ಯುವಜನತೆಯ ಜೀವನದಲ್ಲಿ ವಿವೇಕಾನಂÀದರ ಚಿಂತನೆ ಅಗತ್ಯ

0
68


ಕಾರವಾರ : ಶ್ರೀಗಂಧವನ್ನು ತೇಯ್ದಷ್ಟು ಸುವಾಸನೆ ಬೀರುವಂತೆ ಯುವ ಜನತೆ ಸಹ ತಮ್ಮ ಜೀವನವನ್ನು ಸ್ವಾಮಿ ವಿವೇಕಾನಂದರ ಚಿಂತನೆಗಳ ಮೂಲಕ ಮನಸ್ಸಿನೊಳಗೆ ತೇಯ್ದು ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು ನಿವೃತ್ತ ಪ್ರಾಚಾರ್ಯ ಪ್ರೊ. ಆರ್. ಎಸ್. ಹಬ್ಬು ಹೇಳಿದರು.
ಅವರು ನಗರದ ಜಿಲ್ಲಾ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಕಾಲೇಜು ಶಿಕ್ಷಣ ಇಲಾಖೆ, ವಿವಿಧ ಸಂಘ ಸಂಸ್ಥೆಗಳು ಹಾಗೂ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಜೀವನದಲ್ಲಿ ಶ್ರೀಮಂತಿಕೆ ಶಾಶ್ವತವಲ್ಲವೆಂಬುದನ್ನು ವಿವೇಕಾನಂದರು ಪ್ರತಿಪಾದಿಸಿದ್ದರು. ಜಗತ್ತಿನ ಎಲ್ಲ ಧರ್ಮಗಳ ಸಾರವೂ ಒಂದೇ ಆಗಿದೆ ಎಂಬ ವಿಶ್ವ ಧರ್ಮದ ಸಂದೇಶವನ್ನು ಜಗತ್ತಿಗೆ ಸಾರಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದರು.
ವಿವೇಕಾನಂದರ ಸಂದೇಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿ ಮಾತನಾಡಿ ದೇವರು ಎಲ್ಲರಲ್ಲೂ ಇದ್ದಾನೆ. 50 ವರ್ಷಗಳ ಕಾಲ ದೇವಾಲಯಗಳನ್ನು ನಿರ್ಮಿಸದೆ ದೀನರಿಗೆ, ನಿರ್ಗತಿಕರಿಗೆ ವಾಸಕ್ಕೆ ಮನೆ ಕಟ್ಟಿಕೊಡುವಂತೆ ಸಾರಿದ ದೇಶದ ಏಕೈಕ ದಾರ್ಶನಿಕ ವಿವೇಕಾನಂದರಾಗಿದ್ದಾರೆ. ವಿಶ್ವಕ್ಕೆ ಭ್ರಾತೃತ್ವದ ಸಂದೇಶ ಸಾರಿದ ಅವರು ವಿಶ್ವ ಮಾನವರಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಉಜ್ವಲಕುಮಾರ್ ಘೋಷ್ ಮಾತನಾಡಿ ಇಂದಿನ ಯುವಕರಲ್ಲಿ ದೇಶ ಭಕ್ತಿ ಹೆಚ್ಚಬೇಕು. ಜೀವನದಲ್ಲಿ ನಿರ್ದಿಷ್ಟ ಗುರಿಯಿದ್ದರೆ, ಆ ಗುರಿಯನ್ನು ಸಾಧಿಸುವ ಛಲವಿದ್ದರೆ ಯಶಸ್ಸು ಸಾಧಿಸಲು ಸಾಧ್ಯವೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅಲ್ಲದೆ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೆ ಸಮಾಜಕ್ಕಾಗಿ ದುಡಿಯುವ ಉತ್ತಮ ಶಕ್ತಿಯಾಗಿ ಹೊರಹೊಮ್ಮುವಂತೆ ಕರೆ ನೀಡಿದರು. ವಿದ್ಯಾರ್ಥಿಗಳ ಪರವಾಗಿ ಸ್ಫೂರ್ತಿ ಶೆಟ್ಟಿ, ಆಶಾ ಎಚ್., ಗಣಪತಿ ಹೆಗಡೆ ಮಾತನಾಡಿದರು.
ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಡಾ.ಕಲ್ಪನಾ ಕೆರವಡಿಕರ ಸ್ವಾಗತಿಸಿದರು. ಡಾ.ವಿ.ಎಂ.ಗಿರಿ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ವಿಜಯಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಬಹುಮಾನ ವಿತರಣೆ ಕಾರ್ಯಕ್ರಮವನ್ನು ಪ್ರೊ.ಗೀತಾ ವಾಲೀಕಾರ ನಡೆಸಿಕೊಟ್ಟರು. ಡಾ.ಚಂದ್ರಶೇಖರ ಲಮಾಣಿ ವಂದಿಸಿದರು. ಕಶ್ಮಿರಾ ಮತ್ತು ಚೈತ್ರಾ ಸಂಗಡಿಗರು ನಾಡಗೀತೆ ಹಾಡಿದರು. ಮೀನಾಕ್ಷಿ ಪಾಟೀಲ ಪ್ರಾರ್ಥಿಸಿದರು.

loading...

LEAVE A REPLY

Please enter your comment!
Please enter your name here