ಹೆಗಡೆ ಪ್ರತಿಮೆ ಸ್ಥಾಪಿಸಲು ಸರ್ಕಾರಕ್ಕೆ ಒತ್ತಾಯ

0
33

ಶಿರಸಿ: ರಾಜ್ಯ ರಾಜಧಾನಿಯ ನೆಲದಲ್ಲಿ ಯಾರ್ಯಾರದ್ದೋ ಪ್ರತಿಮೆ ಸ್ಥಾಪಿಸುವ ಬದಲು ಮುತ್ಸದ್ಧಿ ನೇತಾರರಾದ ರಾಮಕೃಷ್ಣ ಹೆಗಡೆ ಅವರ ಪ್ರತಿಮೆ ಸ್ಥಾಪಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಹಿರಿಯ ಸಾಹಿತಿ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಒತ್ತಾಯಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಪುಣ್ಯತಿಥಿ ಅಂಗವಾಗಿ ಶಿರಸಿಯ ಗಾಣಿಗರ ಸಮುದಾಯ ಭವನದಲ್ಲಿ ರಾಮಕೃಷ್ಣ ಹೆಗಡೆ ಅಭಿಮಾನಿ ವೇದಿಕೆ ಆಯೋಜಿಸಿದ್ದ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹೆಗಡೆ ಅವರಿಂದ ಉಪಕಾರ ಪಡೆದು ಅಧಿಕಾರ ಅನುಭವಿಸುತ್ತಿದ್ದರೂ ಅವರ ಸ್ಮರಣೆ ಮಾಡುವ ಬುದ್ಧಿ ಯಾರೊಬ್ಬರಲ್ಲಿಯೂ ಬಂದಿಲ್ಲ. ಬೆಂಗಳೂರು ಯಾರ್ಯಾರನ್ನೋ ನೆನೆಸುತ್ತದೆ. ಆದರೆ ಹೆಗಡೆ ಅವರನ್ನು ನೆನೆಸುವ ಕಾರ್ಯವಾಗುತ್ತಿಲ್ಲ. ಅದರ ಬದಲು ಮುತ್ಸದ್ಧಿ ನೇತಾರ ರಾಮಕೃಷ್ಣ ಹೆಗಡೆ ಅವರಂಥ ಯೋಗ್ಯರ ಸ್ಮರಣೆಗೆ ಆದ್ಯತೆ ಸಿಗಬೇಕು. ಹೀಗಾಗಿ ಬೆಂಗಳೂರಿನ ಯೋಗ್ಯ ಸ್ಥಳದಲ್ಲಿ ಹೆಗಡೆ ಅವರ ಪುತ್ಥಳಿ ಪ್ರತಿಷ್ಠಾಪಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ರಾಜ ಮನೆತನದಿಂದ ಬಂದು ರಾಜಕಾರಣ ಮಾಡಿರುವ ಹಲವರು ರಾಜ್ಯದಲ್ಲಿದ್ದರೂ ಹೆಗಡೆ ಅವರಂತೆ ದೇಶದ ಪ್ರಧಾನಿಯಾಗುವ ಅರ್ಹತೆ ಯಾರೊಬ್ಬರಲ್ಲಿಯೂ ಇರಲಿಲ್ಲ ಎಂದ ಅವರು, ಭೂತಕಾಲದಲ್ಲಿ ಹೆಗಡೆ ಅಂಥವರು ಇರಲಿಲ್ಲ. ಈಗಿನ ರಾಜಕೀಯ ವಲಯದಲ್ಲಿ ಯಾರೊಬ್ಬರೂ ಇಲ್ಲ. ಮುಂದೆಯೂ ಬರುತ್ತಾರೆಂಬ ವಿಶ್ವಾಸವಿಲ್ಲ ಎಂದರು.
ಸಿದ್ದರಾಮಯ್ಯ ಏನೂ ಇರಲಿಲ್ಲ….
ಅಧಿಕಾರ ದಾಹದಿಂದ ಹೆಗಡೆ ದೂರವಿದ್ದರು. ಆದರೆ ಅವರ ನೆರಳಿನಲ್ಲಿ ಅಧಿಕಾರ ಹಿಡಿದವರು ಹೆಗಡೆ ಅವರಿಗೆ ದ್ರೋಹ ಮಾಡಿದ್ದು ಬೇಸರದ ಸಂಗತಿ. ರಾಜಕೀಯ ಮೇಲಾಟದಲ್ಲಿ ಸ್ನೇಹಿತರಿಂದಲೇ ಹೆಗಡೆ ಆಘಾತಕ್ಕೊಳಗಾಗಿದ್ದರು ಎಂದ ಅವರು, ಹೆಗಡೆ ಅಧಿಕಾರಾವಧಿಯಲ್ಲಿ ಸಿದ್ದರಾಮಯ್ಯ ಏನೂ ಇರಲಿಲ್ಲ. ಈಗ ಮುಖ್ಯಮಂತ್ರಿ ಆಗಿದ್ದಾರೆ. ಏನೂ ಇಲ್ಲದವರು ಕೂಡ ಅಧಿಕಾರಯುತವಾಗಿ ಹೇಳುವ ಮಟ್ಟಕ್ಕೆ ಬೆಳೆದಿದ್ದಾರೆ. ಆದರೆ ನಡೆದ ಹಾದಿಯನ್ನು ಅವರು ಮರೆತಿರುವುದು ಸೋಜಿಗ ಎಂದರು. ಜಿಲ್ಲೆಯ ರಾಜಕಾರಣದಲ್ಲಿ ಹೆಸರಾದ ಆರ್‌.ವಿ.ದೇಶಪಾಂಡೆ ಅವರು ರಾಜಕೀಯದಲ್ಲಿ ಈಗ ದೊಡ್ಡವರಾಗಿದ್ದರೂ ಹೆಗಡೆ ಅವರ ಕಾಲದಲ್ಲಿ ಬಹಳ ಚಿಕ್ಕವರಾಗಿದ್ದರು. ಹೆಗಡೆ ಅವರನ್ನು ಭೇಟಿ ಮಾಡಲೂ ಸಾಧ್ಯವಾಗುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.
ಈ ವೇಳೆ ಪತ್ರಕರ್ತ ವಿಶ್ವೇಶ್ವರ ಭಟ್ಟ, ಹಿರಿಯ ನ್ಯಾಯವಾದಿ ಬಿ.ಡಿ.ಹೆಗಡೆ, ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಸೇರಿದಂತೆ ಇತರರು ಇದ್ದರು.

loading...

LEAVE A REPLY

Please enter your comment!
Please enter your name here