ಕುಟುಂಬ ರಾಜಕಾರಣಕ್ಕೆ ಉತ್ತರ ಕೊಡಿ:ನಾಯಿಕ

0
28

ಬೆಳಗಾವಿ 22: ವೈದ್ಯರ ಮಕ್ಕಳು ವೈದ್ಯರಾಗಬೇಕು, ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳು ಆಗಬೇಕು, ಎಂಜಿನಿಯರ್‍ಗಳ ಮಕ್ಕಳು ಎಂಜಿನಿಯರ್ ಆಗಬೇಕೆಂಬ ಕಾನೂನು ಇಲ್ಲ. ರಾಜಕಾರಣ ಎಂಬುದು ಕೇವಲ ರಾಜಕಾರಣಿಗಳಿಗೆ ಮಾತ್ರ ಸಿಮೀತ ಎಂಬಂತಾಗಿದೆ. ತಾವು, ತಮ್ಮ ಮಕ್ಕಳು, ತಮ್ಮ ಮಕ್ಕಳೇ ಅಧಿಕಾರದಲ್ಲಿರಬೇಕು ಎಂಬ ಭ್ರಮೆಯಲ್ಲಿ ಇರುವ ರಾಜಕಾರಣಿಗಳಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ವಾಯವ್ಯ ಪದವೀಧರ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಖ್ಯಾತ ವೈದ್ಯ ಡಾ.ಬಾಬುರಾಜೇಂದ್ರ ನಾಯಿಕ ಹೇಳಿದರು.
ಅವರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಪದವೀಧರ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜ, ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರು ಉನ್ನತ ಶಿಕ್ಷಣ ಪಡೆಯಬೇಕು ಎಂದು ಭಾಷಣ ಮಾಡುತ್ತಾರೆ. ಆದರೆ, ಅದೇ ಉನ್ನತ ಶಿಕ್ಷಣ ಪಡೆದ ಪದವೀಧರರ ಮತದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಈ ವರೆಗೆ ಏನು ಮಾಡಿದ್ದಾರೆ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ರಾಜಕಾರಣ, ಅಧಿಕಾರ ಎಂಬುದು ಯಾವುದೇ ಒಬ್ಬ ವ್ಯಕ್ತಿ ಅಥವಾ ಕುಟುಂಬಕ್ಕೆ ಸಿಮೀತ ಆಗಿರಬಾರದು. ಇಂದು ಯಾವುದೇ ರಾಜಕೀಯ ಪಕ್ಷದ ಉದಾಹರಣೆ ತೆಗೆದುಕೊಂಡರೂ, ಎಲ್ಲ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ಎಲ್ಲೆ ಮೀರಿದೆ. ಕುಟುಂಬ ರಾಜಕಾರಣ ಮಾಡುವ ವ್ಯಕ್ತಿಗಳಿಗೆ, ಪ್ರಬುದ್ಧರಾದ ಪದವೀಧರ ಮತದಾರರು ತಕ್ಕ ಉತ್ತರ ಕೊಡಬೇಕು ಎಂದು ಮನವಿ ಮಾಡಿದರು.
ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಲಕ್ಷಾಂತರ ಜನರು ಪದವಿ ಪಡೆದವರಿದ್ದಾರೆ. ಆದರೆ, ಕೆಲವೇ ಕೆಲವರು ಮಾತ್ರ ಉದ್ಯೋಗದಲ್ಲಿದ್ದಾರೆ. ಪದವೀಧರ ಮತಕ್ಷೇತ್ರದ ಮತದಾರ ಪಟ್ಟಿಯಲ್ಲಿ ಹೆಸರು ಇರುವವರು ಮಾತ್ರ ಪದವೀಧರರಲ್ಲ. ಉನ್ನತ ಶಿಕ್ಷಣ ಪಡೆದು, ನಿರುದ್ಯೋಗಿಗಳಾಗದವರೂ ಪದವೀಧರರೇ, ಅವರಿಗೆ ಉದ್ಯೋಗ, ಜೀವನ ಭದ್ರತೆ ಕೊಡುವ ಕೆಲಸ ಈ ವರೆಗೆ ನಡೆದಿಲ್ಲ ಎಂದು ಹೇಳಿದರು.
ಈಗ ನಾನು ಪದವೀಧರರಿಗಾಗಿ ದುಡಿಯುತ್ತೇನೆ ಎಂದು ಕೆಲ ಪಕ್ಕಾ ರಾಜಕಾರಣಿಗಳು ಪ್ರಚಾರ ನಡೆಸಿದ್ದಾರೆ. ಪದವೀಧರರ ಕ್ಷೇತ್ರ, ರಾಜಕೀಯ ರಹಿತವಾಗಿರಬೇಕು. ಇದೊಂದು ಸಮಾನಮನಸ್ಕರರ ಕ್ಷೇತ್ರವಾಗಿರಬೇಕು ಎಂಬ ಆಶಯ ನನ್ನದಾಗಿದೆ. ಆದ್ದರಿಂದ ಈ ಕ್ಷೇತ್ರಕ್ಕೆ ಸ್ಪರ್ಧಿಸಿರುವ ರಾಜಕೀಯ ವ್ಯಕ್ತಿಗಳನ್ನು ದೂರ ಇಡಬೇಕು ಎಂದು ಹೇಳಿದರು.
ನಿವೃತ್ತ ನ್ಯಾಯಾಧೀಶರಾದ ಅಶೋಕ ಚವ್ಹಾಣ, ನಿವೃತ್ತ ಪ್ರಾಚಾರ್ಯ ಡಾ.ಬಿ.ಜೆ. ಲಮಾಣಿ, ಡಿ.ಟಿ. ರಾಠೋಡ, ಬಾಗಲಕೋಟೆಯ ವೈದ್ಯ ಡಾ.ಶಿವಪುತ್ರ ಬಾಲರಡ್ಡಿ, ಶಂಕರ ನಾಯಕ, ಡಾ.ಶೀತಲ ನಾಯಿಕ, ಡಾ.ಮಾರುತಿ ತಳವಾರ, ಶಶಿಧರ ಘಿವಾರಿ, ಅಶೋಕ ರಾಠೋಡ, ಸಿ.ಬಿ. ರಾಠೋಡ, ಫಯಾಜ್, ತೌಸಿಫ್, ಉಮೇಶ ಧರನಾಯಕ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here