‘ಪುರಾಣ, ಪ್ರವಚನ, ಶರಣಚಿಂತನ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮಕ್ಕಳಿಗೆ ಪ್ರೇರೇಪಿಸಿ’ : ಶರಣೆ ಕಮಲಾ ಉಪ್ಪಿನ

0
164


ವಿಜಯಪುರ, : ಪುರಾಣ, ಪುಣ್ಯಕಥೆಗಳು ನಮ್ಮನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತವೆ. ಸಂಸ್ಕಾರದಿಂದ ನಡೆದಾಗಲೇ ಜೀವಕ್ಕೆ ಮೋಕ್ಷ ಲಭಿಸುವದು. ಮುಕ್ತಿಯ ರಹದಾರಿಯೆಂದರೆ ಆಧ್ಯಾತ್ಮಿಕ ಸಾಧನೆ. ಆಧ್ಯಾತ್ಮಿಕ ಪ್ರವಚನ, ಚಿಂತನಗಳು ನಮಗೆ ಮಾನವೀಯ ಮೌಲ್ಯಗಳನ್ನು, ಉತ್ತಮ ಸಂಸ್ಕಾರಗಳನ್ನು ಮೂಡಿಸುತ್ತವೆ ಎಂದು ಸಮಾಜ ಸೇವಕಿ, ಶರಣೆ, ಶ್ರೀಮತಿ ಕಮಲಾ ಉಪ್ಪಿನ ಹೇಳಿದರು.
ನಗರದ ಬೆಂಡಿಗೇರಿ ಓಣಿಯ ಶ್ರೀ ಪವಾಡಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡ 44ನೇ ಶರಣ ಚಿಂತನ ಶಿವಾನುಭವ ಗೋಷ್ಠಿ ಹಾಗೂ ಕಲಬುರಗಿ ಶ್ರೀ ಶರಣಬಸವೇಶ್ವರ ಜೀವನದರ್ಶನ ಪ್ರವಚನ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುರಾಣ, ಪ್ರವಚನ, ಶರಣಚಿಂತನ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸುವಂತೆ ಪ್ರೇರೆಪಿಸಬೇಕು. ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಮೂಡಿಸುವಲ್ಲಿ ಇಂತಹ ಸತ್ಸಂಗಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಶಿಕ್ಷಕಿ ಶ್ರೀಮತಿ ಸುವರ್ಣಾ ಹುರಕಡ್ಲಿ ಅವರು, ದೇವರ ಸೃಷ್ಠಿಗಳಾದ ನಾವೆಲ್ಲ, ಮಾನವರೇ ಹೊರತು ಮೇಲು-ಕೀಳು, ಉಚ್ಛ-ನೀಚ ಅಲ್ಲ. ಮಹಿಳೆಯರು ಕುಟುಂಬ ನಿರ್ವಹಣೆಯ ಜೊತೆಗೆ ಒಳ್ಳೆಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ ಬಸವನ ಬಾಗೇವಾಡಿಯ ಶ್ರೀ ಒಡೆಯರ ಶಿವಪ್ರಕಾಶ ಶಿವಾಚಾರ್ಯರು ಆಶೀರ್ವÀಚನ ನೀಡಿ, ಕಾಯಕದಲ್ಲಿಯೇ ಭಗವಂತನನ್ನು ಕಾಣುವ ಪರಿಕಲ್ಪನೆ ಹುಟ್ಟು ಹಾಕಿದವರೆ ನಮ್ಮ ಶರಣರು. ಒಬ್ಬೊಬ್ಬ ದಾರ್ಶನಿಕರಲ್ಲೂ ಒಂದೊಂದು ವಿಶಿಷ್ಟ ಮೌಲ್ಯ ಕಾಣಬಹುದು. ಭಕ್ತಿಗೆ ಬಸವಣ್ಣ, ವೈರಾಗ್ಯಕ್ಕೆ ಮಹಾದೇವಿಯಕ್ಕ, ಅಂತೆಯೇ ಮಹಾದಾಸೋಹಕ್ಕೆ ಕಲಬುರಗಿ ಶರಣ ಬಸವೇಶ್ವರರು ಹೆಸರಾದವರು. ನಿರಂತರವಾದ ಅನ್ನದಾಸೋಹ, ಜ್ಞಾನದಾಸೋಹದಿಂದ ಮಾತ್ರ ನಾಡು ಬೆಳಗಲು ಸಾಧ್ಯ. ಸಂಸಾರ ವ್ಯಾಮೋಹದ ಚಿಂತೆ ಬಿಟ್ಟು ಸ್ವಲ್ಪಕಾಲ ಭಗವಂತನ ಚಿಂತನೆಗೆ ಮುಂದಾಗಬೇಕು ಎಂದು ಹೇಳಿದರು.
ಪ್ರೊ. ಶರಣಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿ ಸಂಗಮೇಶ ಶರಣರು ಅದ್ಯಕ್ಷತೆ ವಹಿಸಿದ್ದರು. ಸಿಂದಗಿಯ ಸಮಾಜ ಸೇವಕ ಮಲ್ಲಿಕಾರ್ಜುನ ಉಪ್ಪಿನ ಅವರು ದೇವಸ್ಥಾನಕ್ಕೆ 5001 ರೂ.ಗಳ ದಾಸೋಹ ಕಾಣಿಕೆ ನೀಡಿದರು. ಬಸಪ್ಪ ಇಜೇರಿ, ಎಸ್.ಡಿ. ನಂದಿಕೋಲ, ನ್ಯಾಯವಾದಿ ಲಕ್ಷ್ಮೀ ದೇಸಾಯಿ, ಚಿಕ್ಕಯ್ಯಸ್ವಾಮಿ ನಂದಿಕೋಲಮಠ, ಮಹಿಳಾ ಮಂಡಲದ ಅಧ್ಯಕ್ಷೆ ಶಿವಕಾಂತಮ್ಮ ಮಠ, ಪುಷ್ಪಾ ಮಹಾಂತಮಠ, ಶಶಿಕಲಾ ಇಜೇರಿ, ರೂಪಾ ಲಾಳಸಂಗಿ, ಮಹಾನಂದಾ ಅಳ್ಳಗಿ, ವಿದ್ಯಾ ಕೋಟೆನ್ನವರ,ಶಾರದಾ ಕೋರಿ, ಶಂಕರ ಸಾಹುಕಾರ, ಶರಣು ಕಟ್ಟಿಮನಿ, ಅಶೋಕ ಮಹಾಂತಮಠ, ಬಿ.ಪಿ. ಕಟ್ಟಿಮನಿ, ಶಿಕ್ಷಕ ನಾಯಕ, ನಾಗಯ್ಯ ಹಿರೇಮಠ ಇನ್ನಿತರರು ಉಪಸ್ಥಿತರಿದ್ದರು.
ಕಲಾವಿದರಾದ ಶರಣಕುಮಾರ ಯಾಳಗಿ ಹಾಗೂ ರಾಜು ಕಟ್ಟಿ ಸಂಗಾವಿ ಭಕ್ತಿಗೀತೆ ಹಾಗೂ ಪ್ರಾರ್ಥನಾ ಗೀತೆಗಳನ್ನು ಹಾಡಿದರು. ಪ್ರೊ. ಸುಭಾಸಚಂದ್ರ ಕನ್ನೂರ ಸ್ವಾಗತಿಸಿ ಪರಿಚಯಿಸಿದರು. ಪ್ರೊ. ಶರಣಗೌಡ ಪಾಟೀಲ ನಿರೂಪಿಸಿದರು. ಪ್ರೊ. ಯು.ಎನ್. ಕುಂಟೋಜಿ ನಿರ್ವಹಿಸಿದರು. ಶಿಕ್ಷಕ ಎನ್. ಜಿ. ಕೋಟ್ಯಾಳ ವಂದಿಸಿದರು.

loading...

LEAVE A REPLY

Please enter your comment!
Please enter your name here