ವಚನ ಸಿಂಚನ-13

0
226

 

ಕತ್ತೆಗೇಕಯ್ಯ ಕಡಿವಾಣ, ತೊತ್ತಿಗೇಕಯ್ಯ ತೋಳಬಂದಿ

ಶ್ವಾನಂಗೆ ಆನೆಯ ಚೋಹವೇಕಯ್ಯ, ಹಂದೆಗೇಕಯ್ಯ ಚಂದ್ರಾಯುಧ

ಶಿವನಿಷ್ಠೆಯಿಲ್ಲದವಂಗೆ ವಿಭೂತಿ, ರುದ್ರಾಕ್ಷಿ, ಶಿವಮಂತ್ರ, ಶಿವಲಿಂಗವೆಂಬ

ಶಿವಚೋಹವೇಕಯ್ಯ ಇವರಿಂಗೆ

ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೆ.

ಶಿಲಾಂಛನಕ್ಕೆ ಶರಣೆಂಬೆ, ಲಾಂಛನಕ್ಕೆ ತಕ್ಕ ಆಚರಣೆ ಇಲ್ಲದಿದ್ದರೆ ಕೂಡಲಸಂಗಮದೇವಾ ನೀ ಸಾಕ್ಷಿಯಾಗಿ ಛೀ ಎಂಬೆಷಿ ಎಂಬುದು ಲಿಂಗಾಯತ ಧರ್ಮಗುರುವಿನ ಸ್ಪಷ್ಟ ನಿಲುವು. ಯಾರು ಯಾವುದೇ ವೆೇಷಗಳನ್ನು ಹೊಂದಿರಲಿ ಅದಕ್ಕೆ ತಕ್ಕ ವ್ಯಕ್ತಿತ್ವವನ್ನು ಅವರು ಹೊಂದಿರಬೇಕಾಗುತ್ತದೆ. ಹಾಗೆಯೇ ಶಿವವೇಷವನ್ನು ಹೊಂದಿಯೂ ಶಿವನಿಷ್ಠೆ ಇಲ್ಲದಿದ್ದರೆ ಆ ವೇಷದಿಂದ ಯಾವ ಪ್ರಯೋಜನವೂ ಇಲ್ಲ ಎಂಬುದನ್ನು ಸೋದಾಹರಣವಾಗಿ ತಿಳಿಸುವ ಈ ವಚನ ಎಡೆಯೂರಿನ ಶ್ರೀ ತೋಂಟದ ಸಿದ್ಧಲಿಂಗ ಯತಿವರ್ಯರದು.

ಹೊರಿಸಿದಷ್ಟನ್ನು ಹೊತ್ತು ಮುಂದೆ ಸಾಗುವ, ಹೊತ್ತ ವಸ್ತುವಿನ ಮೌಲ್ಯವನ್ನರಿಯದ ಪ್ರಾಣಿ ಕತ್ತೆ. ಅದಕ್ಕೆ ಮೂರ್ಖಪ್ರಾಣಿ ಎಂಬ ಹೆಸರು ಜನಜನಿತ. ಮೂರ್ಖರನ್ನು, ಬುದ್ದಿ ಇಲ್ಲದವರನ್ನು ಕತ್ತೆ ಎಂದು ಸಂಬೋಧಿಸುವುದೂ ವಾಡಿಕೆ. ಇಂಥ ಕತ್ತೆಯ ಮೇಲೆ ಸವಾರಿ ಮಾಡುವವರನ್ನೂ ಮೂರ್ಖರೆಂದೇ ಜನ ಪರಿಗಣಿಸುತ್ತಾರೆ. ಆದರೆ ಕುದುರೆಯ ವಿಷಯ ಹಾಗಲ್ಲ. ಅದು ಘನ ಗಾಂಭೀರ್ಯದ ಪ್ರಾಣಿ. ಅತ್ಯಂತ ವೇಗವಾಗಿ ಚಲಿಸುವ ಬಲಿಷ್ಠಪ್ರಾಣಿ. ಪ್ರಾಚೀನ ಕಾಲದಿಂದಲೂ ರಾಜ ಮಹಾರಾಜರು, ಶೂರಸೈನಿಕರು, ದಕ್ಷದಂಡಾಧಿಕಾರಿಗಳು, ಸಾಧು-ಸಂತರು ಅದನ್ನು ಸಂಚಾರ ಸಾಧನವಾಗಿ ಬಳಸಿಕೊಂಡಿರುವುದುಂಟು. ಜಾತ್ರೆ, ಮದುವೆ ಮುಂತಾದ ಉತ್ಸವ, ಸಮಾರಂಭಗಳಲ್ಲಿ ರಾಜಠೀವಿಯಿಂದ ಮೆರೆಯುವ ಈ ಕುದುರೆಗಳನ್ನು ಸುಂದರ ಥಡಿ, ಹಣೆಪಟ್ಟಗಳಿಂದ ಶೃಂಗರಿಸಿರುವುದು ನೋಡುಗರ ಕಣ್ಮನ ಸೆಳೆಯುತ್ತದೆ. ಇಂಥ ಅಲಂಕಾರ ಕುದುರೆಗೆ ಮಾತ್ರ ತಕ್ಕುದು. ಅದಬಿಟ್ಟು ಕಡಿವಾಣಾದಿ (ಥಡಿ) ಅಲಂಕಾರಗಳನ್ನು ಕತ್ತೆಗೆ ಮಾಡಿದರೆ ಆಭಾಸವೆನಿಸದಿರದು.

ಮನೆಯ ಒಡತಿಯಾದವಳು ಬೆಳ್ಳಿ, ಬಂಗಾರಗಳಿಂದ ಸಿದ್ಧಗೊಳಿಸಿದ,  ಕಂಠಿಹಾರ, ತೋಳಬಂದಿಗಳನ್ನು ಧರಿಸುವುದು ಭೂಷಣ ಪ್ರಾಯ ವಾದುದು. ಆದರೆ ಅದೇ ಆಭರಣಗಳನ್ನು ಮನೆಗೆಲಸ ಮಾಡುವ ದಾಸಿ ಧರಿಸಿದರೆ ಜನನಿಂದೆಗೆ ಗುರಿಯಾಗುವಳು. ಹಾಗೆಯೇ ಆನೆಯ ಲೆಕ್ಕಾಚಾರ ದಲ್ಲಿ ನಾಯಿಯೊಂದು ಕ್ಷುದ್ರವಾದ ಪ್ರಾಣಿ. ಅಂದಣವನೇರಿದ ಸೊಣಗ ಕಂಡಡೆ ಬಿಡದು ಮುನ್ನಿ ನ ಸ್ವಭಾವವನು ಎಂದು ಬಸವ ಣ್ಣನವರು ಈ ನಾಯಿ ಸ್ವಭಾವ ವನ್ನು ತಮ್ಮ ವಚನಗಳಲ್ಲಿ ಹಲವೆಡೆ ವಿಡಂಬಿಸಿದ್ದಾರೆ. ಆನೆಯೋ ಅತ್ಯಂತ ಗಂಭೀರ ನಡೆಯನ್ನು ಹೊಂದಿದ ಪ್ರಾಣಿ. ಮಠ-ಮಂದಿರ, ರಾಜ-ಮಹಾರಾಜರ ಆಸ್ಥಾನಗಳಲ್ಲಿ ರಾಜಮರ್ಯಾ ದೆಯಿಂದ ಬದುಕುವ ಪ್ರಾಣಿ ಎಂದರೆ ಅತಿಶಯೋಕ್ತಿಯಲ್ಲ. ವಿಶೇಷ ಉತ್ಸವಗಳಲ್ಲಿ ಆನೆಯನ್ನು ವಿಶೇಷ ರೀತಿಯಿಂದ ಅಲಂಕರಿಸಿ ಕರೆದೊಯ್ಯುವುದು ಆ ಉತ್ಸವಗಳ ಘನತೆಯನ್ನು ಗೌರವವನ್ನು ಹೆಚ್ಚಿಸುವಂತಹದು. ಆದರೆ ಈ ವಿಶೇಷ ವೇಷಾದಿ ಅಲಂಕಾರಗಳನ್ನು ಕ್ಷುದ್ರಜೀವಿ ನಾಯಿಗೆ ಮಾಡುವುದು ತೀರ ಅಸಮಂಜಸವೆನಿ ಸುತ್ತದೆಯಲ್ಲದೇ ಅದು ಮೂರ್ಖತನದ ಪರಮಾವಧಿಯೂ ಎನಿಸುತ್ತದೆ.

ಪ್ರಾಚೀನ ಕಾಲದ ಯುದ್ಧಗಳಲ್ಲಿ ವೀರಾದೀವೀರರು ಮಾತ್ರ ಚಂದ್ರಾಯುಧವನ್ನು ಬಳಸುತ್ತಿದ್ದರು. ವೀರಾಧಿವೀರರ ಕೈಗಳಲ್ಲಿದ್ದರೆ ಮಾತ್ರ ಅದು ಶೋಭಾಯಮಾನ ವಾಗಿರುತ್ತದೆ. ಚಂದ್ರಾಯುಧವನ್ನು ಹಿಡಿದ ಶೂರರು ಯುದ್ಧಗಳಲ್ಲಿ ರಣಚಂಡಿಯಂತೆ ಹೋರಾಡಿ ವೈರಿಗಳ ರುಂಡಗಳನ್ನು ಚಂಡಾಡುತ್ತಿದ್ದರು. ಆದರೆ ಅದೇ ಚಂದ್ರಾಯುಧವನ್ನು ವೈರಿಗಳನ್ನು ನೋಡಿದಾಕ್ಷಣ ಹೆದರಿ ಓಡುವ ರಣಹೇಡಿಯ ಕೈಯಲ್ಲಿ ಕೊಟ್ಟರೆ ಅದರಿಂದ ಏನು ಪ್ರಯೋಜನ? ಶಿಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದು ಫಲವೇನು?ಷಿ ಎಂದು ಒಂದೆಡೆ ಬಸವಣ್ಣನವರೂ ಪ್ರಶ್ನಿಸಿದ್ದಾರೆ. ಹೀಗೆ ಯಾವ ವಸ್ತುಗಳು ಯಾರ ಹತ್ತಿರವಿದ್ದರೆ ಭೂಷಣವೋ ಅವರ ಹತ್ತಿರವೇ ಇರಬೇಕು. ಇಲ್ಲದಿದ್ದರೆ ಉಪಹಾಸಕ್ಕೆ ಗುರಿಯಾಗುವುದು ಖಂಡಿತ.

ಲಿಂಗಾಯತ ಧರ್ಮೀಯರಿಗೆ ಅಷ್ಟಾವರಣವೇ ಅಂಗ, ಪಂಚಾಚಾರವೇ ಪ್ರಾಣ, ಷಟ್ಸ್ಥಲವೇ ಆತ್ಮ ಎಂಬ ಮಾತೊಂದು ಸುಪರಿಚಿತ. ಗುರುಲಿಂಗಾದಿ ಅಷ್ಟ ಆವರಣಗಳನ್ನೂ, ಸದಾಚಾರ, ಲಿಂಗಾಚಾರಾದಿ ಪಂಚ ಆಚಾರಗಳನ್ನೂ ಹೊಂದಿ ಷಟ್ಸ್ಥಲ ಸಾಧನಾರತರಾಗಬೇಕೆಂಬುದು ಇದರ ಹಿಂದಿನ ಉದ್ದೇಶ. ವಿಭೂತಿ, ರುದ್ರಾಕ್ಷಿಗಳನ್ನು ಧರಿಸಿ ಇಷ್ಟಲಿಂಗವನ್ನು ಶಿವಮಂತ್ರವನ್ನುಚ್ಚರಿಸುತ್ತ ಪೂಜಿಸುವುದು ಲಿಂಗವಂತ ಧರ್ಮೀಯರ ಪರಮ ಕರ್ತವ್ಯ. ಇಷ್ಟಲಿಂಗ, ವಿಭೂತಿ, ರುದ್ರಾಕ್ಷಿಗಳನ್ನು ಧರಿಸುವುದಾಗಲಿ, ಶಿವಮಂತ್ರ (ಗುರುದೀಕ್ಷೆಯ ಸಂದರ್ಭದಲ್ಲಿ ಉಪದೇಶಿಸಿದ ಮಂತ್ರ)ವನ್ನು ಪಠಿಸುವುದಾಗಲಿ ಇವು ಬಹಿರಂಗದ ವೇಷಗಳಿದ್ದಂತೆ. ಇವನ್ನೇ ಶಿವಚೋಹ ಎಂದು ಸಿದ್ಧಲಿಂಗ ಶಿವಯೋಗಿಗಳು ಕರೆದಿದ್ದಾರೆ. ಆದರೆ ಈ ವೇಷವನ್ನು ಧರಿಸಿದ ಸಾಧಕನ ಅಂತರಂಗದಲ್ಲಿ ಶಿವನಿಷ್ಠೆ ಇಲ್ಲದಿದ್ದರೆ ಕತ್ತೆ ಕಡಿವಾಣವನ್ನು, ತೊತ್ತು ತೋಳಬಂದಿಯನ್ನು ಧರಿಸಿದಂತೆ, ಹೇಡಿ ಚಂದ್ರಾಯುಧವನ್ನು ಹಿಡಿದಂತೆ ಮತ್ತು ನಾಯಿ ರತ್ನಖಚಿತ ಅಂಬಾರಿ ಹೊತ್ತಂತೆ ಆ ಸಾಧಕನೂ ಅಪಹಾಸ್ಯಕ್ಕೆ ಗುರಿಯಾಗುವನು; ಉಪಹಾಸದ ವಸ್ತುವಾಗುವನು. ಹಾಗೆಯೇ ವಿಭೂತಿ, ರುದ್ರಾಕ್ಷಿ ಹಾಗು ಇಷ್ಟಲಿಂಗವನ್ನು ಧರಿಸಿದವರು ಲಿಂಗದಲ್ಲಿ ನಿಷ್ಠೆಯುಳ್ಳವರಾಗಬೇಕು. ಅನ್ಯಥಾ ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ, ಲಿಂಗದ ನಿಷ್ಠೆಯಿಲ್ಲದ ಭಕ್ತ ಇದ್ದರೇನೋ ಶಿವಶಿವಾ ಹೋದಡೇನೋ ಶಿವಶಿವಾ ಎನ್ನುವಂತಾಗುವುದು. ಆದ್ದರಿಂದ ಇಷ್ಟಲಿಂಗಧಾರಿಗಳು ಲಿಂಗನಿಷ್ಠೆಯುಳ್ಳವರಾಗಿ ಸದಾ ಸನ್ಮಾರ್ಗದಲ್ಲಿ ಮುನ್ನಡೆಯಬೇಕೆಂಬುದೇ ಈ ವಚನದ ಆಶಯವಾಗಿದೆ.

loading...

LEAVE A REPLY

Please enter your comment!
Please enter your name here