ಜೆಡಿಎಸ್ ಕಾರ್ಯಕರ್ತರ ಸಭೆ

0
39

ಗೋಕಾಕ,26: ತಾಲೂಕಿನ ಜನತೆಯಲ್ಲಿ ಕುತೂಹಲ ಕೆರಳಿಸಿದ್ದ ಜೆಡಿಎಸ್ ಕಾರ್ಯಕರ್ತರ, ಅಶೋಕ ಪೂಜಾರಿ ಬೆಂಬಲಿಗರ ಹಾಗೂ ಹಿತೈಷಿಗಳ ಸಭೆ ಇಂದು ನಗರದ ಜ್ಞಾನಮಂದಿರ ಅಧ್ಯಾತ್ಮ ಕೇಂದ್ರದಲ್ಲಿ ಜರುಗಿತು. ಗೋಕಾಕ ಮತಕ್ಷೇತ್ರದಾದ್ಯಂತ ಬಂದ ನೂರಾರು ಕಾರ್ಯಕರ್ತರು ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಬಿಚ್ಚಿಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ತಾಲೂಕಿನ ಮುಖಂಡರು, ಕಾರ್ಯಕರ್ತರ ನಿರ್ಧಾರಕ್ಕೆ ಬದ್ಧವಾಗಿದ್ದು ಕಾರ್ಯಕರ್ತರ ಅಭಿಪ್ರಾಯದಂತೆ ನಡೆದುಕೊಳ್ಳುವದಾಗಿ ತಿಳಿಸಿದರಲ್ಲದೆ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸದೈವ ಸ್ಪಂದಿಸುತ್ತಿದ್ದು ಇನ್ನುಮುಂದೆ ಕೂಡಾ ತಾಲೂಕಿನ ಅಭಿವೃದ್ಧಿಗಾಗಿ ಶ್ರಮಿಸುವದಾಗಿ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಯಾನಂದ ಮುನವಳ್ಳಿ ಅವರು ಮಾತನಾಡಿ ಪ್ರಾದೇಶಿಕ ಪಕ್ಷದಲ್ಲಿ ಇರುವದರಿಂದ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಲು ತುಂಬಾ ತೊಂದರೆಯಾಗುತ್ತಿದ್ದು ಅದಕ್ಕಾಗಿ ರಾಷ್ಟ್ರೀಯ ಪಕ್ಷಕ್ಕೆ ಸೇರಿ ಹಳ್ಳಿಯಿಂದ ದಿಲ್ಲಿಯವರೆಗೆ ತಾಲೂಕಿನ ಸಮಸ್ಯೆಗಳಿಗೆ ಹೋರಾಟ ನಡೆಸಲು ಅನುಕೂಲವಾಗುತ್ತದೆ ಎಂದರು.
ಸಭೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುವ ಮೂಲಕ ತಾಲೂಕಿನಲ್ಲಿ ಹೊಸ ರಾಜಕೀಯ ಧುೃವೀಕರಣಕ್ಕೆ ನಾಂದಿ ಹಾಡಲು ಒಮ್ಮತದಿಂದ ನಿರ್ಧರಿಸಲಾಯಿತು.
ಸಭೆಯ ನಂತರ ಅಶೋಕ ಪೂಜಾರಿ ಅವರು ಪತ್ರಕರ್ತರ ಜೊತೆ ಮಾತನಾಡುತ್ತ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಸಭೆಯಲ್ಲಿ ಆದ ನಿರ್ಣಯವನ್ನು ತಿಳಿಸಿ ಮುಂದಿನ ನಿರ್ಧಾರ ಕೈಗೊಳ್ಳುವದಾಗಿ ತಿಳಿಸಿದರು.
ಗೋಕಾಕ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್. ಅಧ್ಯಕ್ಷ ರಾಜುಗೌಡ ನಿರ್ವಾಣಿ, ಎಲ್.ಬಿ.ಹುಳ್ಳೇರ, ಅರ್ಜುನ ಪವಾರ, ರಾಜು ಜಾಧವ, ಸದಾಶಿವ ಗುದಗೋಳ, ನ್ಯಾಯವಾದಿಗಳಾದ ಎಸ್.ವಿ.ದೇಮಶೆಟ್ಟಿ, ಶಾಮಾನಂದ ಪೂಜೇರಿ ಹಾಗೂ ಸಿ.ಬಿ.ಗಿಡ್ಡನವರ, ದಸ್ತಗೀರ ಪೈಲವಾನ, ಲಕ್ಷ್ಮಣ ತೋಳಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದ ಕಾರ್ಯಕರ್ತರು ಭಾಗವಹಿಸಿದ್ದರು.
ಜೆಡಿಎಸ್ ಕಾರ್ಯಕರ್ತರ, ಅಶೋಕ ಪೂಜಾರಿ ಬೆಂಬಲಿಗರ ಹಾಗೂ ಹಿತೈಷಿಗಳ ಸಭೆಯ ಕಾರ್ಯಕಲಾಪಗಳನ್ನು ವೀಕ್ಷಿಸಿದಾಗ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಆಧಾರ ಸ್ಥಂಬ ಆಗಿದ್ದ ಅಶೋಕ ಪೂಜಾರಿ ಅವರು ಬಿಜೆಪಿ ಸೇರುವದು ನಿಶ್ಚಿತವಾಗಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಂತಾಗಿದೆ.

loading...

LEAVE A REPLY

Please enter your comment!
Please enter your name here