ಹೈ-ಕ ಭಾಗದ ಅಭಿವೃದ್ದಿಗೆ ಕಾಂಗ್ರೆಸ್ ಸರಕಾರ ನಿರ್ಲಕ್ಷ್ಯಭಾವನೆ ತಾಳುತ್ತಿದೆ : ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆರೋಪ

0
43

ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಮೀಸಲಾಗಿಟ್ಟ 1 ನೇ ಹಂತದ 600 ಕೋಟಿ ರೂ. ಮತ್ತು 2 ನೇ ಹಂತದ 1000 ಕೋಟಿ ರೂ.ಗಳಲ್ಲಿ ಕೇವಲ 15 ರಿಂದ 20 ಕೋಟಿ ರೂ. ಮಾತ್ರ ಖರ್ಚು ಮಾಡಿದ್ದು, ಈ ಪ್ರದೇಶದ ಅಭಿವೃದ್ಧಿಗೆ ಸರಕಾರ ನಿರ್ಲಕ್ಷ್ಯಭಾವನೆ ತಾಳುತ್ತಿದೆ ಎಂದು ಮಾಜಿ ಮುಖ್ಯ ಮಂತ್ರಿ, ವಿಧಾನಸಭೆಯ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ ಆಪಾದಿಸಿದರು.
ಹನುಮಸಾಗರ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ ಬಳಿಕ ಇಲ್ಲಿಯ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರದಲ್ಲಿ ನಾನು ಮುಖ್ಯ ಮಂತ್ರಿಯಾಗಿದ್ದಾಗ ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಮತ್ತು ನಂಜುಂಡಪ್ಪ ವರದಿ ಪ್ರಕಾರ ಇರುವ ಅತಿ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಕ್ರಮ ಕೈಕೊಂಡು, 371 ಜೆ ಕಲಂಗೆ ತಿದ್ದುಪಡಿ ತರಲು ಸಂಪೂರ್ಣ ಬೆಂಬಲ ನೀಡಲಾಗಿತ್ತಲ್ಲದೇ, ಈ ಭಾಗದ ಜಮೀನುಗಳಿಗೆ ನೀರು ಹರಿಸುವ ಉದ್ದೇಶದಿಂದ ಕೃಷ್ಣಾ ಬಿ ಸ್ಕೀಂ ಕೊಪ್ಪಳ ಏತ ನಿರಾವರಿ ಯೋಜನೆ ಅನುಷ್ಠಾನಗೊಳಿಸಿ, ಹಣ ಮಂಜೂರಿ ಮಾಡಿ, ಶಂಕುಸ್ಥಾಪನೆ ಮಾಡುವಂಥ ದೃಢ ನಿರ್ಧಾರ ತೆಗೆದುಕೊಂಡಿದ್ದೆವು. ಆದರೆ ಈಗಿನ ಸರಕಾರದಲ್ಲಿ ಉತ್ತರ ಕರ್ನಾಟಕವನ್ನು ಮತ್ತು ಹೈದ್ರಾಬಾದ್ ಕರ್ನಾಟಕವನ್ನು ಕಡೆಗಾಣಿಸಲಾಗುತ್ತಿದೆ. ಎಂದು ಆರೋಪಿಸಿದ ಅವರು ಹೈದ್ರಾಬಾದ್ ಕರ್ನಾಟಕದಲ್ಲಿ 31 ಸಾವಿರ ಹುದ್ದೆಗಳು ಖಾಲಿ ಇವೆ. ಅವುಗಳನ್ನು ತುಂಬಿರಿ ಎಂದು ಅಧಿವೇಶನದಲ್ಲಿ ಒತ್ತಾಯಿಸಿದರೆ ಈವರೆಗೂ ಹುದ್ದೆ ಭರ್ತಿ ಮಾಡುವ ಕಾರ್ಯ ಮಾಡಿಲ್ಲ ಎಂದರು.
125 ತಾಲ್ಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ. ಮಳೆಯಿಲ್ಲದೇ ರೈತರ ಆತ್ಮಹತ್ಯೆ ಸರಣಿ ನಡೆಯುತ್ತಿದೆ. ಸಾಲ ವಸೂಲಿ ನಿಲ್ಲಿಸಿ ಎಂದರೂ ನಿಲ್ಲಿಸಿಲ್ಲ. ಬೆಳೆ ಹಾನಿ ಪರಿಹಾರ ನೀಡುತಿಲ್ಲ. ನಾನು ಮುಖ್ಯ ಮಂತ್ರಿಯಾಗಿದ್ದಾಗಲೂ ಬರಗಾಲ ಇತ್ತು. ಕೂಡಲೇ ಕ್ರಮ ಕೈಕೊಂಡು ರೈತರ 25 ಸಾವಿರ ರೂ.ಗಳವರೆಗಿನ ಸಾಲ ಮನ್ನಾ ಮಾಡಿದ್ದೆವು. ಅದರಿಂದ 3600 ಕೋಟಿ ರೂ. ಹೊರೆಯಾಗಿತ್ತು. ಕೇವಲ 10 ತಿಂಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿ ಮುಖ್ಯ ಮಂತ್ರಿ ಪದವಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸಿದ ತೃಪ್ತಿ ನನಗಿದೆ ಎಂದರು. ಬರಗಾಲದಿಂದ ತತ್ತರಿಸಿರುವ ರೈತರ ಸಾಲ ಬಡ್ಡಿ ಮನ್ನಾ ಮಾಡಬೇಕು, ಪರಿಹಾರ ಧನ ನೀಡಬೇಕು. ಬೀಜ ಗೊಬ್ಬರ ಸಬ್ಸಿಡಿಯಲ್ಲಿ ನೀಡಬೇಕು ಅಂದರೆ ರೈತರು ಬದುಕುತ್ತಾರೆ. ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ರೈತರ ಶಾಪ ತಟ್ಟುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ದೇಶವನ್ನು ಆರ್ಥಿಕ ಪ್ರಗತಿಯತ್ತ ಮೋದಿಯವರು ಮುನ್ನಡೆಸುತ್ತಿದ್ದಾರೆ. ರೈತರ, ಅಸಂಘಟಿತ ಕಾರ್ಮಿಕರ, ದೀನದಲಿತರ ಪರವಾಗಿರುವ ಪ್ರಧಾನಿ ಮೋದಿ ಅವರು ಬಲಾಢ್ಯ ಮತ್ತು ಸದೃಢ ದೇಶವನ್ನು ಕಟ್ಟುವಲ್ಲಿ ಶ್ರಮಿಸುತ್ತಿದ್ದಾರೆ. ಕೇಂದ್ರ ಸರಕಾರದಿಂದ ಆಗಬೇಕಾದ ಹೆದ್ದಾರಿ ಮಂಜೂರು, ಕುಡಿಯುವ ನೀರು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೇಂದ್ರ ಮಂತ್ರಿಗಳೊಂದಿಗೆ ಮತ್ತು ಪ್ರಧಾನ ಮಂತ್ರಿಗಳೊಂದಿಗೆ ಚರ್ಚಿಸಿ ಮಾಡಲಾಗುವದು. ರಾಜ್ಯ ಸರಕಾರವೂ ಕೇಂದ್ರದೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಅಭಿವೃದ್ಧಿ ಪರ ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು.
ಶಾಸಕರಾದ ದೊಡ್ಡನಗೌಡ ಪಾಟೀಲ, ಹಾಲಪ್ಪ ಆಚಾರ ಮುಂತಾದವರು ಮಾತನಾಡಿದರು.
ಕಾರ್ಯಕ್ರಮಕ್ಕೂ ಮುಂಚೆ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು. ಹಲವಾರು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕಾರ್ಯಕ್ರಮದ ನಂತರ ಶೆಟ್ಟರ್ ಸೇರಿದಂತೆ ಗಣ್ಯರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ, ಹಾಲಪ್ಪ ಆಚಾರ, ಕಳಕಪ್ಪ ಬಂಡಿ, ಜಿ.ಪಂ. ಅಧ್ಯಕ್ಷ ಅಮರೇಶ ಕುಳಗಿ, ಜಿ.ಪಂ. ಸದಸ್ಯೆ ಲಕ್ಷ್ಮೀದೇವಿ ಹಳ್ಳೂರ, ತಾ.ಪಂ. ಅಧ್ಯಕ್ಷೆ ಸುವರ್ಣ ತುರಾಯಿ, ಉಪಾಧ್ಯಕ್ಷೆ ಶರಣಮ್ಮ, ಗ್ರಾ.ಪಂ. ಅಧ್ಯಕ್ಷೆ ರತ್ನಾ ತಳವಾರ, ಉಪಾಧ್ಯಕ್ಷೆ ದ್ರಾಕ್ಷಾಯಣಿ ಕಟಗಿ, ವಿ.ಎಚ್.ನಾಗೂರ, ಬಸವರಾಜ ಹಳ್ಳೂರ, ತಾ.ಪಂ. ಸದಸ್ಯರು, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಮುಖಂಡರು ಮುಂತಾದವರು ಉಪಸ್ಥಿತರಿದ್ದರು.
ಮುಖಂಡ ಬಸವರಾಜ ಹಳ್ಳೂರ ಸ್ವಾಗತಿಸಿದರು. ರಾಮಚಂದ್ರ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಪಿಡಿಓ ನಿಂಗಪ್ಪ ಮೂಲಿಮನಿ ವಂದಿಸಿದರು.

loading...

LEAVE A REPLY

Please enter your comment!
Please enter your name here