ಜ್ಞಾನದ ಹಸಿವು ನೀಗಿಸುವ ಕಾರ್ಯವಾಗಬೇಕು: ಲಕ್ಷ್ಮೀನಾರಾಯಣ

0
93

ದಾಂಡೇಲಿ : ಆಕಳು, ಕುರಿ, ಮೇಕೆ ನೀಡಿ ಅನ್ನದ ಹಸಿವು ನೀಗಿಸುವ ಬದಲು ಬಹುಮುಖ್ಯವಾಗಿ ದಲಿತ ಹಾಗೂ ದಲಿತೇತರ ಜನರ ಜ್ಞಾನದ ಹಸಿವು ನೀಗಿಸಲು ಸರಕಾರ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಅವರು ಹೇಳಿದರು.

ಅವರು ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಡಾ:ಅಂಬೇಡ್ಕರ್ ರವರ 125 ನೇ ಜನ್ಮ ಜಯಂತಿ ಈ ವರ್ಷ ಪ್ರಾರಂಭವಾಗಲಿದ್ದು, ಆ ಪ್ರಯುಕ್ತ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ಮೇ:28 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜನಮಾನಸಕ್ಕೆ ಪಸರಿಸುವ ದೃಷ್ಟಿಯಿಂದ ಮತ್ತು ನಶಿಸಿ ಹೋಗುತ್ತಿರುವ ಸಂವಿಧಾನದ ಆಶಯಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಅಂಬೇಡ್ಕರ್ ಜಯಂತಿ ನಿಮಿತ್ತ ವರ್ಷಪೂರ್ತಿ ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳ ಬಗ್ಗೆ ಅಧ್ಯಯನ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಲಕ್ಷ್ಮೀನಾರಾಯಣ ನಾಗವಾರ ಹೇಳಿದರು.

ದಲಿತರಿಗಾಗಿ ಮೀಸಲಿಟ್ಟ ಹಣ ಪೂರ್ಣ ಸದ್ವಿನಿಯೋಗಕ್ಕೆ ಆಗ್ರಹ :
ರಾಜ್ಯ ಸರಕಾರ ಪ್ರತಿ ಬಜೆಟಿನಲ್ಲಿಯೂ ದಲಿತರ ಕಲ್ಯಾಣಕ್ಕಾಗಿ ಹಣ ಮೀಸಲಿಡುತ್ತಿದೆ. ಆದರೆ ಕಳೆದ ವರ್ಷದ ಬಜೆಟಿನಿಲ್ಲಿ ಮೀಸಲಿಟ್ಟ ಹಣದಲ್ಲಿ ರೂ:8 ಸಾವಿರ ಕೋಟಿ ವಿನಿಯೋಗವಾಗದೇ ಖಾಲಿ ಬಿದ್ದಿದ್ದು ಒಳ್ಳೆಯ ಬೆಳವಣಿಗೆಯಲ್ಲ. ಬಜೆಟಿನಲ್ಲಿ ಮೀಸಲಿಟ್ಟ ಹಣವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲು ಸರಕಾರ ಅಗತ್ಯ ಕ್ರಮಕೈಗೊಳ್ಳಬೇಕೆಂದು ಲಕ್ಷ್ಮೀನಾರಾಯಣ ನಾಗವಾರ ಅವರು ಸರಕಾರವನ್ನು ಆಗ್ರಹಿಸಿದರು.

ಬೃಹತ್ ಸಮಾವೇಶದಲ್ಲಿ ದಲಿತರ ಸಮಗ್ರ ಅಭಿವೃದ್ಧಿಯ ಬಗ್ಗೆ ಚಿಂತನೆ ಹಾಗೂ ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ಕಲ್ಪಿಸಿಕೊಡುವಂತೆ ರಾಜ್ಯ ಹಾಗೂ ಕೇಂದ್ರ ಸರಕಾರವನ್ನು ಆಗ್ರಹಿಸುವುದಾಗಿ ಲಕ್ಷ್ಮೀನಾರಾಯಣ ನಾಗವಾರ ತಿಳಿಸಿದರು. ದೇಶಕ್ಕೆ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಅವರ ಭಾಷಣ ಹಾಗೂ ಬರಹವನ್ನು ಮುದ್ರಿಸಿ ರಾಜ್ಯದ ಎಲ್ಲಾ ವಿದ್ಯಾರ್ಥಿ ನಿಲಯಗಳಿಗೆ ಕಳುಹಿಸಲು ಸರಕಾರ ಮುಂದಾಗಬೇಕು. ಅಂಬೇಡ್ಕರ್ ಅವರ ಆಶಯಗಳು, ತತ್ವಾದರ್ಶಗಳು ದಲಿತರಿಗೆ ಮಾತ್ರವಲ್ಲದೇ ದಲಿತೇತರ ಸಮುದಾಯಕ್ಕು ಪಸರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ ಎಂದ ಲಕ್ಷ್ಮೀನಾರಾಯಣ ನಾಗವಾರ ಅವರು ನಾಲ್ಕು ಭಾಗವಾಗಿರುವ ದಲಿತ ಸಂಘಟನೆಯನ್ನು ಒಂದುಗೂಡಿಸುವ ಪ್ರಕ್ರಿಯೆ ನಡೆದಿದ್ದು, ಮುಂದಿನ ದಿನಗಳಲ್ಲಿ ದಲಿತರ ಸಮಗ್ರ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ ಪರಿಣಾಮಕಾರಿ ಜನಪಯೋಗಿ ಕಾರ್ಯಕ್ರಮಗಳನ್ನು ಸಂಘಟನೆ ಹಮ್ಮಿಕೊಳ್ಳಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕಾರವಾರ ಜಿಲ್ಲಾ ಸಂಚಾಲಕ ಶಿವಾಜಿ ಬನವಾಸಿ, ರಾಜ್ಯ ಸಂಘಟನಾ ಸಂಚಾಲಕ ಕಲ್ಲಪ್ಪ ಕಾಂಬಳೆ, ಬೆಳಗಾವಿ ವಿಭಾಗ ಸಂಚಾಲಕ ಎಫ್.ವೈ.ದೊಡ್ಡಮನಿ, ಬೆಳಗಾವಿ ಜಿಲ್ಲಾ ಸಂಚಾಲಕ ಜೀವನಹಳ್ಳಿ.ಆರ್.ವೆಂಕಟೇಶ, ಧಾರವಾಡ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಮಲ್ಲಾಪುರ, ಗದಗ ಜಿಲ್ಲಾ ಸಂಚಾಲಕ ಪ್ರಕಾಶ ಕೊಲ್ಲೂರು, ಧಾರವಾಡ ಜಿಲ್ಲಾ ಸಂಚಾಲಕ ಪರಮೇಶ ಕಾಳೆ, ಬೆಳಗಾವಿ ಪ್ರಮುಖ ದಾದಸಾಹೇಬ, ರಾಜ್ಯ ದಲಿತಾ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಶೋಭಾ ಕಟ್ಟಿಮನಿ, ದಲಿತ ಮಹಿಳಾ ಒಕ್ಕೂಟದ ಗೌರಮ್ಮ ದೊಡ್ಡಮನಿ ಮೊದಲಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here