ಅಹಿಂದ ಮುಖಂಡ ಮಹಾವೀರ ಮೊಹಿತೆ ಬಹಿರಂಗ ವಾಗ್ದಾಳಿ

0
79

ಜಿಲ್ಲಾ ಕಾಂಗ್ರೆಸ್‍ನಲ್ಲಿ ದಲಿರತನ್ನು ತುಳಿಯುವ ಹುನ್ನಾರ
ಚಿಕ್ಕೋಡಿ 18: ಕೇಂದ್ರದಲ್ಲಿ ಸಚಿವರಾಗಿದ್ದ ದಿ. ಬಿ. ಶಂಕರಾನಂದ ಆಳ್ವಿಕೆ ನಂತರ ಬೆಳಗಾವಿ ಜಿಲ್ಲಾ ಕಾಂಗ್ರೆಸ್‍ನಲ್ಲಿ ದಲಿತರನ್ನು ರಾಜಕೀಯವಾಗಿ ನಿರ್ಣಾಮಗೊಳಿಸಲು ಪಟ್ಟಬದ್ಧ ಹಿತಾಸಕ್ತಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅಹಿಂದ ಮುಖಂಡ ಮಹಾವೀರ ಮೊಹಿತೆ ತಮ್ಮದೇ ಪಕ್ಷದ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ.
ಅವರು ತಮ್ಮ ನಿವಾಸದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ, ರಾಯಬಾಗ ಹಾಲಿ ಶಾಸಕರ ಸೊಸೆ ವಿರುದ್ಧ ಗೆದ್ದ ತಮ್ಮ ಸೊಸೆ ಜಯಶ್ರೀ ಮೊಹಿತೆ ಅವರಿಂದ ಜಿಲ್ಲಾ ಪಂಚಾಯತ ಅಧ್ಯಕ್ಷ ಸ್ಥಾನ ಕೈತಪ್ಪಲು ಜಿಲ್ಲೆಯ ರಾಜಕೀಯ ಹಿತಾಸಕ್ತಿಗಳು ಕಾರಣವಾಗಿದ್ದು, ಮುಂಬರುವ ಚುನಾವಣೆಗಳಲ್ಲಿ ಅವರಿಗೆ ಸೂಕ್ತ ಉತ್ತರ ನೀಡುವದಾಗಿ ತಿಳಿಸಿದ ಅವರು, ಮಾತಿನುದ್ದಕ್ಕೂ ಲಿಂಗಾಯತ ಮುಖಂಡರಾದ ಲಕ್ಷ್ಮೀ ಹೆಬ್ಬಾಳಕರ, ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರನ್ನೇ ಗುರಿಯಾಗಿಸಿಕೊಂಡಿದ್ದು ಕಂಡುಬಂದಿತು.
ಮುಂದುವರೆದ ಅವರು, ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆಯುವ ಬುದ್ಧ, ಬಸವ, ಅಂಬೇಡ್ಕರ ಪ್ರತಿಪಾದನೆಗಳ ಮೂಲಕ ಸಾಗುತ್ತಿರುವ ಸತೀಶ ಜಾರಕಿಹೊಳಿ ರಾಜಕಾರಣಕ್ಕಿಂತ ಸಮುದಾಯಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಹೀಗಾಗಿ ಅವರೇ ನಮ್ಮ ಭವಿಷ್ಯದ ನಾಯಕರಾಗುವ ಜೊತೆಗೆ ದಲಿತ ಸಿಎಂ ಪಟ್ಟಕ್ಕೆ ಸತೀಶ ಜಾರಕಿಹೊಳಿ ಅರ್ಹರು. ಇದನ್ನರತಿರುವ ಜಿಲ್ಲೆಯ ಮೇಲ್ವರ್ಗ ನಾಯಕರು ಅವರ ರಾಜಕೀಯ ನೆಲೆ ಅಭದ್ರಗೊಳಿಸಲು ಈಗಿನಿಂದಲೇ ತಯಾರಿ ನಡೆಸಿದ್ದು, ಇಂಥ ಕೃತ್ಯ ನಡೆಸಲು ರಾಜ್ಯ ಅಹಿಂದ್ ಘಟಕ ಬಿಡುವುದಿಲ್ಲ ಎಂದರು.
ಸಂಸದ ಪ್ರಕಾಶ ಹುಕ್ಕೇರಿ ಅವರಿಗೆ ಚುನಾವಣೆಗಳಲ್ಲಿ ದಲಿತರ ಎಲ್ಲಿಲ್ಲದ ಪ್ರೀತಿ ಹುಟ್ಟುತ್ತದೆ. ಆದರೆ ಚುನಾವಣೆ ನಂತರ ಅವರನ್ನು ಕಾಲುಕಸವಾಗಿ ನೋಡುವ ಅವರ ರಾಜಕೀಯ ನೀತಿ ನನಗೆ ನೋವು ತಂದಿದೆ. ದಲಿತರ ಮತಪಡೆದು ತಂದೆ-ಮಗ ಶಾಸಕರಾಗಿದ್ದರೂ ದಲಿತವರ್ಗದ ಮೇಲೆ ಅಂತರಂಗದಲ್ಲಿ ವಿರೋಧವಿದೆ ಎಂದರು.
ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಹೈಕಮಾಂಡ ಬೆಂಬಲ ಹೊಂದಿರುವದರಿಂದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರನ್ನು ಮನೆ ಕೆಲಸದವರಂತೆ ನೋಡುತ್ತಿದ್ದಾರೆ. ಜಿಲ್ಲಾ ಕಾಂಗ್ರೆಸ್ ಪಕ್ಷವನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡು ಸರ್ವಾಧಿಕಾರಿ ಧೋರಣೆ ನಡೆಸುತ್ತಿರುವ ಲಕ್ಷ್ಮೀ ಹೆಬ್ಬಾಳಕರ ಪಕ್ಷದ ಪದಾಧಿಕಾರಿಗಳ ಹುದ್ದೆಗೆ ಸ್ವಜಾತಿಯ ಕಾರ್ಯಕರ್ತರನ್ನೇ ನೇಮಿಸಿಕೊಂಡಿದ್ದಾರೆ. ದಲಿತ ವರ್ಗವನ್ನು ನಿರ್ಲಕ್ಷಿಸುವ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಮರೆತಿದ್ದಾರೆಂದು ದೂರಿದರು.
ಅಲ್ಲದೇ ರಾಜ್ಯದಲ್ಲಿ ದಲಿತ ಗುತ್ತಿಗೆದಾರರನ್ನು ಗುತ್ತಿಗೆ ಕಾಮಗಾರಿಯಿಂದ ಹಿಂದೆ ಸರಿಸುವ ಸಲುವಾಗಿ ಅಧಿಕಾರಿಗಳು ಸಹ ಕೆಲ ರಾಜಕಾರಣಿಗಳೊಂದಿಗೆ ಶಾಮೀಲಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಂತೋಷ ನವತೆ, ಸಂಜು ಕಾಂಬಳೆ, ದುರ್ಗೇಶ ಮೇತ್ರೆ, ಕಿರಣ ಕಾಂಬಳೆ, ಆನಂದ ಅರಬಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here