ರೇಷ್ಮೆ ಬೆಳಗೆ ಅಗತ್ಯ ಮೂಲ ಭೂತ ಸೌಕರ್ಯ ಒದಗಿಸಲು ವಾಲ ಸಲಹೆ

0
60

ಬೆಂಗಳೂರು, ನ.24- ರೇಷ್ಮೆ ಬೆಳೆಯನ್ನು ಅಭಿವೃದ್ಧಿ ಪಡಿಸಲು ರೈತರಿಗೆ ಅಗತ್ಯವಾದ ಮೂಲಭೂತ ಸೌಕರ್ಯ ಒದಗಿಸಲು ರಾಜ್ಯಸರ್ಕಾರ ಮುಂದಾಗಬೇಕೆಂದು ರಾಜ್ಯಪಾಲ ವಾಜುಭಾಯಿ ವಾಲ ಸಲಹೆ ನೀಡಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ರೇಷ್ಮೆ ಬಗ್ಗೆ ಹಮ್ಮಿಕೊಂಡಿರುವ ನಾಲ್ಕು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತಾಡಿದರು.
ರೇಷ್ಮೆ ಬೆಳೆ ಅಭಿವೃದ್ಧಿಗೆ ಸಹಕಾರ ನೀಡಿದರೆ ಆದಿವಾಸಿಗಳ ಜೀವನವೂ ಅಭಿವೃದ್ಧಿ ಹೊಂದುತ್ತದೆ. ರಾಜ್ಯದಲ್ಲಿ ರೇಷ್ಮೆ ಬೆಳೆಯನ್ನು ಹೆಚ್ಚಾಗಿ ಬೆಳೆಯಬೇಕು. ಇದರಿಂದ ಹಲವು ಮಂದಿಗೆ ಉದ್ಯೋಗ ದೊರೆತಂತಾಗುತ್ತದೆ ಎಂದು ಕಿವಿಮಾತು ಹೇಳಿದರು.
ರೇಷ್ಮೆ ಬಗ್ಗೆ ಪ್ರತಿಯೊಬ್ಬರಲ್ಲೂ ಆಸಕ್ತಿ ಮೂಡಿಸುವ ಕೆಲಸ ಆಗಬೇಕಿದೆ. ಹಿಂದಿನ ಕಾಲದಲ್ಲಿ ಎಲ್ಲರೂ ರೇಷ್ಮೆ ಬಳಸುತ್ತಿದ್ದರು. ಆದರೆ, ಇದೀಗ ಹೆಚ್ಚಾಗಿ ಕಾಟನ್, ಲೈನಾನ್ ಬಳಸುತ್ತಿದ್ದಾರೆ. ಮತ್ತೆ ರಾಜ್ಯದಲ್ಲಿ ರೇಷ್ಮೆ ಹೆಚ್ಚಾಗಿ ಬಳಸಲು ಮಾಡಬೇಕಾದ ಮಾರ್ಗೋಪಾಯಗಳ ಬಗ್ಗೆ ಈ ವಿಚಾರ ಸಂಕಿರಣದಲ್ಲಿ ಚರ್ಚೆ ನಡೆಸಬೇಕೆಂದು ಹೇಳಿದರು.
ನಮ್ಮ ಅತಿಥಿಗಳನ್ನು ಅತಿಥಿ ದೇವೋಭವ ಎನ್ನುತ್ತೇವೆ. ವಿದೇಶಿಗಳಿಂದ ಬಂದಿರುವವರನ್ನು ಸ್ವಾಗತಿಸಿ ದೇಶದ ಸಂಸ್ಕತಿ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಅಭಿಪ್ರಾಯಪಟ್ಟರು.
ನಾಲ್ಕು ದಿನಗಳ ಕಾಲ ನಡೆಯುವ ಈ ವಿಚಾರ ಸಂಕಿರಣದಲ್ಲಿ ರೇಷ್ಮೆ ಅಭಿವೃದ್ಧಿ, ಆದಿವಾಸಿಗಳ ಜೀವನ ಅಭಿವೃದ್ಧಿ, ಮಾರುಕಟ್ಟೆಯಲ್ಲಿ ರೇಷ್ಮೆಯ ಪ್ರಚಾರದ ಕುರಿತು ಹೆಚ್ಚಾಗಿ ಚರ್ಚೆ ನಡೆಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೇಷ್ಮೆ ಇಂಡಸ್ಟ್ರೀಯಲ್ಲಿ ಸಾಧನೆ ಮಾಡಿದ ಲೂಯಿಸ್ ಪಾಶ್ಚರ್ ಅವಾರ್ಡ್ ಅನ್ನು ಮೂವರಿಗೆ ನೀಡಿ ಸನ್ಮಾನಿಸಲಾಯಿತು. ಅದರಲ್ಲೂ ಇಂಡಿಯಾದವರೇ ಆದ ಆದ ಡಾ.ಬಸವರಾಜ ಶಿವಪ್ಪ ಅಂಗಡಿ ಅವರು ರೇಷ್ಮೆ ಇಂಡಸ್ಟ್ರಿಯಲ್ಲಿ ಸಾಧನೆ ಮಾಡಿ ಪ್ರಶಸ್ತಿ ಪಡೆದಿದ್ದು, ಎಲ್ಲರ ಗಮನ ಸೆಳೆಯಿತು.
ಕೇಂದ್ರ ರೇಷ್ಮೆ ಮಂಡಳಿ ಮಾಸ ಪತ್ರಿಕೆ ಇಂಡಿಯನ್ ಸಿಲ್ಕ್‍ನ ಮಹಿಳಾ ಸಬಲೀಕರಣ ವಿಶೇಷಾಂಕ ಮತ್ತು ನೂತನ ಕ್ಷೇತ್ರಗಳಲ್ಲಿ ಹಿಪ್ಪನೆರಳೆ ರೇಷ್ಮೆ ಮತ್ತು ಮಹಿಳಾ ಆದಿವಾಸಿ ಮಹಿಳೆಯರ ಸಬಲೀಕರ ಕುರಿತು ಡಾ.ಸಂಜಯ್‍ಕುಮಾರ್ ಪಾಂಡ ಅವರು ಬರೆದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಇಂಟರ್‍ನ್ಯಾಷನಲ್ ಸೆರಿ ಕಲ್ಚರಲ್ ಕಮಿಷನ್ ಮಹಾಕಾರ್ಯದರ್ಶಿ ಈಶಿತಾರಾಯ್, ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಕುಮಾರ್ ತುಹಿನ್, ಸೆಂಟ್ರಲ್ ಸಿಲ್ಕ್‍ಬೋರ್ಡ್‍ನ ಅಧ್ಯಕ್ಷ ಎನ್.ಎಸ್.ಬಿಸೇಗೌಡ, ಭಾರತ ಜವಳಿ ಮಂತ್ರಾಲಯದ ಕಾರ್ಯದರ್ಶಿ ಡಾ.ಎಸ್.ಕೆ ಪಾಂಡ, ರಾಜ್ಯ ಹಾರ್ಟಿ ಕಲ್ಚರಲ್ ವಿಭಾಗದ ಪ್ರಧಾನ ಕಾರ್ಯದಶಿ ರಾಜೀವ್ ಚಾವ್ಲಾ ಮತ್ತಿತರರು ಇದ್ದರು.

loading...

LEAVE A REPLY

Please enter your comment!
Please enter your name here