2 ಶನಿವಾರ 17 ಸೆಪ್ಟಂಬರ 2011ರಸ್ತೆ ಸಂಚಾರಿ ನಿಯಮ ಉಲ್ಲಂಘಿಸಿದವರ ಮೇಲೆ ಕ್ಯಾಮೆರ ಕಣ್ಣು

0
48

ಬೆಳಗಾವಿ ನಗರದ ಪ್ರಮುಖ ವೃತ್ತಗಳಲ್ಲಿ ಸಿಸಿಟಿವಿ ಕ್ಯಾಮೆರ ಅಳವಡಿಕೆ ➥➥

ಸಂಚಾರಿ ನಿಯಮ ಉಲ್ಲಂಘಿಸಿದವರ ಮೇಲೆ ದಂಡ ➥➥

ಬೆಳಗಾವಿ, 15- ಸಂಚಾರಿ ನಿಯಮ ಉಲ್ಲಂಘಿಸುವವರು ಟ್ರಾಫಿುಕ್ ಪೋಲೀಸರ ಕಣ್ಣು ತಪ್ಪಿಸಿ ಪರಾರಿಯಾಗಬಹುದು. ಆದರೆ, ಇನ್ನು ಮುಂದೆ ಕ್ಯಾಮೆರಾ ಕಣ್ಣು ತಪ್ಪಿಸುವಲ್ಲಿ ಸಾಧ್ಯವೇ ಇಲ್ಲ. ಏಕೆಂದರೆ, ಬೆಳಗಾವಿ ನಗರದ ಎಲ್ಲ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಗಳನ್ನು ಅಳವಡಿಸಿ, ಸಂಚಾರಿ ನಿಯಮ ಉಲ್ಲಂಘಿಸಿದವರ ಮೇಲೆ ನಿರಂತರವಾಗಿ ನಿಗಾ ವಹಿಸುವ ವ್ಯವಸ್ಥೆಯನ್ನು ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಂದೀಪ್ ಪಾಟೀಲ್ ಮಾಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಸೇರಿದಂತೆ ಯಾವುದೇ ರೀತಿಯ ಕಾನೂನು ಭಂಗ ಮಾಡುವ ಮುನ್ನ ಯೋಚಿಸಿ. ನಗರದ ಆಯ್ದ ಜಂಕ್ಷನ್ನುಗಳಲ್ಲಿ ಬೆಳಗಾವಿ ಪೋಲೀಸರ ಹೈಟೆಕ್ ಕ್ಯಾಮೆರ ಕಣ್ಣುಗಳು ನಿಮ್ಮನ್ನುನಿರಂತರ ಗಮನಿಸುತ್ತಿವೆ. ಪ್ರತಿದಿನ ಕ್ಯಾಮೆರ ಕಣ್ಣಿಗೆ ಬೀಳುವ 50 ರಿಂದ 60 ಮಂದಿ ದಂಡ ತೆರುತ್ತಿದ್ದಾರೆ.

ಜಿಲ್ಲಾ ಪೋಲೀಸರು ನಗರದ ಆಯ್ದ ಐದು ಜನನಿಬಿಡ ಪ್ರದೇಶಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಿಸಿಟಿವಿ ಕ್ಯಾಮೆರಗಳನ್ನು ಅಳವಡಿಸಿದ್ದು, ಆ ಮೂಲಕ ಆ ಪ್ರದೇಶದ ರಸ್ತೆಗಳಲ್ಲಿ ನಡೆಯುವ ವಿದ್ಯಮಾನಗಳನ್ನು ಗಮನಿಸುತ್ತಿದ್ದಾರೆ. ಬೆಂಗಳೂರು ಮಹಾನಗರ ಹೊರತುಪಡಿಸಿದರೆ ಬೆಳಗಾವಿಯಲ್ಲಿ ಇದೇ ಪ್ರಥಮ ಬಾರಿಗೆ ಇಂತಹ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲಾಗಿದೆ.

ವಿಶ್ವ ಕನ್ನಡ ಸಮ್ಮೇಳನದ ಸಮಯದಲ್ಲಿ ಬಿಡುಗಡೆಯಾದ ನಿಗದಿತ ಮೊತ್ತದಲ್ಲಿ ಶಾಶ್ವತ ಕಾನೂನು ಅನುಷ್ಠಾನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಉತ್ತಮ ಗುಣಮಟ್ಟದ ಕ್ಯಾಮೆರಗಳನ್ನು ಅಳವಡಿಸಲಾಗಿತ್ತು. ಇದರಿಂದ ಪೋಲಿಸ್ ಇಲಾಖೆಗೆ ಶಾಶ್ವತ ವ್ಯವಸ್ಥೆ ದೊರೆತಂತಾಗಿದೆ ಎನ್ನುತ್ತಾರೆ ಸಂದೀಪ್ ಪಾಟೀಲ್.

ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ನಿಗದಿತ ಕೇಂದ್ರಗಳಲ್ಲಿ ಕ್ಯಾಮೆರ ಅಳವಡಿಸಲಾಗಿತ್ತು. ಅವುಗಳನ್ನು ಈಗ ಹೆಚ್ಚು ವಾಹನ ಸಂಚಾರ ಇರುವ ರಸ್ತೆಗಳ ಜಂಕ್ಷನ್ನುಗಳಲ್ಲಿ ಅಳವಡಿಸಲಾಗಿದೆ. ಪೋಲೀಸ್ ಕಂಟ್ರೌಲ್ ರೂಂ ಮೂಲಕ ಐದು ಕೇಂದ್ರಗಳಲ್ಲಿ ನಡೆಯುವ ಆಗುಹೋಗುಗಳನ್ನು ಪೋಲೀಸರು ಗಮನಿಸುತ್ತಿದ್ದಾರೆ.

ಸಂಚಾರಿ ನಿಯಮ ಉಲ್ಲಂಘನೆ, ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಕಂಡುಬಂದಾಗ ಸಂಚಾರಿ ಪೋಲೀಸರಿಗೆ ವಾಕಿಟಾಕಿ ಮೂಲಕ ಮಾಹಿತಿ ನೀಡಲಾಗುತ್ತಿದೆ. ಸಾಮಾನ್ಯವಾಗಿ ಇಂತಹ ಪ್ರಮುಖ ಕೇಂದ್ರಗಳಲ್ಲಿ ಸಂಚಾರಿ ಪೋಲೀಸರು ನಿಯೋಜನೆಗೊಂಡಿರುತ್ತಾರೆ. ನಿಯಮ ಉಲ್ಲಂಘನೆ ಅಥವ ಇನ್ನಾವುದೇ ಅಪರಾಧ ಕೃತ್ಯಗಳು ನಡೆದಾಗ ನಿಯೋಜಿತ ಪೋಲೀಸರಿಗೆ ವಾಕಿಟಾಕಿ ಮೂಲಕ ಮಾಹಿತಿ ನೀಡಿ ಸಂಬಂಧಪಟ್ಟವರಿಂದ ಉಲ್ಲಂಘನೆಗೆ ದಂಡ ವಸೂಲು ಮಾಡಲಾಗುತ್ತದೆ, ಹೀಗೆ ಪೋಲೀಸ್ ವರಿಷ್ಠಧಿಕಾರಿಗಳಾದ ಸಂದೀಪ್ ಪಾಟೀಲ್ ವಿವರಿಸಿದರು.

ಕ್ಯಾಮೆರಗಳನ್ನು ಸಾಕಷ್ಟು ಎತ್ತರದಲ್ಲಿ ಸಾರ್ವಜನಿಕರ ಗಮನಕ್ಕೆ ಬರದಂತೆ ಅಳವಡಿಸಲಾಗಿದೆ. ಇದರಿಂದ ಆ ಪ್ರದೇಶದ ವಿಶಾಲ ಚಿತ್ರಣವನ್ನು ಕ್ಯಾಮೆರ ಸೆರೆಹಿಡಿಯುತ್ತದೆ. ಇದು ಸ್ತಬ್ಧ ಕ್ಯಾಮೆರಾ ಆಗಿರದೆ, ಸುತ್ತಲೂ 360 ಡಿಗ್ರಿ ಕೋನದಲ್ಲಿ ದೃಷ್ಯಗಳನ್ನು ಸೆರೆಹಿಡಿಯುತ್ತದೆ. ಕಂಟ್ರೌಲ್ ರೂಂನಲ್ಲಿ ಝೂುಮ್- ಇನ್-ಝೂಮ್ಓಟ್ ಮಾಡುವ ಮೂಲಕ ನಿಖರ ಮಾಹಿತಿ ಪಡೆಯಲಾಗುತ್ತದೆ. ವಾಹನಗಳ ನೊಂದಣಿಯನ್ನು ನಿಖರವಾಗಿ ನೋಡಲು ಸಾಧ್ಯವಿದೆ.

ಕೆಲವೊಮ್ಮೆ ಈ ಕಂಟ್ರೌಲ್ರೂಂ ನೀಡಿದ ಮಾಹತಿ ಪ್ರಕಾರ ವಾಹನ ಚಾಲಕರಿಗೆ ದಂಡ ವಿಧಿಸಿದಾಗ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಚಾಲಕರಿಗೆ ಆತ ಮಾಡಿರುವ ತಪ್ಪುಗಳ ದೃಷ್ಯಗಳನ್ನು ತೋರಿಸಲಾಗುತ್ತದೆ.

ನಗರದಲ್ಲಿ ಹೆಚ್ಚಿನ ನಾಗರಿಕರಿಗೆ ಈ ವ್ಯವಸ್ಥೆ ಇರುವುದು ಗೊತ್ತಿಲ್ಲ. ಆದುದರಿಂದ, ಬೆಳಗಾವಿ ನಗರದಲ್ಲಿ ವಾಹನ ಚಾಲಕರು, ನಾಗರಿಕರು ಸಂಚಾರಿ ನಿಯಮ ಉಲ್ಲಂಘನೆ, ಅಸಭ್ಯ ವರ್ತನೆ, ಮಹಿಳೆಯರಿಗೆ ಕೀಟಲೆ ಮಾಡುವ ಮುನ್ನ ಯೋಚಿಸಿ. ನೀವು ಪೋಲೀಸರ ಕೈಗೆ ಸಿಕ್ಕಿ ಬೀಳುವ ಸಾಧ್ಯತೆಗಳು ಹೆಚ್ಚಿವೆ.

ಇನ್ನೂ 15 ಕ್ಯಾಮೆರ: ಈಗಾಗಲೇ ಮುಖ್ಯಮಂತ್ರಿಗಳ ರೂ. 100 ಕೋಟಿ ವಿಶೇಷ ಅನುದಾನದಡಿ 2 ಕೋಟಿಯನ್ನು ಸಂಚಾರ ವ್ಯವಸ್ಥೆ ಆಧುನೀಕರಣ ಮಾಡಲು ಮಹಾನಗರ ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರೊಂದಿಗೆ ನಗರದಲ್ಲಿ ಮತ್ತೆ 15 ಕ್ಯಾಮೆರಗಳನ್ನು ಅಳವಡಿಸುವ ಯೋಜನೆಗೆ ಮಂಜೂರಾತಿ ನೀರೀಕ್ಷಿಸಲಾಗಿದೆ ಎಂದು ಸಂದೀಪ್ ಪಾಟೀಲ್ ತಿಳಿಸಿದರು. ಈ ಮಧ್ಯೆ ಬೆಳಗಾವಿ, ಬಳ್ಳಾರಿ ಮತ್ತು ಗುಲ್ಬರ್ಗ ನಗರಗಳಲ್ಲಿ ಇಂತಹ ಒಟ್ಟು 45 ಕ್ಯಾಮೆರಗಳನ್ನಳವಡಿಸಲು ಪೋಲೀಸ್ ಇಲಾಖೆ ಟೆಂಡರ್ ಆಹ್ವಾನಿಸಿದೆ.

loading...

LEAVE A REPLY

Please enter your comment!
Please enter your name here