ಹೊಸ ತಾಪಂ ಹುದ್ದೆಗಳಿಗೆ ಇಲಾಖೆ ಸಮ್ಮತಿ

0
142

ಗುಳೇದಗುಡ್ಡ: ಹೊಸದಾಗಿ ರಚನೆಯಾಗಿರುವ ರಾಜ್ಯದಲ್ಲಿನ ೫೦ ಹೊಸ ತಾಲೂಕು ಪಂಚಾಯತಿಗಳಿಗೆ ೭೦೦ ಹುದ್ದೆಗಳನ್ನು ಸೃಜಿಸಲು ರಾಜ್ಯ ಆರ್ಥಿಕ ಇಲಾಖೆ ಸಮ್ಮತಿಸಿದೆ.
ರಾಜ್ಯದಲ್ಲಿನ ಹೊಸ ೫೦ ತಾಲೂಕುಗಳಿಗೆ ಪ್ರತಿ ತಾಲೂಕು ಪಂಚಾಯತಿಗಳಿಗೆ ವಿವಿಧ ವೃಂದದ ೧೪ ಹುದ್ದೆಗಳಂತೆ ೫೦ ತಾಲೂಕು ಪಂಚಾಯಿತಿಗಳಿಗೆ ಒಟ್ಟು ೭೦೦ ಹುದ್ದೆಗಳನ್ನು ಸೃಜಿಸಲು ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದ್ದು ನಗರದ ಸಾರ್ವಜನಿಕರಿಗೆ ಸಂತಸ ತಂದಿದೆ.

ಗುಳೇದಗುಡ್ಡ ನಗರ ೫೦ ಹೊಸ ತಾಲೂಕುಗಳ ಪಟ್ಟಿಯಲ್ಲಿ ಮೊದಲನೇ ಸಾಲಿನಲ್ಲಿದ್ದರೂ ಯಾವುದೇ ಹುದ್ದೆಗಳ ಮಂಜೂರಾತಿ ಇಲ್ಲ. ಕಚೇರಿ ಸಹ ಇನ್ನೂ ಬಾದಾಮಿ ತಾಲೂಕು ತಾಲೂಕು ಪಂಚಾಯತಿ ವ್ಯಾಪ್ತಿಯಲ್ಲಿರುವುದರಿಂದ ಗುಳೇದಗುಡ್ಡ ನೂತನ ತಾಲೂಕು ವ್ಯಾಪ್ತಿಯ ೩೮ ಹಳ್ಳಿಗಳ ರೈತರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಬಾದಾಮಿಗೆ ತೆರಳಬೇಕಾದ ಪರಿಸ್ಥಿತಿ ಇತ್ತು. ಸದ್ಯ ರಾಜ್ಯ ಜಿಲ್ಲಾ ಪಂಚಾಯತಿ ಆರ್ಥಿಕ ಇಲಾಖೆ ಕಳೆದ ಮಾರ್ಚ ತಿಂಗಳ ೨೯ನೇ ತಾರೀಖಿಗೆ ರಾಜ್ಯಾದ್ಯಂತ ಒಟ್ಟು ೫೦ ನೂತನ ತಾಲೂಕು ಪಂಚಾಯಿತಿಗಳಿಗೆ ಹೊಸ ಹುದ್ದೆಗಳನ್ನು ಸೃಜಿಸಲು ಅನುಮತಿಸಿದೆ. ಈ ಕುರಿತು ಆದೇಶ ಕಂಡು ಈ ಭಾಗದ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರತಿ ತಾಲೂಕು ಪಂಚಾಯತಿಗೆ ಮಂಜೂರಾದ ಹುದ್ದೆಗಳು: ಕಾರ್ಯನಿರ್ವಾಹಕ ಹುದ್ದೆ-೧, ತಾಲೂಕು ಯೋಜನಾಧಿಕಾರಿ ಹುದ್ದೆ-೧, ಸಹಾಯಕ ನಿರ್ದೇಶಕರು(ನರೇಗಾ)-೧, ಸಹಾಯಕ ಲೆಕ್ಕಾಧಿಕಾರಿ-೧, ಕಿರಿಯ ಅಭಿಯಂತರ-೧, ಪ್ರಥಮ ದರ್ಜೆ ಹುದ್ದೆ-೧, ಪ್ರಥಮ ದರ್ಜೆ ಲೆಕ್ಕ ಸಹಾಯಕರು-೧, ದ್ವಿತೀಯ ದರ್ಜೆ ಸಹಾಯಕ-೨, ಬೆರಳಚ್ಚುಗಾರರು-೨, ವಾಹನ ಚಾಲಕರು-೧, ಗ್ರುಪ್ ಡಿ-೨ ಹೀಗೆ ಪ್ರತಿ ನೂತನ ತಾಲೂಕು ಪಂಚಾಯತಿಗಳಿಗೆ ೧೪ ಹುದ್ದೆಗಳಂತೆ ರಾಜ್ಯದ ಎಲ್ಲ ೫೦ ನೂತನ ತಾಲೂಕು ಪಂಚಾಯತಿಗಳಿಗೆ ಹುದ್ದೆಗಳನ್ನು ಸೃಜಿಸಲು ಇಲಾಖೆ ಸಮ್ಮತಿಸಿದ್ದು. ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಹುದ್ದೆಗಳ ಭರ್ತಿ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ.

loading...