ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ: ಕರ್ಕಿಕೋಡಿ ನಾಮಪತ್ರ ಸಲ್ಲಿಕೆ

0
72


ಕಾರವಾರ : ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಫೆ.28ರಂದು ನಡೆಯಲಿರುವ ಕಸಾಪ ಚುನಾವಣೆಗೆ ಹೊನ್ನಾವರದ ಸಾಹಿತಿ ಅರವಿಂದ ಕರ್ಕಿಕೋಡಿ ಅವರು ಬುಧವಾರ ನಾಮಪತ್ರ ಸಲ್ಲಿಸಿದರು. ತಹಸೀಲ್ದಾರ್ ಕಚೇರಿಯಲ್ಲಿನ ಸಹಾಯಕ ಚುನಾವಣಾಕಾರಿ ಎನ್. ಎಂ. ನಾಯ್ಕ ನಾಮಪತ್ರ ಸ್ವೀಕರಿಸಿದರು.
ನಾಮಪತ್ರ ಸಲ್ಲಿಕೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅರವಿಂದ ಕರ್ಕಿಕೋಡಿ ಅವರು ಜಿಲ್ಲೆಯ ಕಸಾಪದಲ್ಲಿನ ಅವ್ಯವಸ್ಥೆ ಸರಿಪಡಿಸುವ ಗುರಿ ತನ್ನದಾಗಿದೆ. ಜಿಲ್ಲಾ ಕಸಾಪ ಘಟಕದ ಅಧ್ಯಕ್ಷ ಸ್ಥಾನಕ್ಕೆ ಜರುಗುವ ಚುನಾವಣೆಗೆ ನನ್ನ ಸ್ಪರ್ಧೆಯು ಎಲ್ಲ ತಾಲೂಕುಗಳ ಸದಸ್ಯ ಮತದಾರರ ಧ್ವನಿಯಾಗಿದ್ದು ಅವರ ಒತ್ತಾಸೆ ಮೇಲೆ ಸ್ಪರ್ಧೆಗೆ ಇಳಿದಿದ್ದೇನೆ. ಜಿಲ್ಲೆಯಲ್ಲಿ ನಿಂತ ನೀರಾಗಿರುವ ಕನ್ನಡ ಸಾಹಿತ್ಯ ಪರಿಷತ್‍ನ ಅಮೂಲಾಗ್ರ ಬದಲಾವಣೆಗೆ ಪ್ರಯತ್ನಿಸಬೇಕಾಗಿದೆ ಎಂದರು.
ಈ ಚುನಾವಣೆ ಅರ್ಹತೆಯನ್ನು ಎತ್ತಿ ಹಿಡಿಯಲಿ ಎಂಬುದು ಕಸಾಪ ಆಜೀವ ಸದಸ್ಯರ ಹಂಬಲವಾಗಿದೆ. ಇಲ್ಲಿ ಜಾತಿ ವಾಸನೆ, ಹಣದ ಮದ, ದುರಂಹಕಾರ ಯಾವುದೂ ತಲೆ ಎತ್ತದೇ ಅಪ್ಪಟ ಸಂವಿಧಾನಾತ್ಮಕ ರೀತಿಯಲ್ಲಿ ಅರ್ಹ ಅಭ್ಯರ್ಥಿಯ ಆಯ್ಕೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಕಳೆದ ಹದಿನೇಳು ವರ್ಷಗಳಿಂದ ನಾನು ಜಿಲ್ಲೆಯ ಸಾಹಿತ್ಯಕ, ಸಾಂಸ್ಕøತಿ ವಲಯದಲ್ಲಿ ಕ್ರೀಯಾಶೀಲನಾಗಿ ತೊಡಗಿಸಿಕೊಂಡಿದ್ದೇನೆ. ಅಸಹಾಯಕರ ಧ್ವನಿಯಾಗಿ, ಸಾಹಿತ್ಯದ ಪ್ರಭೆಯಾಗಿ ಹಣತೆ ಪತ್ರಿಕೆಯನ್ನು ಹೊರಡಿಸುತ್ತಿದ್ದೇನೆ ಎಂದರು.
ಹಲವಾರು ಕಥೆ, ಕವನ, ವಿಮರ್ಶೆ, ಲೇಖನ, ಜನಾಂಗಿಕ ಅಧ್ಯಯನ, ನಾಡುನುಡಿಗೆ ಸಂಬಂಧಪಟ್ಟ ಚಿಂತನ, ಹಿರಿಯ ಸಾಹಿತಿಗಳ ಸಂದರ್ಶನ ಹತ್ತು ಹಲವು ರೀತಿಯ ಕನ್ನಡ ಸೇವೆಯಲ್ಲಿ ನಿರತನಾಗಿದ್ದು ಕನ್ನಡ ಸಾಹಿತ್ಯ ಪರಿಷತ್‍ನ ಹೊನ್ನಾವರ ಘಟಕದ ಅಧ್ಯಕ್ಷ ಹಾಗೂ ಜಿಲ್ಲಾ ಘಟಕದ ಪ್ರಧಾನ ಸಂಚಾಲಕನಾಗಿ ಹೊಣೆಗಾರಿಕೆಯಿಂದ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ ಕೇವಲ ಅಧ್ಯಕ್ಷನ ಸರ್ವಾಧಿಕಾರಿ ಧೋರಣೆಗೆ ಆಸ್ಪದವಾಗದಂತೆ, ಎಲ್ಲ ಆಜೀವ ಸದಸ್ಯರ ಅಭಿಪ್ರಾಯಗಳಿಗೆ ಮನ್ನಣೆ ನೀಡಲಾಗುವುದು. ಕಸಾಪ ಚಟುವಟಿಕೆಗಳಲ್ಲಿ ಎಲ್ಲ ಆಜೀವ ಸದಸ್ಯರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಿ, ಪ್ರಜ್ಞಾವಂತರ ಪಾರದರ್ಶಕ ರೀತಿಯ ವೇದಿಕೆಯನ್ನಾಗಿಸಲು ಪ್ರಯತ್ನಿಸಲಾಗುವುದು. ಪ್ರಾದೇಶಿಕ ಅಸಮಾನತೆಗೆ ಅವಕಾಶವಿಲ್ಲದಂತೆ, ಜಿಲ್ಲೆಯ ಎಲ್ಲರನ್ನೂ ಸಮಭಾವದಿಂದ ಜಾತ್ಯಾತೀತವಾಗಿ ಜಿಲ್ಲಾ ಕಸಾಪವನ್ನು ಬಲಗೊಳಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಹೇಂದ್ರಕುಮಾರ್ ಬಿ.ಪಿ., ಮಾಧವ್ ಮಾಸ್ತರ್, ಎನ್. ವಿ. ನಾಯಕ, ನಾಗರಾಜ ಹೆಗಡೆ, ಎಂ. ಟಿ. ನಾಯ್ಕ, ಉಮೇಶ ಮುಂಡಳ್ಳಿ, ಮನೋಜ್ ಜನ್ನು, ಪ್ರಕಾಶ ಜನ್ನು, ಕೃಷ್ಣ ಪಾಟೀಲ್, ಗಂಗಾಧರ್ ನಾಯ್ಕ, ದಯಾನಂದ ಮಿರಾಶಿ, ವಿಷ್ಣು ವೇಳಿಪ್ ಹಾಗೂ ಇನ್ನಿತರರು ಇದ್ದರು.

loading...

LEAVE A REPLY

Please enter your comment!
Please enter your name here