ಸೌಂದರ್ಯಲಹರಿ ಪಠಿಸುವ, ಪಾರಾಯಣ ಮಾಡುವ ವಿಧಾನ ಮಹತ್ವ

0
186


ಯಲ್ಲಾಪುರ : ಶಂಕರ ಸಂದೇಶ ಮತ್ತು ಅವರು ನಮಗೆ ನೀಡಿದ ಸೌಂದರ್ಯ ಲಹರಿಯ ಮಹತ್ವದ ಕುರಿತಾದ ಅಭಿಯಾನವನ್ನು ನಾಡಿನಾದ್ಯಂತ ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೂವರೆ ಲಕ್ಷ ಜನರಿಗೆ ಸೌಂದರ್ಯಲಹರಿ ಪಠಿಸುವ, ಪಾರಾಯಣ ಮಾಡುವ ವಿಧಾನದ ಮಹತ್ವವನ್ನು ತಲುಪಿಸುವ ಉದ್ದೇಶವನ್ನು ಸ್ವರ್ಣವಲ್ಲೀ ಶ್ರೀಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರಿನ ಎಡತೊರೆ ಶ್ರೀಯೋಗಾನಂದ ಸರಸ್ವತೀ ಪೀಠದ ಶ್ರೀಶಂಕರ ಭಾರತೀ ಸ್ವಾಮಿಗಳು ನುಡಿದರು.
ಅವರು ಶನಿವಾರ ಸಂಜೆ ನಾಯಕನಕೆರೆಯ ಶ್ರೀಶಾರದಾಂಬಾ ದೇವಸ್ಥಾನದಲ್ಲಿ ಕಳೆದ ಮೂರು ದಿನಗಳಿಂದ ಅಭಿಯಾನದ ಉದ್ದೇಶದಿಂದ ವಾಸ್ತವ್ಯವಿದ್ದು, ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
2016 ನವೆಂಬರ್ 13 ರ ಭಾನುವಾರ ಶಿರಸಿಯಲ್ಲಿ 60,000 ಸೌಂದರ್ಯಲಹರಿ ಏಕಕಾಲದಲ್ಲಿ, ಏಕಸ್ವರದಲ್ಲಿ ಪಠಣ ಮಾಡುವ ಮಹಾ ಜಿಲ್ಲಾ ಸಮರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ. ಅದನ್ನು ಇಂದು ಸ್ವರ್ಣವಲ್ಲೀ ಶ್ರೀಗಳ ಜೊತೆ ಚರ್ಚಿಸಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಘಟ್ಟದ ಮೇಲಿನ ಆರೂ ತಾಲೂಕುಗಳಲ್ಲಿ ಈ ಅಭಿಯಾನಕ್ಕೆ ಸ್ವರ್ಣವಲ್ಲೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನೇತೃತ್ವ ವಹಿಸಲಿದ್ದು, ಘಟ್ಟದ ಕೆಳಗಿನ ತಾಲೂಕುಗಳ ನೇತೃತ್ವವನ್ನು ತಾವೇ ವಹಿಸುವುದಾಗಿ ಶ್ರೀಗಳು ತಿಳಿಸಿದರು.
ಕಳೆದ ನ.7 ರಿಂದ ಅಭಿಯಾನವನ್ನು ಪ್ರಾರಂಭಿಸಲಾಗಿದ್ದು, 2017 ಅಕ್ಟೋಬರ್ 17 ರಂದು ಬೆಂಗಳೂರಿನಲ್ಲಿ ಅಭಿಯಾನದ ಮಹಾಸಮರ್ಪಣೆ ನಡೆಯಲಿದೆ. ಅದಕ್ಕೂ ಮುಂಚಿತವಾಗಿ ಪ್ರತಿ ಜಿಲ್ಲೆಗಳಲ್ಲಿ ಅಭಿಯಾನದ ಸಮರ್ಪಣೆ ನಡೆಸುವ ಆಶಯ ಹೊಂದಲಾಗಿದೆ. ಈ ಮಹಾಸಮರ್ಪಣೆಯಲ್ಲಿ 10 ಲಕ್ಷ ಜನರನ್ನು ಸೇರಿಸುವ ಸಂಕಲ್ಪ ಮಾಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ನಿತ್ಯ ಜೀವನದಲ್ಲಿ ದಕ್ಷಿಣಾಮೂರ್ತಿ ಸ್ತೋತ್ರ ಮತ್ತು ಸೌಂದರ್ಯ ಲಹರಿಯನ್ನು ಪಾರಾಯಣ ಮಾಡುವುದರಿಂದ ಅನಾರೋಗ್ಯ ಇದ್ದವರು ಆರೋಗ್ಯವಂತರಾಗುವುದು, ಕಷ್ಟ ಕಾರ್ಪಣ್ಯದಿಂದ ಇರುವವರು ಅದನ್ನು ಹೋಗಲಾಡಿಸಿಕೊಳ್ಳುವ ಸಾಮಥ್ರ್ಯ ಈ ಶಾಂಕರ ಸ್ತೋತ್ರಗಳಿಗಿದೆ ಎಂದರು.
2007 ರಲ್ಲಿ ನಡೆದ ಶಾಂಕರ ಸ್ತೋತ್ರ ಅಭಿಯಾನದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಮಾತೆಯರು ಭಾಗವಹಿಸಿದ್ದರು. ಇದೊಂದು ಐತಿಹಾಸಿಕ ಕಾರ್ಯಕ್ರಮ. ಅದರಲ್ಲೂ ಮನುಷ್ಯನ ಇಂದಿನ ಗೊಂದಲ, ಸಮಸ್ಯೆಗಳಿಗೆ ನೆಮ್ಮದಿಯ ಜೀವನಕ್ಕೆ ಇದೊಂದು ಅಮೃತಪ್ರಾಯವಾಗಿದೆ ಎಂದ ಶ್ರೀಗಳು ಈ ಅಭಿಯಾನದಲ್ಲಿ ಜಿಲ್ಲೆಯ ಸಮಸ್ತ ಜನರು ಜಾತಿ, ಮತ, ಬೇಧವಿಲ್ಲದೇ ಭಾಗವಹಿಸಿ ಅಭಿಯಾನವನ್ನು ಯಶಸ್ವಿಗೊಳಿಸಿ ತಮ್ಮ ಜೀವನವನ್ನು ಸಾರ್ಥಕತೆಯತ್ತ ಕೊಂಡೊಯ್ಯುವುದಕ್ಕೆ ಕಾರಣರಾಗಬೇಕು ಎಂದರು.
ಎಡತೊರೆ ಮಠದ ವೇದಾಂತ ಭಾರತಿ ಟ್ರಸ್ಟ್‍ನ ನಿರ್ದೇಶಕರಾದ ಡಾ.ಶ್ರೀಧರ ಭಟ್ಟ ವೇದಾಂತ ಭಾರತಿ ಹಮ್ಮಿಕೊಂಡ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ, ಈ ಅಭಿಯಾನವನ್ನು ಯಾವ ಸ್ವರೂಪದಲ್ಲಿ ಸಂಘಟಿಸಬೇಕು, ಶ್ರೀಗಳ ಸಂಕಲ್ಪದಂತೆ ಮುನ್ನಡೆಯಬೇಕೆಂಬ ಬಗ್ಗೆ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಾ ಸಮಿತಿಯನ್ನು ಕೂಡ ರಚಿಸಲಾಯಿತು. ಶಾರದಾಂಬಾ ದೇವಸ್ಥಾನದ ಗೌರವ ಕಾರ್ಯದರ್ಶಿ ಶಂಕರ ಭಟ್ಟ ತಾರೀಮಕ್ಕಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ತಾಲೂಕಿನ ಹಿರಿ-ಕಿರಿಯ ಬಂಧುಗಳು, ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here