ಲಂಬಾಣಿ ತಾಂಡಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ

0
38

ನಿರ್ಲಕ್ಷ್ಯ ಮಾಡಿದ್ದಲ್ಲಿ, ಶಾಸಕರ ಮನೆ ಎದುರು ಧರಣಿ ಎಚ್ಚರಿಕೆ

ಬೆಳಗಾವಿ, 15- ಬೆಳಗಾವಿ ಜಿಲ್ಲೆಯ ರಾಮದುರ್ಗ, ಸವದತ್ತಿ ಮತ್ತು ಬೈಲಹೊಂಗಲ ತಾಲ್ಲೂಕುಗಳಲ್ಲಿ 50ಕ್ಕೂ ಹೆಚ್ಚು ಲಂಬಾಣಿ ತಾಂಡಾಗಳಿದ್ದು, ಇವುಗಳಿಗೆ ನವ್ಹಂಬರ್ ತಿಂಗಳಿನೊಳಗಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದಿದ್ದರೆ, ನವ್ಹಂಬರ್ ತಿಂಗಳ ಮೊದಲನೆ ವಾರದಲ್ಲಿ ಶಾಸಕರ ಮನೆ ಎದುರು ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದೆಂದು ಅಖಿಲ ಭಾರತ ಬಂಜಾರಾ ಸೇವಾ ಸಂಘದ ಜಿಲ್ಲಾಧ್ಯಕ್ಷ ಶ್ರೀಮತಿ ಶೈಲಜ ಅಶೋಕ್ ಚವ್ಹಾಣ್ ಅವರು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು, ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಅವರು, ಭಾರತಕ್ಕೆ ಸ್ವಾತಂತ್ರ್ಯ ದೊರಕಿ 50 ವರ್ಷ ಗತಿಸಿದರೂ ಇನ್ನುವರೆಗೆ ತಾಂಡಾಗಳಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ದೊರಕಿಸಲಾಗಿಲ್ಲ. ರಸ್ತೆ, ಚರಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ, ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ನವ್ಹಂಬರ್ ತಿಂಗಳೊಳಗಾಗಿ ಒದಗಿಸಬೇಕು. ಅಷ್ಟರೊಳಗೆ ಎಲ್ಲ ಲಂಬಾಣಿ ತಾಂಡಾಗಳು ಪರಿವರ್ತನೆಯಾಗಿ ಅಭಿವೃದ್ದಿಗೊಳ್ಳಬೇಕು, ಎಂದು ಅಖಿಲ ಭಾರತ ಬಂಜಾರಾ ಸೇವಾ ಸಂಘ ಒತ್ತಾಯಿಸಿದೆ.

ಬೈಲಹೊಂಗಲ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 7 ತಾಂಡಾಗಳ ಸ್ಥಿತಿ ತುಂಬಾ ಶೋಚನೀಯವಾಗಿದೆ. ಹಲ್ಕಿ ತಾಂಡೆ, ಹುಲಿಕೇರಿ ತಾಂಡೆ, ರಾಮಾಪುರ ತಾಂಡಾಗಳಲ್ಲಿ ಕಳೆದ ಮೂರು ವರ್ಷಗಳಿಂದ ಆಶ್ರಯ ಮನೆಗಳನ್ನು ನಿರ್ಮಿಸಿಕೊಟ್ಟಿಲ್ಲ. ಇಲ್ಲಿಯ ರಸ್ತೆಗಳು ಮೂಲ ಸ್ವರೂಪವನ್ನು ಕಳೆದುಕೊಂಡಿವೆ. ಬೈಲಹೊಂಗಲ ಶಾಸಕರು ತಾಂಡಾಗಳ ಬಗ್ಗೆ ನಿರ್ಲಕ್ಷ್ಯ ಧೋರಣೆಯನ್ನು ತಾಳಿದ್ದಾರೆ. ಅವರು ಈ ಕೂಡಲೇ ಲಂಬಾಣಿಗಳ ಸಮಸ್ಯೆಯನ್ನು ಆಲಿಸದಿದ್ದರೆ, ನವ್ಹಂಬರ್ ತಿಂಗಳ ಮೊದಲನೇ ವಾರದಲ್ಲಿ ಅಖಿಲ ಭಾರತ ಬಂಜಾರಾ ಸೇವಾ ಸಂಘ ಶಾಸಕರ ಮನೆ ಎದುರಿಗೆ ಧರಣಿ ಸತ್ಯಾಗ್ರಹ ಮಾಡಲಾಗುವುದೆಂದು ಬಂಜಾರಾ ಸಂಘ ಬೈಲಹೊಂಗಲ ಶಾಸಕರಿಗೆ ಎಚ್ಚರಿಕೆ ನೀಡಿದೆ.

loading...

LEAVE A REPLY

Please enter your comment!
Please enter your name here