ಹದಗೆಟ್ಟ ರಸ್ತೆ: ದುರಸ್ತಿಗೊಳಿಸಲು ಸ್ಥಳೀಯರ ಆಗ್ರಹ

0
12

ಕನ್ನಡಮ್ಮ ಸುದ್ದಿ-ಕುಮಟಾ: ತಾಲೂಕಿನ ಸಂತೇಗುಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಬೆಳಲಗದ್ದೆಯಲ್ಲಿ ಹಲವು ವರ್ಷಗಳಿಂದ ರಸ್ತೆಯಿದ್ದರೂ ಸಂಪೂರ್ಣ ಹದಗೆಟ್ಟಿರುವುದರಿಂದ ಆ ಭಾಗದ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಸ್ಥಳೀಯರು ಗ್ರಾಪಂನ್ನು ಒತ್ತಾಯಿಸಿದ್ದರು. ಅದರಂತೆ ಗ್ರಾಪಂ ಆಡಳಿತ ಸಮಿತಿ 2 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಸುಧಾರಣೆ ಮಾಡಿ, ಗಟಾರ ನಿರ್ಮಿಸುವ ಕಾಮಗಾರಿ ಮಂಜೂರಾಗಿದ್ದು, ಏಕಾಏಕಿ ಕಾಮಗಾರಿಯನ್ನು ತಡೆದ ಅರಣ್ಯ ಅಧಿಕಾರಿಗಳ ವರ್ತನೆಯನ್ನು ಖಂಡಿಸಿದ ಅಲ್ಲಿನ ಸ್ಥಳೀಯರು ಸೋಮವಾರ ಪ್ರತಿಭಟನೆ ನಡೆಸಿ, ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹಿಂಡಬೈಲ್‌ ಮುಖ್ಯ ರಸ್ತೆಯ ತಿಪ್ಪಯ್ಯ ನಾಯ್ಕ ಮನೆಯ ಕ್ರಾಸ್‌ನಿಂದ ಬೆಳಗಲಗದ್ದೆ ರಸ್ತೆಯ ವರೆಗಿನ 700 ಮೀ ಉದ್ದದ ರಸ್ತೆಯ ಕಾಮಗಾರಿ ಆರಂಭಿಸಿದ್ದು, ಈಗಾಗಲೇ 79 ಸಾವಿರ ರೂ ಗಳು ಖರ್ಚು ಮಾಡಲಾಗಿದೆ. ಇಲ್ಲಿಯವರೆಗೆ ಸುಮ್ಮನಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಅಲ್ಲಿನ ಸ್ಥಳೀಯರೊಬ್ಬರು ಅತಿಕ್ರಮಣ ಮಾಡಿಕೊಂಡ ಜಾಗದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಅರಣ್ಯ ಅಧಿಕಾರಿ ರಾಜು ಕೊಚ್ರೇಕರ್‌ ನೇತೃತ್ವದ ತಂಡ ಕಾಮಗಾರಿಯನ್ನು ಏಕಾಏಕಿ ನಿಲ್ಲಿಸಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಅರಣ್ಯ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ಭಾಗದಲ್ಲಿರುವ ಎಲ್ಲರ ಜಮೀನುಗಳು ಅತಿಕ್ರಮಣದ್ದಾಗಿದೆ. ಯಾರಿಗೂ ಪಟ್ಟಾ ದೊರೆತಿಲ್ಲ. ರಸ್ತೆ ಸುಧಾರಣೆ ಸಂಬಂಧ ಯಾರೋ ಒಬ್ಬರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಬಹುತೇಕರ ಬೇಡಿಕೆಯನ್ನು ಕಡೆಗಣಿಸಿ, ಕಾಮಗಾರಿ ನಿಲ್ಲಿಸುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶಗೊಂದ ಸ್ಥಳೀಯರಾದ ಸಕೀನಾ ಸಾಬ್‌, ಅಬ್ದುಲ್‌ ಖಾಧೀರ ಅಲಿಹೊಡೆಕರ್‌, ಸಾಜಿದಾ ಅಹಮದ್‌ ಸಾಬ್‌, ರುಭೀನಾ ಹಾಗೂ ಇತರರು ಹಠಾತ್‌ ಪ್ರತಿಭಟನೆ ನಡೆಸುವ ಮೂಲಕ ಅಧಿಕಾರಿಗಳ ಕ್ರಮವನ್ನು ಖಂಡಿಸಿದ್ದಾರೆ. ನಾವು ಕಳೆದ 35 ವರ್ಷಗಳಿಂದ ಈ ರಸ್ತೆಯನ್ನೆ ಅವಲಂಬಿಸಿಕೊಂಡು ಬಂದಿರುತ್ತಾರೆ. ನಮ್ಮ ಮನೆಯಲ್ಲಿ ಗರ್ಭಿಣಿಯಿದ್ದಾಳೆ. ಅಲ್ಲದೇ ಮನೆಯ ಸದಸ್ಯರು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂಥಹ ಸಂದರ್ಭದಲ್ಲಿ ಈ ಭಾಗದಲ್ಲಿ ಸರಿಯಾದ ರಸ್ತೆ ಇಲ್ಲ. ಮನೆಯ ಸದಸ್ಯರು ಅಂಭೀರ ಪರಿಸ್ಥಿತಿಯಲಿಲ್ಲದ್ದಾಗ ಒಂದು ಆಟೋ ಅಥವಾ ಆಂಬ್ಯುಲೆನ್ಸ್‌ ಕೂಡ ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಿಲ್ಲ. ಇಲ್ಲಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ನಾವು ಈಗಿರುವ ರಸ್ತೆಯನ್ನೆ ದುರಸ್ತಿ ಮಾಡಿಕೊಡಿ ಎಂದು ಹೇಳುತ್ತೇವೆ ಬಿಟ್ಟರೆ, ಹೊಸದಾಗಿ ರಸ್ತೆ ನಿರ್ಮಿಸಿಕೊಡಿ ಎಂದು ಕೇಳುತ್ತಿಲ್ಲ. ಹಾಗಾಗಿ ಗ್ರಾಪಂ ಗೆ ಇಲ್ಲಿನ ರಸ್ತೆ ದುರಸ್ತಿಮಾಡಿ, ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ನೀಡಿರುವುದರಿಂದ ಗ್ರಾಪಂ ಅಧಿಕಾರಿಗಳು ರಸ್ತೆ ದುರಸ್ತಿಗಾಗಿ ಅನುದಾನ ಮಂಜೂರಿಮಾಡಿ, ಕಾಮಗಾರಿ ಕೈಗೊಂಡಿರುವಾಗ ಅರಣ್ಯ ಅಧಿಕಾರಿಗಳು ಏಕಾಏಕಿ ಕಾಮಗಾರಿ ತಡೆಯುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸಂತೇಗುಳಿ ಗ್ರಾಪಂ ಅಧ್ಯಕ್ಷ ಮಹೇಶ ನಾಯ್ಕ ಮಾತನಾಡಿ, ಕಳೆದ ಗ್ರಾಮ ಸಭೆಯಲ್ಲಿ ಈ ಭಾಗದ ಜನ ಬೇಡಿಕೆ ಇಟ್ಟಿದ್ದರು. ಜನರಿಗೆ ಕಲ್ಪಿಸಬೇಕಾದ ಮೂಲ ಸೌಕರ್ಯಗಳಲ್ಲೊಂದಾದ ರಸ್ತೆಯನ್ನು ನಿರ್ಮಿಸಿಕೊಡಲು ಪಂಚಾಯಿತಿ ಮುಂದಾಗಿದೆ. ಅಲ್ಲದೇ ಸಾರ್ವಜನಿಕರಿಗೆ ಮೂಲ ಸೌಕರ್ಯ ಕಲ್ಪಿಸಿಕೊಡುವುದು ನಮ್ಮ ಕರ್ತವ್ಯ. ಈ ಭಾಗದಲ್ಲಿರುವ ಎಲ್ಲಾ ರಸ್ತೆಗಳು ಅರಣ್ಯ ಇಲಾಖೆಗೆ ಸೇರಿರುತ್ತದೆ. ಈಗಾಗಲೇ ಕಾಮಗಾರಿ ಶುರುವಾಗಿದೆ. ದೂರು ನೀಡಿದ ವ್ಯಕ್ತಿ ಕೂಡ ಎಕರೆಗಳಷ್ಟು ಅತಿಕ್ರಮಣ ಭೂಮಿ ಹೊಂದಿರುವವರಾಗಿದ್ದಾರೆ. ರಸ್ತೆ ಸುಧಾರಣೆಗೆ ಅಡ್ಡಿ ಮಾಡುವುದು ಸರಿಯಲ್ಲ. ಈ ಬಗೆಗೆ ಅರಣ್ಯ ಇಲಾಖೆಯ ಮೇಲಾಧಿಕಾರಿ ಅವರ ಗಮನ ಸೆಳೆದು, ಕಾಮಗಾರಿ ಮುಂದುವರೆಸುತ್ತೇವೆ ಎಂದರು.

ಬಾಕ್ಸ್‌ ಮಾಡಿ,,,
ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿದ ಆರ್‌ಎಫ್‌ಒ ವರದರಂಗನಾಥ ಅವರು, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಜಾಗವನ್ನು ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

loading...