ಜಂತು ಹುಳು ನಿವಾರಣಾ ಕಾರ್ಯಕ್ರಮ ಅವಶ್ಯಕ

0
120


ಸಿದ್ದಾಪುರ : ಹಿಂದೆಲ್ಲಾ ಪಾಲಕರು ಚಿಕ್ಕಮಕ್ಕಳಿಗೆ ಜಂತು ಹುಳು ನಿವಾರಣೆಗಾಗಿ ಔಷಧೋಪಚಾರ ಮಾಡಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಈ ಪದ್ಧತಿ ಕಡಿಮೆಯಾಗಿದೆ. ಮಕ್ಕಳಲ್ಲಿ ಜಂತು ಹುಳು ವೃದ್ಧಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು ಆ ನಿಟ್ಟಿನಲ್ಲಿ ಜಂತು ಹುಳು ನಿವಾರಣಾ ಕಾರ್ಯಕ್ರಮ ಅತ್ಯಂತ ಅವಶ್ಯಕ ಎಂದು ತಾಲೂಕಾ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ, ತಾ.ಪಂ. ಕಾರ್ಯನಿರ್ವಹಣಾ ಅಧಿಕಾರಿ ಶ್ರೀಧರ ಭಟ್ ಹೇಳಿದ್ದಾರೆ. ಅವರು ಬಾಲಿಕೊಪ್ಪ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ತಾಲೂಕಾ ಮಟ್ಟದ ಶಾಲಾ ಆರೋಗ್ಯ ಸಮಿತಿ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸಂಘಟಿಸಲಾಗಿದ್ದ ತಾಲೂಕಾ ಮಟ್ಟದ “ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬಯಲು ಮಲ ವಿಸರ್ಜನೆ ಸಹ ಅನೇಕ ರೋಗಗಳ ಹುಟ್ಟಿಗೆ ಕಾರಣವಾಗಿದ್ದು 2018 ರ ಹೊತ್ತಿಗೆ ಇಡೀ ದೇಶವನ್ನು ಬಯಲು ಮಲ ವಿಸರ್ಜನಾ ರಹಿತ ದೇಶವನ್ನಾಗಿ ರೂಪಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಜಾಗತಿಕ ಆರೋಗ್ಯ ಸಂಘಟನೆ ಈ ಕುರಿತು ಗಮನಹರಿಸುತ್ತಿದೆ ಎಂದು ಅವರು ತಿಳಿಸಿದರು.
ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್.ನಾಯ್ಕ ಅವರು ತಾಲೂಕಿನ ಎಲ್ಲಾ ಶಾಲೆಗಳಲ್ಲೂ ಇಂದು ವಿದ್ಯಾರ್ಥಿಗಳಿಗೆ ಜಂತು ಹುಳು ನಿವಾರಣೆಗಾಗಿ “ಅಲ್‍ಬೆಂಡಾಝೋಲ್” ಮಾತ್ರೆಗಳನ್ನು ನೀಡಲಾಗುತ್ತಿದೆ. ಆರು ತಿಂಗಳ ನಂತರ ಎರಡನೇ ಹಂತದ ಮಾತ್ರೆಯನ್ನೂ ನೀಡಲಾಗುತ್ತದೆ ಎಂದರು. ಮಕ್ಕಳು ಮಾತ್ರೆಯನ್ನು ಬಳಸದೇ ಹಾಗೇ ಇಟ್ಟುಕೊಳ್ಳಬಾರದು. ಪಾಲಕರೂ ಈ ವಿಷಯವನ್ನು ಗಮನಿಸಿ ಮಕ್ಕಳು ಮಾತ್ರೆ ಸೇವಿಸುವಂತೆ ಜಾಗೃತಿ ವಹಿಸಬೇಕು ಎಂದರು. ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಿವಾಸ, ಡಾ. ನಾಡಿಗೇರ, ಜಿಲ್ಲಾ ಉಪ ಆರೋಗ್ಯಶಿಕ್ಷಣಾಧಿಕಾರಿ ಆರ್.ವಿ.ಮಡಿವಾಳ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚೈತನ್ಯಕುಮಾರ, ಪ್ರಭಾರೆ ಸಿಡಿಪಿಓ ಸರೋಜಾ ಕಟ್ಟೇಮನೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಭೆಯ ಅಧ್ಯಕ್ಷತೆಯನ್ನು ತಾಲೂಕಾ ಆರೋಗ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ನಾಯ್ಕ ವಹಿಸಿದ್ದರು. ಬಾಲಿಕೊಪ್ಪ ಶಾಲೆಯ ವಿದ್ಯಾರ್ಥಿಗಳ ಪ್ರಾರ್ಥನೆ, ನಾಡಗೀತೆ, ರೈತಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ.ನಾಯ್ಕ ನಿರ್ವಹಿಸಿದರು. ಮುಖ್ಯಾಧ್ಯಾಪಕ ಎಂ.ಎಚ್.ನಾಯ್ಕ ವಂದಿಸಿದರು.

loading...

LEAVE A REPLY

Please enter your comment!
Please enter your name here