ಹಲ್ಲು ಕಿತ್ತ ಹಾವಾದ ಬೆಳಗಾವಿ ಸ್ಮಾರ್ಟ್ಸಿಟಿ ಸಲಹಾ ಸಮಿತಿ

0
32
ಹಲ್ಲು ಕಿತ್ತ ಹಾವಾದ ಬೆಳಗಾವಿ ಸ್ಮಾರ್ಟ್ಸಿಟಿ ಸಲಹಾ ಸಮಿತಿ
ಸ್ಮಾರ್ಟ್ ಅಧಿಕಾರಿಗಳಿಂದ ಕಡೆಗಣನೆ – ಶೀಘ್ರದಲ್ಲೇ ಇಬ್ಬರು ಸದಸ್ಯರ ರಾಜೀನಾಮೆ ?
ಬೆಳಗಾವಿ
ಬೆಳಗಾವಿ ಮಹಾನಗರ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ಮಾರ್ಟ್ಸಿಟಿ ಯೋಜನೆಗೆ ಆಯ್ಕೆಯಾಗಿ ಆರು ವರ್ಷಗಳು ಕಳೆಯುತ್ತ ಬಂದರೂ ಕಾಮಗಾರಿಗಳು ಮಾತ್ರ ಸರಿಯಾಗಿಲ್ಲ. ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಸ್ಮಾರ್ಟ್ ಕಾಮಗಾರಿ ಎಲ್ಲ ಅವೈಜ್ಞಾನಿಕವಾಗಿವೆ. ಅಲ್ಲದೆ ಸ್ಮಾರ್ಟ್ಸಿಟಿ  ಸಲಹಾ ಸಮಿತಿಯ ಸದಸ್ಯರನ್ನು ಕಡೆಗಣಿಸಿ ತಮಗೆ ಬೇಕಾದ ರೀತಿಯಲ್ಲಿ ಅಧಿಕಾರಿಗಳು ವರ್ತಿಸುತ್ತಿರುವುದನ್ನು ಸಲಹಾ ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಮಹಾನಗರ ಕೇಂದ್ರ ಸರಕಾರದ ಸ್ಮಾರ್ಟ್ಸಿಟಿ ಯೋಜನೆಗೆ ಆಯ್ಕೆಯಾದ ಬಳಿಕ 2017ರಲ್ಲಿ ಮೂರು ಜನರನ್ನು ಸ್ಮಾರ್ಟ್ಸಿಟಿ ಸಲಹಾ ಸಮಿತಿ ರಚನೆ ಮಾಡಲಾಯಿತು. ನಗರದಲ್ಲಿ ನಡೆಯುವ ಸ್ಮಾರ್ಟ್ಸಿಟಿ ಕಾಮಗಾರಿಯ ಬಗ್ಗೆ ಸಲಹಾ ಸಮಿತಿಯ ಗಮನಕ್ಕೆ ತಂದ ಬಳಿಕ ಅವರ ಸಲಹೆಯನ್ನು ಪಡೆದುಕೊಂಡು ಕಾಮಗಾರಿ ಆರಂಭ ಮಾಡಬೇಕಿತ್ತು. ಸ್ಥಳೀಯ ಜನಪ್ರತಿನಿಧಿಗಳ ಹಸ್ತಕ್ಷೇಪ, ಗುತ್ತಿಗೆದಾರರ ಪ್ರಭಾವಕ್ಕೆ ಒಳಗಾಗಿ ಸ್ಮಾರ್ಟ್ಸಿಟಿ ಅಧಿಕಾರಿಗಳು ಕಳೆದ ಎರಡು ವರ್ಷಗಳಿಂದ ಸ್ಮಾರ್ಟ್ಸಿಟಿ ಸಲಹಾ ಸಮಿತಿಯ ಸದಸ್ಯರನ್ನು ದೂರವಿಟ್ಟು ಕಾಮಗಾರಿಗಳನ್ನು ನಡೆಸುತ್ತಿರುವುದಕ್ಕೆ ಆಕ್ರೋಶಗೊಂಡಿರುವ ಸದಸ್ಯರು ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಮಾರ್ಟ್ಸಿಟಿ ಯೋಜನೆಯ ಕಾಮಗಾರಿಯಲ್ಲಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿರುವ ಬೆಳಗಾವಿ ಸ್ಮಾರ್ಟ್ಸಿಟಿಯ ಅಧಿಕಾರಿಗಳು ಸಲಹಾ ಸಮಿತಿಯ ಸದಸ್ಯರನ್ನು ಕಡೆಗಣನೆ ಮಾಡಿರುವುದಕ್ಕೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ಮಾರ್ಟ್ಸಿಟಿ ಸಲಹಾ ಸಮಿತಿಯ ರಚನೆಯಾದ ಬಳಿಕ ಕೇವಲ ನಾಲ್ಕು ಸಭೆಗಳನ್ನು ನಡೆಸಲಾಗಿದೆ. ಕೊನೆಯ ಸಭೆ ಕೊವೀಡ್-19 ಲಾಕ್‌ಡೌನ್ ಆಗುವ ಮುನ್ನ ದಿ.ಕೇಂದ್ರ ಸಚಿವ ಸುರೇಶ ಅಂಗಡಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯ ಕೊನೆಯ ಸಭೆಯಾಗಿದೆ. ಇಲ್ಲಿಯವರೆಗೂ ನಡೆದ ಸಭೆಯಲ್ಲಿ ಸ್ಮಾರ್ಟ್ಸಿಟಿ ಸಲಹಾ ಸಮಿತಿಯ ಸದಸ್ಯರ ಗಮನಕ್ಕೆ ತರದೆ ತಮಗೆ ಬೇಕಾದ ರೀತಿಯಲ್ಲಿ ಸ್ಮಾರ್ಟ್ಸಿಟಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂದು ಸ್ಮಾರ್ಟ್ಸಿಟಿ ಸಲಹಾ ಸಮಿತಿ ಸದಸ್ಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸ್ಮಾರ್ಟ್ಸಿಟಿ ಯೋಜನೆಯ ಎಂಜನಿಯರ್‌ಗಳು ಸಿದ್ದಪಡಿಸುವ ರೂಪರೇಷೆಗಳನ್ನು ಸಲಹಾ ಸಮಿತಿಯ ಮುಂದೆ ಇಟ್ಟು ಅವರ ಸಲಹೆಯನ್ನು ಪಡೆದು ಕಾಮಗಾರಿಯನ್ನು ಆರಂಭಿಸಬೇಕು. ಆದರೆ ಸಲಹಾ ಸಮಿತಿ ನೀಡುವ ಸಲಹೆಯನ್ನು ಕಡೆಗಣಿಸಿ ಗುತ್ತಿಗೆದಾರರು, ಉಪಗುತ್ತಿಗೆದಾರರೊಂದಿಗೆ ಅಧಿಕಾರಿಗಳು ಸೇರಿಕೊಂಡು ಬೇಕಾಬಿಟ್ಟಿ ಕೆಲಸ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಅಲ್ಲದೆ, ತಮ್ಮ ಸಲಹಾ ಸಮಿತಿಯ ಸದಸ್ಯ ಸ್ಥಾನಕ್ಕೆ ಶೀಘ್ರದಲ್ಲಿಯೇ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
loading...