ಬಸವ ಜಯಂತಿ ಆಚರಣೆಗೆ ಡಾ. ಪ್ರವೀಣಕುಮಾರ್ ಮನವಿ

0
34

ಕೊಪ್ಪಳ 05: ಕಾಯಕವೇ ಕೈಲಾಸ ಎನ್ನುವ ತತ್ವನ್ನು ಬೋಧಿಸಿದ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಮೇ. 09 ರಂದು ಜಿಲ್ಲಾ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಸವೇಶ್ವರ ಜಯಂತಿ ಆಚರಣೆ ಕುರಿತು ಗುರುವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಸವೇಶ್ವರ ಜಯಂತಿ ಉತ್ಸವವನ್ನು ಜಿಲ್ಲಾಡಳಿತ ಹಾಗೂ ಕೊಪ್ಪಳದ ಬಸವ ಜಯಂತ್ಯೋತ್ಸವ ಸಮಿತಿಯ ಸಹಯೋಗದೊಂದಿಗೆ ಮೇ. 09 ರಂದು ಜಿಲ್ಲಾ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಕಾರ್ಯಕ್ರಮ ಆಯೋಜಿಸಲು ಜಿಲ್ಲಾ ಕೇಂದ್ರದಲ್ಲಿ ಆಚರಿಸಲು ಸರಕಾರ 50 ಸಾವಿರ ರೂ. ಹಾಗೂ ತಾಲೂಕು ಕೇಂದ್ರದಲ್ಲಿ ಆಚರಿಸಲು 25 ಸಾವಿರ ರೂ. ಬಿಡುಗಡೆ ಮಾಡಲಿದೆ. ಕಾಯಕವೇ ಕೈಲಾಸ ಎನ್ನುವ ತತ್ವವನ್ನು ಜಗತ್ತಿಗೆ ಬೋಧಿಸಿದ ಬಸವಣ್ಣನವರ ಜಯಂತಿ ಆಚರಣೆ ಅಂಗವಾಗಿ ಬಸವ ಜಯಂತ್ಯೋತ್ಸವ ಸಮಿತಿ ವತಿಯಿಂದ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಬೇಕು. ಕೊಪ್ಪಳ ನಗರದಲ್ಲಿ ಗಿಡ-ಮರಗಳ ಸಂಖ್ಯೆ ಬಹಳ ಕಡಿಮೆ ಇದ್ದು, ಈ ವರ್ಷ ಕನಿಷ್ಟ 6 ಸಾವಿರ ಗಿಡಗಳನ್ನು ನಗರದ ವಿವಿಧೆಡೆ ನೆಡಲು ಜಿಲ್ಲಾಡಳಿತ ಸಿದ್ಧವಿದ್ದು, ಇದಕ್ಕೆ ಬಸವ ಜಯಂತ್ಯೋತ್ಸವ ಸಮಿತಿ ಕೈಜೋಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ಬಸವ ಜಯಂತಿ ಆಚರಣೆ ನಿಮಿತ್ತ ಮೇ. 09 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಬಸವೇಶ್ವರ ವೃತ್ತದಲ್ಲಿನ ಬಸವೇಶ್ವರ ಅವರ ಪುತ್ಥಳಿಗೆ ಪೂಜೆ ಹಾಗೂ ಮಾಲಾರ್ಪಣೆ. ಅಂದು ಸಂಜೆ 04 ಗಂಟೆಗೆ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ಕೋಟೆ ರಸ್ತೆಯ ಶ್ರೀಮಹೇಶ್ವರ ದೇವಸ್ಥಾನದಿಂದ ಜವಾಹರ ರಸ್ತೆ ಮೂಲಕ ಶ್ರೀಗವಿಮಠದ ಆವರಣದವರೆಗೆ ಆಯೋಜಿಸಲಾಗುವುದು. ಸಂಜೆ 6 ಗಂಟೆಗೆ ಶ್ರೀಗವಿಮಠದ ಆವರಣದಲ್ಲಿ ಸಮಾರಂಭ ನಡೆಯಲಿದೆ. ಮೆರವಣಿಗೆಯಲ್ಲಿ ವೀರಗಾಸೆ ಸೇರಿದಂತೆ ಹಲವು ಜಾನಪದ ಕಲಾ ತಂಡಗಳು ಭಾಗವಹಿಸಿ, ಮೆರವಣಿಗೆ ಆಕರ್ಷಕಗೊಳಿಸಲಿವೆ. ಜಯಂತಿ ಆಚರಣೆಯಲ್ಲಿ ಎಲ್ಲ ಸಾರ್ವಜನಿಕರು, ಜನಪ್ರತಿನಿಧಿಗಳು, ನಾನಾ ಸಂಘಟನೆಗಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಮೆರವಣಿಗೆ ಹಾಗೂ ಸಮಾರಂಭದಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿಗಳು ತಪ್ಪದೆ ಪಾಲ್ಗೊಳ್ಳಬೇಕು. ನಗರದ ಪ್ರಮುಖ ವೃತ್ತಗಳಿಗೆ ದೀಪ ಅಲಂಕಾರ ಹಾಗೂ ಸ್ವಚ್ಛತೆಗೆ ಕ್ರಮ ತೆಗೆದುಕೊಳ್ಳಬೇಕು. ಮೆರವಣಿಗೆ ಸಂದರ್ಭದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್, ಕುಡಿವ ನೀರಿನ ವ್ಯವಸ್ಥೆ, ಮೆರವಣಿಗೆ ಸಾಗಿ ಬರುವ ರಸ್ತೆಯನ್ನು ಸ್ವಚ್ಛಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಬಸವ ಜಯಂತ್ಯೋವ ಸಮಿತಿಯ ಬಸವರಾಜ ಬೊಳ್ಳಳ್ಳಿ ಅವರು ಮಾತನಾಡಿ, ಬಸವಣ್ಣನವರ ಜಯಂತಿ ಅಂಗವಾಗಿ ಸಮಾಜದ ಯುವಜನರು ಮೇ. 09 ರಂದು ಬೆಳಿಗ್ಗೆ 9 ಗಂಟೆಗೆ ಬಸವೇಶ್ವರ ವೃತ್ತದಿಂದ ವಚನ ಸಂದೇಶಗಳನ್ನು ಬಿಂಬಿಸುವ ಫಲಕಗಳೊಂದಿಗೆ ಬೈಕ್ ರ್ಯಾಲಿ ನಡೆಸಲಿದ್ದಾರೆ. ಅಲ್ಲದೆ ಸಮಿತಿ ವತಿಯಿಂದ ಸಾಧಕರಿಗೆ ಬಸವ ಕಾರುಣ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಂದು ಸಂಜೆ 6 ಗಂಟೆಗೆ ಗವಿಮಠ ಬಳಿ ಪ್ರಾರಂಭವಾಗುವ ಕಾರ್ಯಕ್ರಮ ರಾತ್ರಿ 10 ಗಂಟೆಯವರೆಗೂ ನಡೆಯುವುದರಿಂದ, ನಗರ ಸಾರಿಗೆ ಬಸ್‍ಗಳನ್ನು ಈ ಮಾರ್ಗದಲ್ಲಿ ರಾತ್ರಿ 10 ಗಂಟೆಯವರೆಗೂ ಸಂಚರಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ, ಗಣ್ಯರಾದ ಮಲ್ಲಿಕಾರ್ಜುನ ಸೋಮ್ಲಾಪುರ, ಗವಿಸಿದ್ದಪ್ಪ, ಶಿವಾನಂದ ಹೊದ್ಲೂರ, ಶಿವಕುಮಾರ ಕುಕನೂರ, ಮಂಜುನಾಥ ಗೊಂಡಬಾಳ, ಡಾ. ಮಹಾಂತೇಶ್ ಮಲ್ಲನಗೌಡರ, ಸಂಧ್ಯಾ ಮಾದಿನೂರ, ಹನುಮಾಕ್ಷಿ ಗೋಗಿ ಮುಂತಾದವರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here