ಹೈದರಾಬಾದ್-ಕರ್ನಾಟಕದ ಆರೂ ಜಿಲ್ಲೆಗಳಲ್ಲಿ ೧೧,೦೬೪ ಶಿಕ್ಷಕರ ಹುದ್ದೆಗಳು ಖಾಲಿ..!

0
10

ಕನ್ನಡಮ್ಮ ಸುದ್ದಿ-ಕೊಪ್ಪಳ : ಹೈದರಾಬಾದ್ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಶಾಲೆಗಳ ಒಟ್ಟಾರೆ ಸುಮಾರು ೧೧,೦೬೪ ಶಿಕ್ಷಕರ ಹುದ್ದೆಗಳು ಖಾಲಿ ಉಳಿದುಕೊಂಡಿರುವ ಬಗ್ಗೆ ಮಾಹಿತಿ ಕಲಬುರ್ಗಿ ಪ್ರಾದೇಶಿಕ ಆಯುಕ್ತರ ಸಭೆಯಲ್ಲಿ ಬಹಿರಂಗಗೊಂಡಿದೆ. ಹೈ-ಕ ಭಾಗದ ಜಿಲ್ಲೆಗಳಲ್ಲಿನ ಶಾಲೆಗಳ ದುರಸ್ತಿ, ಹೊಸ ಕಟ್ಟಡಗಳ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಗಳ ಬಗ್ಗೆ ವರದಿ ನೀಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ವರು ಸೂಚಿಸಿದ ಹಿನ್ನಲೆಯಲ್ಲಿ ಶನಿವಾರದಂದು ಕಲಬುರ್ಗಿಯಲ್ಲಿ ಪ್ರಾದೇಶಿಕ ಆಯುಕ್ತರು ನಡೆಸಿದ ಸಭೆಯಲ್ಲಿ ಈ ಮಾಹಿತಿ ಸಿಕ್ಕಿದೆ. ಈ ಪ್ರದೇಶದ ವ್ಯಾಪ್ತಿಯ ಆರು ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಕ್ಕೆ ೪೩,೬೧೬ ಹುದ್ದೆಗಳು ಮಂಜೂರಾಗಿ ೩೪,೭೬೮ ಶಿಕ್ಷಕರು ಪ್ರಸ್ತುತ ಕಾರ್ಯನಿರ್ವಹಣೆ ಇದ್ದು, ೮,೮೪೮ ಹುದ್ದೆಗಳು ಖಾಲಿ ಇವೆ. ಇನ್ನೂ ಪ್ರೌಢಶಾಲಾ ಶಿಕ್ಷಕ ವೃಂದದಲ್ಲಿ ೧೨,೦೪೯ ಹುದ್ದೆಗಳು ಮಂಜೂರಾಗಿದ್ದು, ಇದರಲ್ಲಿ ೯,೮೩೩ ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಉಳಿದ ೨,೨೧೬ ಹುದ್ದೆಗಳು ಖಾಲಿ ಇದ್ದು, ಒಟ್ಟಾರೆ ಸುಮಾರು ೧೧,೦೬೪ ಶಿಕ್ಷಕರ ಹುದ್ದೆಗಳು ಖಾಲಿ ಉಳಿದುಕೊಂಡಿವೆ. ಹೊಸ ಶಾಲೆಗಳು ಸ್ಥಾಪನೆ ಮಾಡುವುದಕ್ಕಿಂತ ಇರುವ ಶಾಲೆಗಳಿಗೆ ಉತ್ತಮವಾದ ಸೌಲಭ್ಯ ನೀಡುವುದು ಮುಖ್ಯ. ಜತೆಗೆ, ಮೌಲ್ಯಯುತ ಶಿಕ್ಷಣ ನೀಡುವುದರ ಕಡೆಗೆ ಹೆಚ್ಚಿನ ಗಮನ ನೀಡಿದಾಗ ಮಾತ್ರ ಸುತ್ತಮುತ್ತಲಿನ ಮಕ್ಕಳು ಅಲ್ಲಿನ ಶಾಲೆಗೆ ಪ್ರವೇಶ ಪಡೆಯಲು ಮುಂದಾಗುತ್ತಾರೆ. ಆ ಮೂಲಕ ಶಾಲೆಗಳ ಬಲವರ್ಧನೆಗೆ ಶ್ರಮಿಸುವುದು ಹಾಗೂ ಬಲವರ್ದನೆಗೆ ಒದಗಿಸಿದ ಮೂಲಸೌಕರ್ಯಗಳ ಕುರಿತು ಜುಲೈ ೩ರೊಳಗೆ ವರದಿ ನೀಡುವುಂತೆ ಸಂಬಂಧಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಭೆಯಲ್ಲಿ ಸುಬೋಧ ಯಾದವ ಅವರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಕುಡಿಯುವ ನೀರು, ಶೌಚಾಲಯ, ವಿದ್ಯುತ್, ಆವರಣಗೋಡೆ ಸೇರಿದಂತೆ ಎಲ್ಲ ಮೂಲ ಸೌಲಭ್ಯಗಳ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳು/ಡಿಡಿಪಿಐಗಳು ಸಮಗ್ರ ವಸ್ತುಸ್ಥಿತಿಯ ವರದಿ ಸಲ್ಲಿಸುವುಂತೆ ಪ್ರಾದೇಶಿಕ ಆಯುಕ್ತರು ಹಾಗೂ ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗಳಾಗಿರುವ ಸುಬೋದ್ ಯಾದವ ಅವರು ಸೂಚಿಸಿದ್ದು, ಇದೇ ವಿಷಯವಾಗಿ ಮತ್ತೆÃ ಜುಲೈ ಮೊದಲವಾರದಲ್ಲಿ ಮತ್ತೊಮ್ಮೆ ಪರಾಮರ್ಶಿಸಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲು ಆಯುಕ್ತರು ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.

loading...