ಜೆಡಿಎಸ್ ಭಿನ್ನಮತ ಸ್ಫೋಟ

0
36

ಬೆಳಗಾವಿ, ಡಿ.15-ಬೂದಿ ಮುಚ್ಚಿದ ಕೆಂಡಂದಂತಿದ್ದ ಜೆಡಿಎಸ್ ಭಿನ್ನಮತ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲೂ ಸ್ಫೋಟಗೊಂಡಿದ್ದು, ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೇ ಜಗಜ್ಜಾಹೀರಾಗಿದೆ.
ಅಧಿವೇಶನ ಪ್ರಾರಂಭವಾಗಿ ನಾಲ್ಕು ದಿನವಾಗಿದ್ದರೂ ಕೆಲ ಶಾಸಕರು ಈ ವರೆಗೂ ಬೆಳಗಾವಿಯತ್ತ ಮುಖಮಾಡಿಲ್ಲ. ಇನ್ನು ಕೆಲವರು ಭಾಗವಹಿಸಿದ್ದರೂ ಪಕ್ಷಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಮೌನವಹಿಸಿದ್ದಾರೆ.
ಶಾಸಕಾಂಗ ಪಕ್ಷದ ನಾಯಕ ಕುಮಾರ್ವಸಾಮಿ ಹಾಗೂ ಶಾಸಕರ ನಡುವಿನ ಸಂಬಂಧ ಹಳಸಿರುವುದು ಇದರಿಂದ ಸ್ಪಷ್ಟವಾಗಿದ್ದು , ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮ ಬೀರುವ ಮುನ್ಸೂಚನೆ ಮೂಡಿಸುತ್ತಿದೆ.
ಬೆಳಗಾವಿ ಅಧಿವೇಶನ ಪ್ರಾರಂಭವಾಗುವ ಮುನ್ನವೇ ಎಲ್ಲಾ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಸೂಚಿಸಲಾಗಿತ್ತು. ಇದಕ್ಕಾಗಿಯೇ ಕುಮಾರಸ್ವಾಮಿ ಅವರೇ ಶಾಸಕಾಂಗ ಸಭೆ ನಡೆಸಿದ್ದರು.
ಆದರೆ ಮಂಗಳವಾರದಿಂದ ಪ್ರಾರಂಭವಾಗಿ ನಾಲ್ಕು ಕಲಾಪ ನಡೆದರೂ ಕೆಲ ಶಾಸಕರು ಸುವರ್ಣಸೌಧದತ್ತ ಮುಖವನ್ನೇ ಮಾಡಿಲ್ಲ. ಕುಂಟು ನೆಪ ಹೇಳಿ ತಮ್ಮ ತಮ್ಮ ಕ್ಷೇತ್ರಗಳಲ್ಲೇ ಠಿಕಾಣಿ ಹೂಡಿದ್ದಾರೆ. ಇನ್ನು ಕೆಲವರು ಬಂದಿದ್ದರೂ ಸದನದಲ್ಲಿ ಬಾಯಿ ತೆಗೆಯಲು ಮೀನಾಮೇಷ ಎಣಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಶಾಸಕರಾದ ಜಮೀರ್ ಆಹಮ್ಮದ್, ಹೆಚ್.ಸಿ.ಬಾಲಕೃಷ್ಣ , ಇಕ್ಬಾಲ್ ಅನ್ಸಾರಿ ಸೇರಿದಂತೆ ಮತ್ತಿತರ ಶಾಸಕರು ಅಧಿವೇಶನದಲ್ಲಿ ಭಾಗವಹಿಸಿಲ್ಲ. ಬಾಲಕೃಷ್ಣ ಅವರು ಬೆಳಗಾವಿಗೆ ಬಂದಿದ್ದರೂ ಆನಾರೋಗ್ಯದ ನೆಪ ಹೇಳಿ ಗೈರು ಹಾಜರಾದರು. ಇನ್ನು ಕೆಲವರು ಸದನದ ಕಲಾಪದಲ್ಲಿ ಭಾಗವಹಿಸಿದರೂ ಬಾಯಿ ಬಿಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಭಾಗವಹಿಸಿದ್ದೆ ಸಾಧನೆ ಎಂಬಂತಾಗಿದೆ.
ಇದ್ದುದ್ದರಲ್ಲೇ ಪಕ್ಷದ ಒಂದಿಷ್ಟು ಮರ್ಯಾದೆ ಉಳಿಸಿದವರೆಂದರೆ ಶಾಸಕರಾದ ಚಲುವರಾಯಸ್ವಾಮಿ, ಕೋನರೆಡ್ಡಿ, ವೈ.ಎಸ್.ವಿ ದತ್ತ, ರೇವಣ್ಣ ಸೇರಿದಂತೆ ಬೆರಳಿಣಿಕೆಯಷ್ಟು ಮಾತ್ರ ಚರ್ಚೆ ಇಲ್ಲವೇ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಕುಮಾರಸ್ವಾಮಿ ಮಾತನಾಡುವಾಗ ಸದನದಲ್ಲಿ ಕೆಲವೇ ಕೆಲವು ಶಾಸಕರು ಹಾಜರಿದ್ದರು. ಸರ್ಕಾರದ ತಪ್ಪುಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟ ವೇಳೆ ಅವರ ಬೆಂಬಲಕ್ಕೆ ನಿಲ್ಲಬೇಕಿದ್ದ ಶಾಸಕರು ಸದನದ ಹೊರಗಡೆ ಹರಟೆ ಹೊಡೆಯುತ್ತಿದ್ದ ದೃಶ್ಯ ಕಂಡು ಬಂತು. ಇದು ಪಕ್ಷ ನಾಲ್ಕು ದಿಕ್ಕಾಗಿರುವುದನ್ನು ಸಾರಿ ಹೇಳುವಂತಿತ್ತು.
ಅಧಿವೇಶನದ ಮೊದಲ ದಿನವೇ ಬಿಜೆಪಿ ವಿಧಾನಸಭೆ ಹಾಗೂ ವಿಧಾನಪರಿಷತ್‍ನಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ ನಡೆಸಲು ನಿಲುವಳಿ ಸೂಚನೆ ಮಂಡಿಸಿ ಜನರ ಗಮನ ಸೆಳೆಯಲು ಮುಂದಾಗಿತ್ತು. ಸಾಲದ್ದಕ್ಕೆ ಸದನದ ಒಳಗಡೆ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿತು.
ಕಾಂಗ್ರೆಸ್ ಮತ್ತು ಬಿಜೆಪಿಯ ರಾಜಕೀಯ ದೊಂಬರಾಟವನ್ನು ಬಯಲು ಮಾಡಲು ಜೆಡಿಎಸ್‍ಗೆ ಸಾಕಷ್ಟು ಅವಕಾಶ ಸಿಕ್ಕಿತ್ತು. ಕಬ್ಬು ಬೆಳೆಗಾರರಿಗೆ ಬಾಕಿ ವೇತನ ಉಳಿಸಿಕೊಂಡಿರುವ ಮಾಲೀಕರೇ ಈ ಎರಡು ಪಕ್ಷಗಳಲ್ಲಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವರಾದ ಉಮೇಶ್ ಕತ್ತಿ, ಲಕ್ಷಣ್ ಸವದಿ, ಮುರುಗೇಶ್ ನಿರಾಣಿ, ಬಾಲಚಂದ್ರಜಾರಕಿಹೊಳಿ ಸಂಸದ ಪ್ರಕಾಶ್ ಹುಕ್ಕೇರಿ, ಪ್ರಭಾಕರ್ ಕೋರೆ ಸೇರಿದಂತೆ ಅನೇಕರ ಒಡೆತನದಲ್ಲಿ ಸರ್ಕಾರಿ ಕಾರ್ಖಾನೆಗಳಿವೆ.
ಈ ಎರಡು ಪಕ್ಷಗಳಿಂದ ಸಾವಿರಾರು ಕೋಟಿ ಬಾಕಿ ಹಣ ರೈತರಿಗೆ ಸಂದಾಯವಾಗಬೇಕಿದೆ. ಇದನ್ನೆಲ್ಲಾ ಕುಮಾರಸ್ವಾಮಿ ದಾಖಲೆಗಳ ಸಮೇತ ಬಯಲು ಮಾಡಲು ಕುಮಾರಸ್ವಾಮಿ ಮುಂದಾಗಿದ್ದರು.
ಅಷ್ಟರಲ್ಲಿ ಶಾಸಕ ಪ್ರಭು ಚೌವ್ಹಾಣ್ ಪ್ರಕರಣ ಉಭಯ ಸದನಗಳಲ್ಲಿ ಕೋಲಾಹಲಾ ಸೃಷ್ಟಿಸಿ ಒಂದು ದಿನ ಕಲಾಪವನ್ನೇ ನುಂಗಿ ಹಾಕಿತು.
ಇತ್ತ ಮೇಲ್ಮನೆಯಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಆಡಳಿತ ಮತ್ತು ಪ್ರತಿಪಕ್ಷಗಳು ಆರೋಪ ಪ್ರತ್ಯಾರೋಪದಲ್ಲಿ ನಿರತರಾಗಿದ್ದರೆ, ಸದಸ್ಯ ಬಸವರಾಜ ಹೊರಟ್ಟಿ ಹೊರತುಪಡಿಸಿ ಉಳಿದವರು ಹಾಜರಾತಿಗೆ ಮಾತ್ರ ಸೀಮಿತವಾಗಿದ್ದರು.
ಹೊರಟ್ಟಿ ಒಂದಿಷ್ಟು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಬೆಳಕು ಚಲ್ಲುವ ಪ್ರಮಾಣಿಕ ಪ್ರಯತ್ನ ಮಾಡಿದ್ದು ಬಿಟ್ಟರೆ ಇನ್ಯಾರು ಸೊಲ್ಲೆತ್ತಲಿಲ್ಲ.
ಸದಸ್ಯರಾದ ಶರವಣ, ಪಟೇಲ್ ಶಿವರಾಂ, ಸಂದೇಶ್ ನಾಗರಾಜ್, ಕೃಷ್ಣಪ್ಪ ಸೇರಿದಂತೆ ಅನೇಕರು ತುಟಿ ಬಿಚ್ಚಿ ಮಾತನಾಡಲು ಹಿಂಜರಿಯುತ್ತಿದ್ದರು. ಇದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ನಿದರ್ಶನವಾಗಿತ್ತು.
ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ದ ಮುಗಿಬೀಳಲು ಜೆಡಿಎಸ್ ಬಳಿ ಸಾಕಷ್ಟು ಅಸ್ತ್ರಗಳಿದ್ದವು. ಉಭಯ ಸದನಗಳಲ್ಲಿ ಇದನ್ನು ಆಡಳಿತ ಹಾಗೂ ಪ್ರತಿಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ಸಿಕ್ಕ ಅವಕಾಶವನ್ನು ಕೈ ಚಲ್ಲಿ ಕುಳಿತುಕೊಂಡಿತು.
ಯಾವಾಗ ಸದನ ಹೈಜಾಕ್ ಆಗುತ್ತದೆಯೋ ಎಂಬುದು ಆರಿವಾಯಿತೋ ಶುಕ್ರವಾರ ಸುವರ್ಣಸೌಧದ ಬಳಿ ಪ್ರತಿಭಟನೆ ನಡೆಸಿ ಸುಗಮ ಕಲಾಪ ನಡೆಸಬೇಕೆಂದು ಪ್ರತಿಭಟನೆ ನಡೆಸಿತು. ಈ ವೇಳೆಗಾಗಲೇ ಘಟಪ್ರಭಾ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿತ್ತು.

loading...

LEAVE A REPLY

Please enter your comment!
Please enter your name here