಯಾಂಕ್‌ಗಳಿಗೆ ಪ್ರಧಾನಿ ನಿರ್ದೇಶನ ನೀಡಲಿ: ವಿಜಯ್ ಮಲ್ಯ

0
3

ನವದೆಹಲಿ: ದೇಶದಿಂದ ಪಲಾಯನವಾಗಿರುವ ಉದ್ಯಮಿ ವಿಜಯ ಮಲ್ಯ ಅವರು ಇದೀಗ ಹೊಸ ವರಸೆ ಆರಂಭಿಸಿದ್ದು, ತಾವು ನೀಡಿದ ಹಣವನ್ನು ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಏಕೆ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
“ ನಾನು ನೀಡಿದ ಹಣವನ್ನು ತೆಗೆದುಕೊಳ್ಳುವಂತೆ ಪ್ರಧಾನಿಯವರು ಏಕೆ ತಮ್ಮ ಬ್ಯಾಂಕ್‌ಗಳಿಗೆ ಸೂಚಿಸುತ್ತಿಲ್ಲ. ಹೀಗೆ ಮಾಡಿದರೆ ಕಿಂಗ್‌ಪಿಶರ್‌ಗೆ ನೀಡಿರುವ ಎಲ್ಲ ಸಾರ್ವಜನಿಕ ಹಣವನ್ನು ಮರುಪಾವತಿಸಲು ಸಾಧ್ಯವಾಗುತ್ತದೆ” ಎಂದು ಮಲ್ಯ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.
ಇಂಗ್ಲೆಂಡ್‌ನಲ್ಲಿರುವ ವಿಜಯ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಯು.ಕೆ.ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಈ ಸಂಬಂಧದ ಕಾನೂನು ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ ಮಲ್ಯ ಈ ಹೇಳಿಕೆ ನೀಡಿದ್ದಾರೆ.
“ಪ್ರಧಾನಿಯವರು ಸಂಸತ್‌ನಲ್ಲಿ ನಿನ್ನೆ ಮಾಡಿದ ಭಾಷಣ ನನ್ನ ಗಮನಕ್ಕೆ ಬಂತು. ಖಂಡಿತವಾಗಿಯೂ ಅವರು ಒಬ್ಬ ನಿರರ್ಗಳ ಭಾಷಣಕಾರ. ಹೆಸರು ಹೇಳದೆ, ವ್ಯಕ್ತಿಯೊಬ್ಬ 9000 ಕೋಟಿ ರೂ.ಯೊಂದಿಗೆ ಓಡಿ ಹೋಗಿದ್ದಾನೆ ಎಂದು ಹೇಳಿರುವುದು ಕೂಡ ನನ್ನ ಗಮನಕ್ಕೆ ಬಂದಿದೆ. ಮಾಧ್ಯಮಗಳ ನಿರೂಪಣೆಯಂತೆ ಆ ವ್ಯಕ್ತಿ ನಾನು ಎಂಬುದನ್ನು ಬಲ್ಲೆ” ಎಂದು ಮಲ್ಯ ಟ್ವೀಟ್‌ ಮಾಡಿದ್ದಾರೆ.
ಕರ್ನಾಟಕ ಹೈಕೋರ್ಟ್‌ನಲ್ಲಿ ನಾನು ಈ ಮೊದಲೇ ಹಣ ಸೆಟ್ಲ್ ಮೆಂಟ್‌ ಮಾಡುವ ವಿಷಯ ಪ್ರಸ್ತಾಪಿಸಿದ್ದೆ. ಅದನ್ನು ನಿಷ್ಟ್ರಯೋಜಕ ಎಂದು ವಜಾ ಮಾಡಲಾಗಿಲ್ಲ. ಇದು ಸಂಪೂರ್ಣ ಪ್ರಾಮಾಣಿಕವಾಗಿ ಮತ್ತು ಸುಲಭವಾಗಿ ಸಾಧಿಸಬಹುದಾಗಿದ್ದ ಕೊಡುಗೆಯಾಗಿತ್ತು. ಆದರೂ ಯಾಕಾಗಿ ಬ್ಯಾಂಕುಗಳು ಹಣ ಸ್ವೀಕರಿಸಿಲ್ಲ ? ಎಂದು ಮಲ್ಯ ಪ್ರಶ್ನಿಸಿದ್ದಾರೆ.

ನಾನು ನನ್ನ ಆಸ್ತಿಯನ್ನು ಮರೆ ಮಾಚಿದ್ದೇನೆ ಎಂದು ಜಾರಿ ನಿರ್ದೇಶನಾಲಯದ ಹೇಳಿಕೆ ನೋಡಿ ನಾನು ದಿಗಿಲುಗೊಂಡೆ. ಗೌಪ್ಯ ಆಸ್ತಿ ಇದ್ದಿದ್ದರೆ ನ್ಯಾಯಾಲಯದ ಮುಂದೆ 14,000 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಏಕೆ ತೋರಿಸಬೇಕಿತ್ತು ? ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಅವರನ್ನು ದಾರಿತಪ್ಪಿಸುವುದಕ್ಕೆ ನಾಚಿಕೆಯಾಗಬೇಕು ಎಂದು ಅವರು ಕಿಡಿಕಾರಿದ್ದಾರೆ.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತೆರಿಗೆ ವಿನಾಯಿತಿ ಪ್ರತ್ಯೇಕ ಪ್ರಕರಣಗಳಿಂದ ಹೊರತುಪಡಿಸಿ ಮಲ್ಯ ಅವರು 9,000 ಕೋಟಿ ರೂಪಾಯಿ ಹಣವನ್ನು ಬ್ಯಾಂಕುಗಳಿಗೆ ವಂಚಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿತ್ತು.
ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯ್ದೆಯಡಿ ಈ ವರ್ಷದ ಜನವರಿ 2ರಂದು ವಿಜಯ ಮಲ್ಯ ಅವರನ್ನು ದೇಶಭ್ರಷ್ಟ ಹಣಕಾಸು ಅಪರಾಧಿ ಎಂದು ಘೋಷಿಸಲಾಗಿತ್ತು.

ಮಲ್ಯ ಅವರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸತ್ಯ ಎಂದು ಮನದಟ್ಟಾಗಿದೆ ಎಂದು ಯು.ಕೆ ನ್ಯಾಯಾಲಯದ ಮುಖ್ಯ ಮ್ಯಾಜಿಸ್ಟ್ರೇಟ್‌ ಹೇಳಿದ್ದರು. ಮಾತ್ರವಲ್ಲ ಭಾರತಕ್ಕೆ ಹಸ್ತಾಂತರಿಸಲು ಸೂಚನೆ ನೀಡಿದ್ದರು.

loading...