ಸ್ವಾತಂತ್ರ್ಯದ ಕಿಡಿಹೊತ್ತಿಸಿದ ಕನ್ನಡರಾಣಿ- ಕಿತ್ತೂರು ಚೆನ್ನಮ್ಮ

0
3569

ಅಕ್ಟೌಬರ್ 23 ರಿಂದ 25 ರವರೆಗೆ ಕಿತ್ತೂರಿನಲ್ಲಿ ಕಿತ್ತೂರು ಉತ್ಸವವನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ತನ್ನಿಮಿತ್ತವಾಗಿ ಈ ಲೇಖನ ನೀಡಲಾಗಿದೆ.179 ವರ್ಷಗಳಷ್ಟು ಹಿಂದೆಯೇ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ಕಹಳೆಯನ್ನು ಊದಿ ಕೆಚ್ಚೆದೆಯಿಂದ ಹೋರಾಡಿದ ಪ್ರಪ್ರಥಮ ಮಹಿಳೆ ಕಿತ್ತೂರ ರಾಣಿ ಚೆನ್ನಮ್ಮ ಕರ್ನಾಟಕದ ಹೆಮ್ಮೆಯ ವೀರರಾಣಿ.ಶಿಒಲಿದರೆ ನಾರಿ, ಮುನಿದರೆ ಮಾರಿಷಿ ಎಂಬ ಮಾತನ್ನು ಕಾಕತಿಯ ಪ್ರಸಿದ್ದ ದೇಸಾಯಿ ಮನೆತನಕ್ಕೆ ಸೇರಿದ ಚೆನ್ನಮ್ಮ ತನ್ನ ಬಾಲ್ಯಾವಸ್ಥೆಯಲ್ಲಿಯೇ ಕಾರ್ಯರೂಪಕ್ಕೆ ತಂದಿದ್ದಳು. ಕುದುರೆ ಸವಾರಿ, ಕತ್ತಿ ವರಸೆ, ಬಿಲ್ವಿದ್ಯೆಗಳನ್ನು ಕಲಿತು, ಅವುಗಳ ಬಳಕೆಯ ಹದವರಿತಿದ್ದ ಚೆನ್ನಮ್ಮಳಿಗೆ ಮನೆಗೆಲಸದಷ್ಠೇ ಸಂತೋಷವಾಗಿದ್ದವು. 1796 ರಲ್ಲಿ ಕಿತ್ತೂರಿನ ರಾಜ್ಯಭಾರ ಹೊತ್ತ ಮಲ್ಲಸರ್ಜನೊಂದಿಗೆ ಚೆನ್ನಮ್ಮಳ ವಿವಾಹ ನಡೆಯಿತು. ಕಿರಿಯ ವಯಸ್ಸಿನಲ್ಲಿಯೇ ಕಿತ್ತೂರಿನ ರಾಜ್ಯಭಾರ ಹೊತ್ತ ಮಲ್ಲಸರ್ಜನು ನಿಜಕ್ಕೂ ಶೂರ ಧೀರನಾಗಿದ್ದನು. ಮೊದಲ ರಾಣಿ ರುದ್ರವ್ವ ಚೆನ್ನಮ್ಮಳನ್ನು ಮಲ್ಲಸರ್ಜನ ಕಿರಿಯ ರಾಣಿಯಾಗಿ ತಂದಳು.

ಕಿತ್ತೂರು ಪುಟ್ಟದಾದರೂ, ಸುಖ ಸಮೃದ್ದಿಯ ಚೊಕ್ಕ ರಾಜ್ಯವಾಗಿದ್ದರಿಂದ ಇದರ ಮೇಲೆ ಪೇಶ್ವೆ, ಟಿಪ್ಪು ಸುಲ್ತಾನರ ಕಣ್ಣು ಬಿತ್ತು, ಕಿತ್ತೂರನ್ನು ಕಬಳಿಸಲು ಒಂದಿಲ್ಲೊಂದು ಸಂಚು ನಡೆಸುತ್ತಿದ್ದರು. ಮಲ್ಲಸರ್ಜನನು ಸೆರೆಸಿಕ್ಕು, ಸೆರೆಮನೆವಾಸದಲ್ಲಿ ಆರೋಗ್ಯ ತೀರ ಹದಗೆಟ್ಟು ಮರಳಿ ಕಿತ್ತೂರಿಗೆ ಬಂದ ನಂತರ 1818 ರಲ್ಲಿ ಕಾಲವಶನಾದ. ನಂತರ ಅವನ ತಮ್ಮ ಶಿವಲಿಂಗ ಸರ್ಜನನು ಪಟ್ಟವೇರಿದರೂ ಅವನು ಬೇಗನೆ ನಿಧನನಾದ ನಂತರ ಆಡಳಿತಭಾರ ಚೆನ್ನಮ್ಮಳ ಮೇಲೆ ಬಿತ್ತು. ಅನ್ನ ತಿನ್ನುವ ಸಂಸ್ಥಾನಕ್ಕೆ ದ್ರೌಹ ಮಾಡಲು ಹಿಂಜರಿಯದ ಮಲ್ಲಪ್ಪ ಶೆಟ್ಟಿ, ವೆಂಕೋಬರಾವ ಇಬ್ಬರೂ ಥ್ಯಾಕರೆಗೆ ಕಿತ್ತೂರಿನ ಒಳಗುಟ್ಟನ್ನು ತಿಳಿಸಿ ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳತೊಡಗಿದರು. ಮುತ್ಸದ್ದಿಗಳಾದ ಬ್ರಿಟಿಷರು ಇವರನ್ನು ಉಪಯೋಗಿಸಿಕೊಂಡು ಕಿತ್ತೂರಿನ ಕೈವಶಕ್ಕಾಗಿ ಹೊಂಚು ಹಾಕಿದರು.

ಅಂದು 1824 ರಲ್ಲಿ ಅಕ್ಟೌಬರ್ 22 ಮಹಾನವಮಿ ಆಯುಧ ಪೂಜೆ, ಪೂಜೆಯ ಭಕ್ತಿ ಭಾವದಲ್ಲಿ ಮಗ್ನರಾದ ಕಿತ್ತೂರಿನ ನಾಗರಿಕರು ಒಮ್ಮಿಂದೊಮ್ಮೆಲೆ ಶುತ್ರುಗಳ ಮುತ್ತಿಗೆಯಿಂದ ದಿಗ್ಭ್ತ್ರಮೆಗೊಂಡು  ಚೆನ್ನಮ್ಮ ಧೈರ್ಯಗುಂದದೇ ಯುದ್ಧಕ್ಕೆ ಸನ್ನದ್ಧಳಾಗಿ ಸೇನೆಗೆ ಏನೇ ಬಂದರೂ ಎದುರಿಸಲು ಸಿದ್ದವಾಗಿರುವಂತೆ ಹುರುಪು ತುಂಬಿದಳು. ಕೋಟೆಯನ್ನು ನೆಲಸಮಗೊಳಿಸಿ ಕಿತ್ತೂರನ್ನು ತಮ್ಮ ಅಧೀನಕ್ಕೆ ಸೇರಿಸಿಕೊಳ್ಳುವ ಕನಸಿನಲ್ಲಿದ್ದ ಥ್ಯಾಕರೆಗೆ ಕಿತ್ತೂರು ಕೋಟೆ ಹೆಬ್ಬಾಗಿಲು ತೆರೆದುಹರಿದು ಬರಲಾರಂಭಿಸಿದ ಉತ್ಸಾಹ,

ಶಕ್ತಿ, ಶೌರ್ಯಗಳ ಸಾಕಾರದಂತಿದ್ದ ಕಿತ್ತೂರು ಸೇನೆಯನ್ನು ಕಂಡು ಜಂಘಾ ಬಲವೇ ಉಡುಗಿ ಹೋದಂತಾಯಿತು.

ಸ್ವತ: ರಾಣಿಯೇ ವೀರ ಪುರುಷರಂತೆ ಹೋರಾಡಿದರೆ ಇನ್ನು ಸೈನಕರು ಕೇಳಬೇಕೆ? ಕಂಡ ಕಂಡವರ ರುಂಡ ಚಂಡಾಡಿ ತಮ್ಮ ಆಯುಧಗಳಿಗೆ ಬ್ರಿಟಿಷ ಸೈನಕರ ಬಲಿಕೊಟ್ಟು ಅದರ ರಕ್ತಾಭೀಷೇಕ ಮಾಡಿದರು. ಮಿಂಚಿನಂದ ಸಂಚರಿಸಿ ಸಿಡಿಲೆರಗಿದಂತೆ ಶತ್ರುಗಳ ಮೇಲೆ ಎರಗುತ್ತಿದ್ದ ರಾಣಿಯನ್ನು ಕೊಲ್ಲಲು ಹೊಂಚು ಹಾಕಿದ ಥ್ಯಾಕರೆ ಸಾಹೇಬ ಕಿತ್ತೂರ ಸೈನಕರ ಆಯುಧಗಳಿಗೆ ಮಹಾನವಮಿ ಮಾರಣ ಹೋಮಕ್ಕೆ ಬಲಿಯಾದ. ಬ್ರಿಟಿಷ ಕಂಪನಿ ಸೇನೆ ಕಿತ್ತೂರಿನಲ್ಲಿ ಮಣ್ಣು ಮುಕ್ಕಿತ್ತು. ಹೆಂಗಸಿನ ಮುಂದಾಳತ್ವದಲ್ಲಿ ಪುಟ್ಟ ಕಿತ್ತೂರ ರಾಜ್ಯ ದೊಡ್ಡ ಬ್ರಿಟಿಷ ರಾಜ್ಯಕ್ಕೆ ತಲೆನೋವಾಯಿತು. ಇದು ಡೆಕ್ಕನ್ ಕಮಿಷನರ ಚಾಪ್ಲಿನನಿಗೆ ನುಂಗಲಾರದ ತುತ್ತಾಯಿತು. ಸೆರೆಯಾಳುಗಳನ್ನು ಬ್ರಿಟಿಷರಿಗೆ ಒಪ್ಪಿಸಲು ರಾಣಿಗೆ ಒಕ್ಕಣೆ ಕಳುಹಿಸಿ, ಹಾಗೆ ಮಾಡಿದರೆ ಮಾತ್ರ ಆಕೆಯನ್ನು ಕ್ಷಮಿಸುವದಾಗಿ ಹೇಳಿತು. ಆದರೆ ಸ್ವಾಭಿಮಾನ ಸ್ವಾತಂತ್ರ್ಯ ಪ್ರೇಮಿ ಚೆನ್ನಮ್ಮ ಒಪ್ಪುವ ಬದಲು ಕಿತ್ತೂರಿನಿಂದ ಸದಾಕಾಲ ಬ್ರಿಟಿಷರು ಕಾಲ್ತೆಗೆದರೆ ಮಾತ್ರ ಮಾತುಕತೆ ಎಂದಳು.

ಚಾಪ್ಲಿನನಿಗೆ ಇದನ್ನು ಸಹಿಸಲಾಗದೇ ಪುಟ್ಟ ಕಿತ್ತೂರಿನ ಮೇಲೆ ದೊಡ್ಡ ಸೈನ್ಯದೊಡನೆ ದಾಳಿ ಮಾಡಿದ, ಚೆನ್ನಮ್ಮ ಅಂಜದೆ ನಾಡಿನ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನು ತೆರಲು ಸಿದ್ದವೆಂದು ಹಟ ತೊಟ್ಟು ವೀರಾವೇಶದಿಂದ ಮುನ್ನುಗ್ಗಿದಳು. ಆದರೇನು ಕುತಂತ್ರ ವಿದ್ಯೆಯ ಪ್ರವೀಣರಾದ ಬ್ರಿಟಿಷರು ಅನ್ಯಾಯ ಹೇಡಿತನದಿಂದ ಯುದ್ಧದಲ್ಲಿ ಗೆದ್ದರು. ಕಿತ್ತೂರ ಕೋಟೆ ಬ್ರಿಟಿಷರ ವಶವಾಯಿತು.

ಕಡೆಗೂ ಬ್ರಿಟಿಷರ ಧ್ವಜ ಹಾರಾಡಲು ಎಡೆಮಾಡಿಕೊಟ್ಟೆಯಾ ಕಿತ್ತೂರು ಕೋಟೇಯೇ ? ಎಂಬ ವ್ಯಥೆಯಲ್ಲಿಯೇ ಬೈಲಹೊಂಗಲದ ಸೆರೆಮನೆಯಲ್ಲಿ 1829 ರ ಫೆಬ್ರವರಿಯಲ್ಲಿ ಕೊರಗಿ, ಕೊರಗಿ ಕೊನೆಯುಸಿರೆಳೆದಳು. ಇಡೀ ಜಗತ್ತಿನಲ್ಲಿಯೇ ಬೃಹತ್ ಸಾಮ್ರಾಜ್ಯ ನಿರ್ಮಿಸಿದ ಕುಟಿಲ ಬ್ರಿಟಿಷರನ್ನು ಎದುರಿಸಿದ ಕಿತ್ತೂರಿನ ರಾಣಿ ಚೆನ್ನಮ್ಮಳು ಚರಿತ್ರೆಯ ಪುಟಗಳಲ್ಲಿ ಸೇರಿ ಹೋಗಿದ್ದರೂ, ಆಕೆಯ ಶೌರ್ಯ, ಸಾಹಸ ಇಂದಿಗೂ ಕನ್ನಡ ನಾಡಿನ ಮನೆಮಾತಾಗಿದೆ.

(ಸುಲೈಮಾನ.ದ.ನದಾಫ)

ವಾರ್ತಾ ಸಹಾಯಕರು

ಉಪನಿರ್ದೇಶಕರ ಕಚೇರಿ,

 

 

 

loading...

LEAVE A REPLY

Please enter your comment!
Please enter your name here