ಶಿಕ್ಷಣದಲ್ಲಿ ನೈತಿಕತೆ ಅಳವಡಿಸಿ ಸುಧಾರಣೆ ತರಬೇಕಾಗಿದೆ: ಸಿ.ಎಂ.ಉದಾಸಿ

0
110


ಶಿರಸಿ : ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಏಳ್ಗೆಯ ಜೊತೆಗೆ ನೈತಿಕವಾಗಿ ಸುಧಾರಣೆ ತರಬೇಕಾದ ಅಗತ್ಯತೆ ಪ್ರಸ್ತುತ ಶೈಕ್ಷಣಿಕ ಕ್ಷೇತ್ರದ ಸವಾಲಾಗಿದೆ ಎಂದು ಮಾಜಿ ಸಚಿವ ಸಿ.ಎಂ.ಉದಾಸಿ ಅಭಿಪ್ರಾಯಪಟ್ಟರು.
ಶಿರಸಿ ತಾಲೂಕಿನ ಇಸಳೂರು ಸರ್ಕಾರಿ ಹಿರಿಯ ಪ್ರಥಮಿಕ ಶಾಲೆ ಶತಮಾನೋತ್ತರ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣವು ವಿನಯ ಹೆಚ್ಚಿಸಬೇಕು, ಪ್ರಜ್ಞೆಯ ಜೊತೆಗೆ ಮಾನವತೆ ವೃದ್ಧಿಸುವ ಕಾರ್ಯ ಮಾಡಬೇಕು. ಆದರೆ ವರ್ತಮಾನದ ಶಿಕ್ಷಣ ಪಡೆಯುತ್ತಿರುವವರಲ್ಲಿ ಈ ಎಲ್ಲ ಅಂಶಗಳು ಮಾಯವಾಗಿವೆ. ಶಿಕ್ಷಣ ಕಲಿತು ಆರ್ಥಿಕ ಹಾಗೂ ಭೌತಿಕವಾಗಿ ಬದಲಾವಣೆ ಆಗುತ್ತಿರುವವರು ನೈತಿಕವಾಗಿ ಹಿಂದುಳಿಯುತ್ತಿರುವುದು ಖೇದಕರ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣದಲ್ಲಿ ನೈತಿಕತೆ ಅಳವಡಿಸಿ ದೇಶದ ಭವಿಷ್ಯವಾದ ವಿದ್ಯಾರ್ಥಿಗಳನ್ನು ಮೌಲ್ಯವಂತರನ್ನಾಗಿ ಮಾಡಬೇಕಿದೆ ಎಂದರು.
ಶೈಕ್ಷಣಿಕವಾಗಿ ಸುಧಾರಣೆ ಆಗದಿದ್ದರೆ ಜಾಗತಿಕ ಸ್ಪರ್ಧೆಗೆ ಒಗ್ಗಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಸೇರಬೇಕು. ಕೇವಲ ತಂತ್ರಜ್ಞಾನ, ಸೌಲಭ್ಯಗಳಿಗೆ ಮಾರುಹೋಗಿ ಖಾಸಗಿ ಶಾಲೆಗಳಿಗೆ ಸೇರದೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳಿಗೆ ಪಾಲಕರು ತಮ್ಮ ಮಕ್ಕಳನ್ನು ಸೇರ್ಪಡೆ ಮಾಡಬೇಕು ಎಂದರು. ನಮ್ಮ ಪೂರ್ವಿಕರು ಸಮಾಜದ ಭವಿಷ್ಯವನ್ನು ಅರಿತು ಇಂತಹ ವಿದ್ಯಾ ದೇಗುಲಗಳನ್ನು ಸಾಕಷ್ಟು ನಿರ್ಮಿಸಿದ್ದಾರೆ. ಶಿಕ್ಷಣದ ಜೊತೆಗೆ ಸಮಾಜಮುಖಿ ಕಾರ್ಯವನ್ನೂ ಕೈಗೊಳ್ಳುವ ಮನಸ್ಥಿತಿ ವಿದ್ಯಾರ್ಥಿಗಳಲ್ಲಿ ಬೆಳೆಯಲು ಇಂತಹ ದೇಗುಲಗಳು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಂ.ಇ.ಎಸ್.ಶಿಕ್ಷಣ ಸಂಸ್ಥೆ ನಿರ್ದೇಶಕ ಭೀಮಣ್ಣ ನಾಯ್ಕ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಗಳ ಹಾಗೂ ವಿದ್ಯಾರ್ಥಿಗಳ ಕೊಡುಗೆ ಅಪಾರವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಕೂಡ ಹಳ್ಳಿ ಭಾಗದ ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡುತ್ತಿರುವುದು ಸಂತಸದ ಸಂಗತಿ ಎಂದರು. ಕಾರ್ಯಕ್ರಮದ ಅಂಗವಾಗಿ ಲಲಿತಾ ಹೆಗಡೆ, ಹೊನ್ನಮ್ಮ ನಾಯ್ಕ, ಕೃಷ್ಣ ಹಿರೇಗಂಗೆ, ಸಾವಿತ್ರಿ ಕಾಮತ, ಜಿ.ಕೆ.ಬೋರಕರ ಸೇರಿದಂತೆ ಶಾಲೆಯ ಹಿರಿಯ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಸರ್ವ ಶಿಕ್ಷಣ ಅಭಿಯಾನ ಜಾರಿಯಾದ ನಂತರ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ, ತಾ.ಪಂ.ಸದಸ್ಯ ಚಂದ್ರು ದೇವಾಡಿಗ, ಇಸಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಿರ್ಮಲಾ ಶೆಟ್ಟಿ, ಎ.ಪಿ.ಎಂ.ಸಿ. ಸದಸ್ಯ ನರೇಶ ಭಟ್ಟ, ಶಿಕ್ಷಣ ಇಲಾಖೆಯ ಆರ್.ಎನ್.ಹೆಗಡೆ, ಕಾರ್ಯಕ್ರಮ ಸಮಿತಿ ಗೌರವಾಧ್ಯಕ್ಷ ಎನ್.ಡಿ.ಹೆಗಡೆ, ಕಾಯಾಧ್ಯಕ್ಷ ಬಸವರಾಜ ಉಪ್ಪಿನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಈಶ್ವರ ಪೂಜಾರಿ, ಮುಖ್ಯಶಿಕ್ಷಕ ಚಂದ್ರಶೇಖರ ಜೋಗಳೇಕರ ಹಾಗೂ ಇತರರು ಇದ್ದರು.

loading...

LEAVE A REPLY

Please enter your comment!
Please enter your name here