ದಾರ್ಶನಿಕ, ಸಿಡಿಲಸಂತ ಸ್ವಾಮಿವಿವೇಕಾನಂದ.

0
194

ಭಾರತದ ನೆಲದ ಮೇಲೆ ನಿಲ್ಲುವ ಪ್ರತಿಯೊಬ್ಬ ಭಾರತೀಯನಿಗೂ ಈ ನೆಲ ಪವಿತ್ರಕ್ಷೇತ್ರವೆನಿಸಿದೆ. ಈ ಭಾರತದ ಶ್ರೇಷ್ಟೋತ್ತಮ ಸುಪುತ್ರರ ಜೀವಂತ ವಿಚಾರಗಳ ಗಾಳಿಯನ್ನು ನಾವು ಉಸಿರಾಡುತ್ತಿರುವೆವೆಂದು ಅನಿಸದೆ ಇರಲಾರದು. ಇಲ್ಲಿಯ ಗಾಳಿಯ ಅಲೆಅಲೆಯಲ್ಲೂ ಆಧ್ಯಾತ್ಮಿಕತೆಯ ಸ್ಪಂದನ ತುಂಬಿದೆ. ತತ್ವಜ್ಞಾನ, ನೀತಿ, ಆಧ್ಯಾತ್ಮಗಳ ಜನ್ಮಭೂಮಿ ನಮ್ಮ ದೇಶ. ತನ್ನನ್ನು ತಾನು ಕಂಡುಕೊಳ್ಳುವಂಥ ಸರ್ವವಿದ್ಯೆಗಳ ಸಾಧನಾಸ್ಥಳ ಈ ಭಾರತ. ಮಾನವ ಹೃದಯವು ಮಾನವರನ್ನಷ್ಟೇ ಅಲ್ಲದೆ ಪಶು, ಪಕ್ಷಿ, ಸಸ್ಯಗಳನ್ನು ಸಹ ಪ್ರೀತಿಸುವವರಿಗೆ ವಿಶಾಲಗೊಂಡಿದ್ದು ಈ ಭೂಮಿಯಲ್ಲಿಯೇ. ವಿಶ್ವದ ಒಂದೊಂದು ನಾಡಿಮಿಡಿತವೂ ತನ್ನ ನಾಡಿಮಿಡಿತವೇ ಎಂಬುದನ್ನು ಅವನು ಕಂಡುಕೊಂಡಿದ್ದು ಈ ಪುಣ್ಯಭೂಮಿಯಲ್ಲಿಯೇ. ಭಾರತೀಯರಲ್ಲಿ ಭಾರತೀಯತೆಯನ್ನು ಉಳಿಸಿದ ಪುಣ್ಯಪುರುಷ, ಪುರುಷಸಿಂಹ ಸ್ವಾಮಿ ವಿವೇಕಾನಂದ. ಇವರ ಬದುಕು ತೆರೆದ ಪುಸ್ತಕ. ಅವರ ನಡೆ-ನುಡಿ ನಮ್ಮ ಬದುಕಿಗೊಂದು ದಾರಿದೀಪ. ನಮಗೀಗ ಇವರು ವಿಶ್ವಮಾನವರಾಗಿದ್ದಾರೆ.
ಇಪ್ಪತ್ತನೆಯ ಶತಮಾನದ ಯುಗಪುರುಷ, ಭಾರತದಲ್ಲಿ ಇವರ ಜನ್ಮದಿನಾಚರಣೆಯನ್ನು ಯುವದಿನಾಚರಣೆ ಎಂಬುದಾಗಿ ಆಚರಿಸುತ್ತರುವುದು ನಮ್ಮ ಭಾಗ್ಯವಾಗಿದೆ. ನರೇಂದ್ರ ಬಾಲ್ಯದಲ್ಲಿಯೇ ಮೇಧಾವಿ ಗುಣಗಳನ್ನು ಅಳವಡಿಸಿಕೊಂಡು ಆಟ-ಪಾಠಗಳಲ್ಲಿ ಮೊದಲಿಗನಾಗಿ ರಾಮಕೃಷ್ಣರ ಪರಮಹಂಸರ ಆತ್ಮೀಯ ಶಿಷ್ಯರಾಗಿದ್ದವರು. ವಿಲಿಯಂ ಹೇಸ್ಟಿಯವರ ಪ್ರತಿಭಾವಂತ ಶಿಷ್ಯಕೂಡ. 1893ರಲ್ಲಿ ಖೇತ್ರಿ ಮಹಾರಾಜರ ಸಹಾಯದಿಂದ ಸಮುದ್ರಯಾನವಾಗಿ ವಿದೇಶ(ಅಮೇರಿಕವನ್ನೊಳಗೊಂಡಂತೆ ಹಲವಾರು ದೇಶಗಳು)ಕ್ಕೆ ಹೋಗಿ ಮಾನವೀಯತೆಯ ಪ್ರತಿಬಿಂಬವಾದ ಹಿಂದುತ್ವವನ್ನು ಪರಿಚಯಿಸಿ ಬಂದವರು..
ಜಗತ್ತಿನ ಅನೇಕ ರಾಷ್ಟ್ರಗಳ ಪೈಕಿ ಆಕ್ರಮಣಕಾರಿ ಜನಾಂಗ ಆಗದಿದ್ದವರು ನಾವೊಬ್ಬರೇ. ಕಾರಣ ಭಗವದನುಗ್ರಹ ನಮ್ಮ ಮೇಲಿದೆ. ಶತಮಾನಗಳ ಆಘಾತಗಳಿಗೆ, ನೂರಾರು ಪರಕೀಯ ಆಕ್ರಮಣಗಳಿಗೆ ಜಗ್ಗದಿರುವ ಭಾರತ ನಮ್ಮದಾಗಿದೆ. ಮೃತ್ಯುಂಜಯ ಮನೋಬಲ ಹಾಗೂ ಸತ್ವದಿಂದ ಪ್ರಚಂಡ ಹೆಬ್ಬಂಡೆಗಿಂತ ಭದ್ರವಾಗಿ ನಿಂತಿರುವ ಭೂಮಿಯೇ ಇದು. ಇಂಥ ದೇಶದ ಮಕ್ಕಳು ನಾವು ಎಂಬ ಹೆಮ್ಮೆ ನಮಗಿದೆ. ಧರ್ಮದ ಬಗ್ಗೆ ವಿವೇಕಾನಂದರು ಹೇಳುವಂತೆ “ಇಂಗ್ಲೆಂಡಿನ ಆತ್ಮ ವ್ಯಾಪಾರದ್ದಾಗಿದ್ದರೆ, ಫ್ರಾನ್ಸ್‍ನ ಆತ್ಮ ರಾಜಕಾರಣಕ್ಕೆ ಸಂಬಂಧಿಸಿದ್ದು, ಜಪಾನಿನ ಆತ್ಮ ಕಲೆ ಮತ್ತು ಸೌಂದರ್ಯ ಆರಾಧನೆಗೆ ಸಂಬಂಧಿಸಿದ್ದರೆ, ಇಟಲಿಯ ಆತ್ಮ ಕಾನೂನು ಮತ್ತು ಶಿಸ್ತುಪಾಲನೆಯದ್ದಾಗಿದೆ. ಅಂತೆಯೇ ಭಾರತದ ಆತ್ಮ ಆಧ್ಯಾತ್ಮಕ್ಕೆ ಸಂಬಂಧಿಸಿದ್ದು ಅರ್ಥಾತ್ ಧರ್ಮಕ್ಕೆ ಸಂಬಂಧಿಸಿದ್ದು” ಎಂದ ಸ್ವಾಮೀಜಿ ಧರ್ಮವೇ ಭಾರತದ ಉಸಿರು ಎಂದಿದ್ದಾರೆ.
ಸ್ವದೇಶಕ್ಕೆ ನೀಡಿರುವ ಜಾಗೃತಿಯ ಸಂದೇಶ ಎಲ್ಲಾ ಕಾಲ, ದೇಶಗಳಿಗೂ ಅನ್ವಯವಾಗುವುದು ಇವರ ಚಿಂತನೆ. ಇತ್ತೀಚೆಗೆ ಭಾರತಕ್ಕೆ ಭೇಟಿ ಕೊಟ್ಟ ಅಮೇರಿಕೆಯ ಅಧ್ಯಕ್ಷ ಬರಾಕ್ ಒಬಾಮಾ ಭಾರತದ ಸಂಸದರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ತಾನು ವಿಶ್ವಮತ ಸಮ್ಮೇಳನದಲ್ಲಿ ಭಾಗವಹಿಸಿ ವಿಖ್ಯಾತರಾದ ಸ್ವಾಮಿ ವಿವೇಕಾನಂದರು ಭಾಷಣ ಮಾಡಿದ ಆ ಚಿಕ್ಯಾಗೋ ನಗರದಿಂದ ಬಂದವನು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.
ಹಿಂದೂ ಧರ್ಮದ ಶ್ರೇಷ್ಠತೆ ಹಾಗೂ ಅದರ ಉದಾತ್ತ ಚಿಂತನೆಯನ್ನು ಜಗತ್ತಿಗೆ ತಿಳಿಸಹೊರಟ ಈ ಸಿಡಿಲ ಸನ್ಯಾಸಿ ‘ಅಮೇರಿಕದ ನನ್ನ ಸಹೋದರ-ಸಹೋದರಿಯರೆ’ ಎನ್ನುವ ನಾಲ್ಕೇ ನಾಲ್ಕು ಶಬ್ಧಕ್ಕೆ ಇಡೀ ಅಮೇರಿಕವೆ ರೋಮಾಂಚಿತವಾಯಿತು. ಎಲ್ಲಾ ಮತಗಳ ತಾಯಿಯ ಪರವಾಗಿ ಮತ್ತು ಹಿಂದೂಗಳ ಪರವಾಗಿ ಎಂದು ಹೇಳುತ್ತ ಹಿಂದೂ ಧರ್ಮದ ವಿಶೇಷತೆಯನ್ನು ಸ್ಪಷ್ಟ ಅಕ್ಷರಗಳಲ್ಲಿ ಸಾರಿದ್ದರು. ವಿವೇಕಾನಂದರ ಚಿಕ್ಯಾಗೋ ಭಾಷಣ ಪಾಶ್ಚಾತ್ಯ ಜನ ಭಾರತಕ್ಕೆ ತಲೆಬಾಗುವಂತೆ ಮಾಡಿದರೆ 2001 ಸೆಪ್ಟೆಂಬರ್ 11ರಂದು 108 ವರ್ಷಗಳ ನಂತರ ಅದೆ ಅಮೇರಿಕ ಮತಾಂಧ ಮನಸ್ಸುಗಳ ಆಕ್ರಮಣಕ್ಕೆ ಬೆಚ್ಚಿ ಬೀಳುವಂತಾಯಿತು. ಒಬ್ಬ ವಿಖ್ಯಾತನ ಮಧುರ ಮಾತು ಕೋಟ್ಯಂತರ ಮನಸ್ಸನ್ನು ಗೆದ್ದರೆ ಮತ್ತೊಬ್ಬ ಕುಖ್ಯಾತನ ಮತಾಂಧ ಮನಸ್ಸಿಗೆ ಆ ಗಗನಚುಂಬಿ ಕಟ್ಟಡ ನೆಲಕ್ಕುರುಳಿ ಸಾವಿರಾರು ಅಮಾಯಕರ ಮಾರಣ ಹೋಮಕ್ಕೆ ಸಾಕ್ಷಿಯಾಯಿತು.
ಇವರ ಭಾಷಣವನ್ನು ಕೇಳಿ ಪ್ರಭಾವಿತರಾದ ಅಮೇರಿಕೆಯ ಪತ್ರಕರ್ತರು ಹಿಂದೂಧರ್ಮ, ಸಂಸ್ಕøತಿ ಮತ್ತು ನಾಗರೀಕತೆಗಳ ಪರಿಚಯವಾದದ್ದೆ ನಮಗೆ ಸ್ವಾಮಿ ವಿವೇಕಾನಂದರಿಂದ ಎಂದು ಬರೆಯುತ್ತ ನಾವು ಅರೆಬೆಂದ ಮಿಷನರಿಗಳನ್ನು ಆ ಶ್ರೇಷ್ಠ ದೇಶಕ್ಕೆ ಮತಾಂತರಕ್ಕೆ ಕಳಿಸುತ್ತಿದ್ದೆವೆಲ್ಲ ಎಂದು ತಮ್ಮನ್ನು ತಾವು ಹಳಿದುಕೊಂಡರು.
ತಮ್ಮ ಸಾಮಾಜಿಕ ದೌರ್ಬಲ್ಯವಾಗಿರುವ ಅಸ್ಪ್ರಶ್ಯತೆಯನ್ನು ಅವರು ಕಟು ಶಬ್ಧಗಳಿಂದ ಖಂಡಿಸಿದ್ದರು. ಹಿಂದೂ ಒಬ್ಬ ಮತಾಂತರಗೊಂಡರೆ ಹಿಂದುಗಳ ಸಂಖ್ಯೆಯಲ್ಲಿ ಕಡಿಮೆಯಾಗುವುದಷ್ಟೆ ಅಲ್ಲ, ಹಿಂದೂ ಧರ್ಮಕ್ಕೊಬ್ಬ ಶತೃ ಹೆಚ್ಚಾದಂತೆ ಎಂದು ನೇರವಾಗಿ ನುಡಿದವರು ಸ್ವಾಮಿ ವಿವೇಕಾನಂದರು. ಅವರ ಪ್ರಕಾರ ಪಾಶ್ಚಾತ್ಯರದ್ದು ವಿಜ್ಞಾನ ಕೇಂದ್ರಿತ ಬಹಿರ್ಮುಖ. ಭಾರತದ್ದು ಧರ್ಮಕೇಂದ್ರಿತ ಅಂತರ್‍ಮುಖ. ಅಂತರ್‍ಮುಖತೆಯಿಂದ ಬಹಿರ್‍ಮುಖತೆಗೊಂದು ಲಗಾಮು ಇರಬೇಕೆನ್ನುವುದು ಅವರ ನಿಲುವು. ದರಿದ್ರನಾರಾಯಣರ ಸೇವೆಗಾಗಿ, ಭರತಖಂಡದ ಉದ್ದಾರಕ್ಕಾಗಿ ಕೋಟಿಜನ್ಮಗಳನ್ನೆತ್ತಿ ಬರುವೆನೆಂದು ಹೇಳಿದವರು.
ಪ್ರಸ್ತುತ ವಿವೇಕಾನಂದರ 150ನೇ ಜನ್ಮವರ್ಷದ ಆಚರಣೆ ಮಾಡುತ್ತಿದ್ದ ನಾವು ಅವರ ಚಿಂತನೆಗಳು ಪ್ರಸ್ತುತವೇ? ಎಂಬ ಪ್ರಶ್ನೆ ಉದ್ಭವಿಸುವುದಾದರೆ ವಿವೇಕಾನಂದರಲ್ಲಿ ಅತ್ಯಂತ ಸಹಜವಾಗಿದ್ದ ಮೂರು ಪ್ರಮುಖ ಅಂಶಗಳನ್ನು ನಾವು ಗಮನಿಸಬೇಕು. ಮೊದನೆಯದಾಗಿ ವಿವೇಕಾನಂದರು ಓರ್ವ ಶ್ರೇಷ್ಠ ರಾಷ್ಟ್ರಭಕ್ತರಾಗಿದ್ದರು-ಕಾವಿ ವಸ್ತ್ರಧಾರಿಯಾಗಿದ್ದರೂ ಅವರು ಕೇವಲ ಆಧ್ಯಾತ್ಮ ಜೀವಿಯಾಗಿರಲಿಲ್ಲ. ಎರಡನೆಯದಾಗಿ ಅವರು ಆಧುನಿಕ ಭಾರತದ ನಿರ್ಮಾಪಕರಾಗಿದ್ದರು. ಮೂರನೆಯದಾಗಿ ಅವರು ಜಾಗತಿಕ ರಂಗದಲ್ಲಿ ಹಿಂದೂ ಚಿಂತನೆಯ ಪ್ರತಿಪಾದಕರಾಗಿದ್ದರು. ಇದು ಅವರಲ್ಲಿದ್ದ ಅಸಾಮಾನ್ಯ ದೇಶಭಕ್ತಿ.
ಒಮ್ಮೆ ವೃದ್ಧ್ಯಾಪ್ಯದ ವಾರಣಾಸಿ ಭಾರತೀಯರಿಗೆ ಅವರು ಕೊಟ್ಟ ಕರೆ ‘ಪ್ರಿಯ ಬಂಧು ಸಾರಿ ಸಾರಿ ಹೇಳು, ಭಾರತದ ಧೂಳೆ ನನ್ನ ಸರ್ವೋಚ್ಛ ದೇವಲೋಕ, ಭಾರತದ ಹಿತವೆ ನನ್ನ ಹಿತ’ ಎಂದು ಅವರಿಂದ ಪ್ರೇರಣೆ ಪಡೆದು ಸ್ವಾತಂತ್ರ ಹೋರಾಟಕ್ಕೆ ಅಣಿಯಾದವರು ಅಸಂಖ್ಯ ಭಾರತೀಯರು.
ಕವಿ ರವೀಂದ್ರರ ಪ್ರಕಾರ ಭಾರತವನ್ನು ತಿಳಿಯಬೇಕೆಂದರೆ ಅದು ‘ವಿವೇಕಾನಂದರ ಜೀವನವನ್ನು ಓದುವುದು’. ರಾಜಾಜಿಯವರ ಪ್ರಕಾರ ‘ವಿವೇಕಾನಂದರು ಹಿಂದೂಧರ್ಮದ ಶ್ರೇಷ್ಠತೆಯನ್ನು ಸಾರುವುದರೊಂದಿಗೆ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟವರು’. ಗಾಂಧೀಜಿಯವರು ‘ವಿವೇಕಾನಂದರ ಸಂದೇಶ ನನಗೆ ಸಾವಿರಪಟ್ಟು ಶಕ್ತಿಯನ್ನು ಹೆಚ್ಚಿಸಿದೆ’ ಎಂದಿರುವರು. ಹಾಗೆಯೇ ಸುಭಾಸ್‍ಚಂದ್ರ ಬೋಸರಲ್ಲಿ ಅವರು ಸ್ವಾತಂತ್ರ್ಯದ ಜ್ವಾಲೆಯನ್ನು ಪ್ರಜ್ವಲಿಸುವಂತೆ ಮಾಡಿದರು.
ವಿವೇಕಾನಂದರು ಅವತರಿಸಿ 150 ವರ್ಷಗಳು ಪೂರೈಸಿದ್ದರೂ ಅವರ ಚಿಂತನೆಗಳು ಭಾರತವನ್ನು ಸದಾಕಾಲ ಎಚ್ಚರಿಸುತ್ತಲೇ ಇವೆ. ಈ ನೆಲದ ಋಷಿಗಳ ಕನಸು 20ನೇ ಶತಮಾನ ಭಾರತದ ಶತಮಾನವಾಗಬೇಕು. ತಾಯಿ ಭಾರತಿ ಮತ್ತೊಮ್ಮೆ ಜಗತ್ತು ಒಂದೇ ಆಗಬೇಕೆನ್ನುವುದು. ಅದಕ್ಕೆ ಸ್ವಾಮಿ ವಿವೇಕಾನಂದರು ಹೇಳಿದ್ದು ಕೆಲವು ವರ್ಷಗಳ ಕಾಲ ನಿಮ್ಮ ದೇವ–ದೇವತೆಗಳನ್ನು ಮೂಟೆ ಕಟ್ಟಿ ಇಡಿ. ಮುಂದಿನ ಕೆಲವರ್ಷಗಳ ಕಾಲ ತಾಯಿ ಭಾರತಿ ಮಾತ್ರ ನಿಮ್ಮ ಆರಾಧ್ಯದೇವತೆಯಾಗಲಿ ಎಂದರು. ಅವರ ಈ ಕರೆಯನ್ನು ನಾವು ಅರಗಿಸಿಕೊಂಡರೆ ಮಾತ್ರ ಜಗತ್ತಿಗೆ ಶಾಂತಿ ಎನ್ನುವುದು ಉತ್ಪೇಕ್ಷೆ ಏನಲ್ಲ. ದೇಶಾದ್ಯಂತ ಒಂದು ವರ್ಷದವರೆಗೆ ಯುಗಮಾನೋತ್ಸವ ಆಚರಿಸುವುದು ಹೆಮ್ಮೆಯ ಸಂಗತಿಯಾಗಿದೆ. ಇಂತಹ ಆಚರಣೆಗಳ ಮೂಲಕ ಆದರ್ಶಗಳನ್ನು ಮೈಗೂಡಿಸಿಕೊಂಡು ಯುವಶಕ್ತಿ ದೇಶದ ಅಭಿವೃದ್ಧಿಯತ್ತ ಸಾಗಬೇಕಿದೆ.

-ಹೆಚ್.ಎಂ.ಗುರುಬಸವರಾಜಯ್ಯ.

loading...

LEAVE A REPLY

Please enter your comment!
Please enter your name here