ಶೀಘ್ರವೇ ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರ ನೇಮಕ: ಸಿಎಂ

0
67

ಬೆಳಗಾವಿ 05: ಮಹಾರಾಷ್ಟ್ರದೊಂದಿಗಿನ ಬೆಳಗಾವಿ ಗಡಿ ವಿವಾದ ಸಂಬಂಧ ಸುಪ್ರೀಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಬಾಬು ಅವರನ್ನು ಕರ್ನಾಟಕ ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಳ್ಳಲು ಅವರಿಗೆ ಪತ್ರ ಬರೆಯಲಾಗಿದೆ. ಅವರಿಂದ ಉತ್ತರ ಬಂದ ಮೇಲೆ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸೋಮವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿವಾದ ಕುರಿತು ಸರ್ಕಾರ ನೇಮಕ ಮಾಡಲಿರುವ ಅಧ್ಯಕ್ಷ ಸ್ಥಾನವನ್ನು ಶೀಘ್ರವೇ ಭರ್ತಿ ಮಾಡಲಾಗುವುದು. ಈ ಕುರಿತು ಈಗಾಗಲೇ ಸುಪ್ರಿಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ರಾಜೇಂದ್ರ ಬಾಬು ಅವರಿಗೆ ಸರಕಾರ ಪತ್ರ ಬರೆದಿದೆ. ಅವರು ಒಪ್ಪಿಕೊಂಡರೆ ಅಧ್ಯಕ್ಷರನ್ನಾಗಿ ಮಾಡಿ ಗಡಿ ದಾವೆ ಹಾಗೂ ನಾಡಿನ ನೆಲಜಲ ಸಂರಕ್ಷಣೆಗೆ ಗಮನಹರಿಸಲಾಗುತ್ತದೆ ಎಂದರು.
ಮಹಾರಾಷ್ಟ್ರದವರು ಮೊದಲಿನಿಂದಲೂ ಗಡಿ ವಿಚಾರವಾಗಿ ಕಿತಾಪತಿ ಮಾಡಿಕೊಂಡು ಬಂದಿದ್ದಾರೆ. ಅವರು ಏನೇ ಕಿತಾಪತಿ ಮಾಡಿದರೂ ನಾವು ಅದಕ್ಕೆ ಸೊಪ್ಪು ಹಾಕುವುದಿಲ್ಲ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಅವರು ಪುನರುಚ್ಚರಿಸಿದರು.
ಉತ್ತರ ಕರ್ನಾಟಕದಲ್ಲಿ ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ ರೈತರು ಹೋರಾಟ ನಡೆಸುತ್ತಿದ್ದರೂ ಸರಕಾರ ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿರೋಧ ಪಕ್ಷದವರು ಮಾಡುತ್ತಿರುವ ಆರೋಪವನ್ನು ತಳ್ಳಿಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಗೋವಾ ಹಾಗೂ ಮಹಾರಾಷ್ಟ್ರ ಸರಕಾರಕ್ಕೆ ಪತ್ರ ಬರೆದಿದ್ದೇವೆ. ಅವರಿಂದ ಯಾವುದೇ ಸಕಾರಾತ್ಮಕ ಉತ್ತರಗಳು ಬಂದಿಲ್ಲ. ಈ ಹಿಂದೆ ಕೇಂದ್ರ ಸರಕಾರಕ್ಕೂ ಹಲವು ಬಾರಿ ಮನವಿ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಮನವಿಗೆ ಸರಿಯಾಗಿ ಸ್ಪಂದಿಸಿಲ್ಲ. ರಾಜ್ಯ ಸರಕಾರ ತನ್ನ ವ್ಯಾಪ್ತಿಯೊಳಗೆ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ಕಾರಣರಾದವರ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಮಾಹಿತಿ ಕಲೆ ಹಾಕುತ್ತಿದ್ದು, ಅವರು ಹಾಗೂ ಅಭ್ಯರ್ಥಿಗಳಿಂದ ವರದಿ ತಂದ ಬಳಿಕ ಕ್ರಮ ಕ್ರಮಗೊಳ್ಳುವುದಾಗಿ ಸ್ಪಷ್ಟಪಡಿಸಿದರು.
ಮಾತಿನ ಚಕಮಕಿ:ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸ್ವಾಗತಿಸಲು ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದ ಪರಿಣಾಮವಾಗಿ ಕೆಲ ಕಾಲ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್ ಮಹಿಳಾ ಘಟದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರಿಗೂ ಅನುಮತಿ ನೀಡದ ಸಂದರ್ಭದಲ್ಲಿ ಅವರು ಐಜಿಪಿ ಉಮೇಶ ಕುಮಾರ ಅವರ ವಾಹನದಲ್ಲಿ ಆಗಮಿಸಬೇಕಾಯಿತು.

loading...

LEAVE A REPLY

Please enter your comment!
Please enter your name here