ರಾಜ್ಯ ಮಟ್ಟದ ಆದಿವಾಸಿ ಸಮುದಾಯಗಳ ಅಭಿವೃದ್ದಿ ಜಾಗೃತಿ ಶಿಬಿರ

0
143

ಜೋಯಡಾ : ಕಾಡನ್ನು ಕಾಪಾಡಿಕೊಂಡು ಬಂದ ಆದಿವಾಸಿ-ಬುಡಕಟ್ಟುಗಳಿಗೆ ಕಾಡುನಾಶ ಮಾಡುವವರೆಂದು ಹಣೆಪಟ್ಟಿ ಕಟ್ಟಿ ಮೂಲ ನೆಲೆಯಿಂದ ಹೊರಗಟ್ಟುವ ವ್ಯವಸ್ಥೆ ಇಂದು ನಿರ್ಮಾಣವಾಗಿರುವುದು ವಿಷಾದನಿಯ. ಆಳುವ ಜನರನ್ನು ಹೊಗಳುವ ಚರಿತ್ರೆ ಕಾಣುತ್ತಿರುವ ಇಂದಿನ ದಿನದಲ್ಲಿ ಆದಿವಾಸಿಗಳನ್ನು ಉಳಿಸಿಕೊಳ್ಳುವ ಮೂಲಕ ದೇಶದ ಸಂಸ್ಕøತಿ ಕಟ್ಟುವ ಚರಿತ್ರೆ ನಿರ್ಮಾಣವಾಗಬೇಕಿದೆ ಎಂದು ಬುಡಕಟ್ಟು ಅಧ್ಯಯನ ತಜ್ಞ, ಹಂಪಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ:ಹಿ.ಚಿ.ಬೋರಲಿಂಗಯ್ಯ ಹೇಳಿದರು.
ಅವರು ಜೋಯಿಡಾದ ಬಿ.ಜಿ.ವಿಎಸ್. ಕಾಲೇಜಿನಲ್ಲಿ ರಾಜ್ಯ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಾಗೂ ಉತ್ತರ ಕನ್ನಡ ಜಿಲ್ಲಾ ಘಟಕದ ಸಹಯೋಗದೊಂದಿಗೆ ಹಮ್ಮಿಕೊಂಡ “ಆದಿವಾಸಿ-ಬುಡಕಟ್ಟು ಸಮುದಾಯಗಳ ಅಭಿವೃದ್ದಿ” ರಾಜ್ಯ ಮಟ್ಟದ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತದ ಸಂಸ್ಕøತಿ ಬುಡಕಟ್ಟುಗಳ ಬದುಕಿನಲ್ಲಿದೆ. ಇವರ ಭಾಷೆಗಳು ಪ್ರಾಚೀನ ಚರಿತ್ರೆಯನ್ನು ಹೇಳುತ್ತಿದ್ದು, ಹಿಂದಿನ ಜಾನಪದ ವಿದ್ವಾಂಸರು,ಸಾಹಿತಿಗಳು, ಲೆಖಕರು ಕೂಡಾ ಬುಡಕಟ್ಟುಗಳ ಬಗ್ಗೆ ಇತಿಹಾಸ ಬರೆಯಲಿಲ್ಲ. ಇಂದು ಇವುಗಳ ಅಧ್ಯಯನ ನಡೆಸುವ ಮೂಲಕ ಜನಸಾಮಾನ್ಯರ ಚರಿತ್ರೆ ಕಟ್ಟುವ ಕೆಲಸ ಸರಕಾರದಿಂದ ಆಗಬೇಕಿದೆ. ಬಾಷೆಗಳನ್ನು ಉಳಿಸದಿದ್ದರೆ ದೊಡ್ಡ ಸಂಸ್ಕøತಿ ನಾಶವಾಗಲಿದೆ ಎಂದರು.
ಇಂದು ಕೆಲವರು ಬುಡಕಟ್ಟು ಪಟ್ಟಿಯಿಂದ ಹೊರಗುಳಿದಿದ್ದಾರೆ. ಇಂಥವರನ್ನು ಪಟ್ಟಿಗೆ ಸೇರಿಸುವ ಜೊತೆಗೆ, ಸಣ್ಣ-ಸಣ್ಣ ಬುಡಕಟ್ಟು ಸಮುದಾಯದ ಅಭಿವೃದ್ದಿಗೆ ಒಳಮೀಸಲಾತಿ ನೀಡುವ ಮೂಲಕ ಸಾಮಾಜಿಕ ನ್ಯಾಯ ನೀಡಬೇಕಿದೆ. ಬುಡಕಟ್ಟುಗಳಿಗಾಗಿ ಸರಕಾರ ಪ್ರತ್ಯೇಕ ರಾಜ್ಯ ನೀತಿ ರೂಪಿಸಿ, ನಿರ್ಗತಿಕ,ಮುಗ್ದ, ಅಸಹಾಯಕರನ್ನು ಬಲಪಡಿಸುವ ಕೆಲಸ ಆಗಬೇಕಿದೆ. ಬುಡಕಟ್ಟುಗಳನ್ನು ಎತ್ತಿ ಕಟ್ಟಿ ಬೇಳೆ ಬೇಯಿಸಿಕೊಳ್ಳುತ್ತಿರುವ ಕೆಲ ಸಂಘಟನೆಯ ಮದ್ಯೆ ಅವರ ಅಸ್ತಿತ್ವ ಉಳಿಸಿಕೊಳ್ಳಲು ಈ ಶಿಬಿರ ಪ್ರಮುಖ ಪಾತ್ರ ವಹಿಸಲಿದ್ದು, ಇದು ಬುಡಕಟ್ಟುಗಳ ಭವಿಷ್ಯದ ಬದುಕನ್ನು ಕಟ್ಟುವ ಶಿಬಿರವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ ಆದಿವಾಸಿ ರಾಷ್ಟ್ರೀಯ ಅಧಿಕಾರ ಮಂಚ್ ಕೇಂದ್ರ ಸಮಿತಿ ಸದಸ್ಯರಾದ ಎಸ್.ವೈ.ಗುರುಶಾಂತ ಮಾತನಾಡಿ ಅರಣ್ಯ ಹಕ್ಕಿನಿಂದ ಬುಡಕಟ್ಟುಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ಪರೋಕ್ಷವಾಗಿ ಸರಕಾರ ಮಾಡುತ್ತಿದೆ. ಅರಣ್ಯ ಹಕುಗಳ ಕಾಯ್ದೆ ಸಮರ್ಪಕವಾಗಿ ಜಾರಿ ಆಗಬೇಕಿದೆ ಇದಕ್ಕಾಗಿ ಹೋರಾಟಮಾಡಲು ನಾವು ಸಿದ್ದರಿದ್ದೇವೆ. ಕಸ್ತೂರಿರಂಗನ, ಹುಲಿಯೋಜನೆ,ಆನೆ ಕಾರಿಡಾರ ಹೀಗೆ ಹಲವು ಯೋಜನೆಗಳ ಮೂಲಕ ಬುಡಕಟ್ಟುಗಳನ್ನು ಹೊರತಳ್ಳುವ ಪ್ರಯತ್ನ ನಡೆಯುತ್ತಿದೆ. ಕೆಲವೆಡೆ ಬುಡಕಟ್ಟುಗಳ ಸಂಸ್ಕøತಿಯನ್ನು ಮರೆಸಿ ಬೇರೆ ದಾರಿಗೆ ಸಾಗಿಸುತ್ತಿರುವ ಪ್ರಯತ್ನ ನಡೆದರೆ, ಕೆಲ ಸಂಘಟನೆಗಳು ಶಸ್ತ್ರಾಸ್ರ ತರಬೇತಿ ನೀಡುತ್ತಿರುವುದು ಕೇಳಿಬರುತ್ತಿದೆ. ಈ ಬಗ್ಗೆ ಸರಕಾರ ಲಕ್ಷ ವಹಿಸಬೇಕಿದೆ ಎಂದು ಅವರು ಬುಡಕಟ್ಟುಗಳಲ್ಲಿ ತಾತ್ವೀಕ ಬಿನ್ನಮತವೇನೆ ಇದ್ದರೂ ಹಕ್ಕಿಗಾಗಿ ಒಗ್ಗೂಡಿ ಹೋರಾಟನಡೆಸೋಣ ಎಂದು ಕರೆನೀಡಿದರು.
ಮುಖ್ಯ ಅತಿಥಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಜ್ಯೂಲಿಯಾನಾ ಫರ್ನಾಂಡಿಸ ಮಾತನಾಡಿ, ಬುಡಕಟ್ಟುಗಳ ಸಂಸ್ಕ್ರತಿಯಲ್ಲಿ ಶ್ರೀಮಂತಿಕೆ ಇದೆ. ಅದರ ಮೌಲ್ಯಗಳನ್ನು ಉಳಿಸಿಕೊಳ್ಳಬೇಕಿದೆ. ಜಮೀನ,ಜಂಗಲ(ಕಾಡು),ಜಲ ಈ ಮೂರು ನಮ್ಮ ಸಂಸ್ಕøತಿಯ ತಾಣ, ಇದು ಬದುಕಿನಲ್ಲಿ ತಾಯಿಯಂತೆ ನಮ್ಮನ್ನು ಪೋಷಿಸಿದೆ. ಈ ಕಾಡಿನಿಂದ ನಮ್ಮನ್ನು ದೂರ ಮಾಡದೆ ಅದರೊಂದಿಗೆ ಬದುಕಲು ಬಿಡಿ ಎಂದರು.
ಗೋವಾ ರಾಜ್ಯದ ಕುಣಬಿ ಸಮಾಜದ ಅಧ್ಯಕ್ಷ ಆನಂದ ವೇಳಿಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, ದೇಶದ ವಿವಿದ ರಾಜ್ಯಗಳಲ್ಲಿರುವ ಬುಡಕಟ್ಟುಗಳ ಭಾಷೆ ಬೇರೆ ಬೇರೆ ಆದರೂ ಸಂಸ್ಕ್ರತಿ, ಆಚಾರ ಒಂದೇ ಇವರ ಅಭಿವೃದ್ದಿ ಅಧ್ಯಯನಕ್ಕೆ ಸರಕಾರ ರಚಿಸುವ ಆಯೋಗಗಳು ಸಮರ್ಪಕ ಅಧ್ಯಯನ ನಡೆಸದೆ ಬುಡಕಟ್ಟುಗಳಿಗೆ ಅನ್ಯಾಯವಾಗತ್ತಿದೆ. ಈ ಬಗ್ಗೆ ಧನಾತ್ಮಕ ಚಿಂತನೆ ಮಾಡಬೇಕಿದೆ ಎಂದರು.
ಸಮಿತಿಯ ರಾಜ್ಯ ಸಹ ಸಂಚಾಲಕ ಕೃಷ್ಣಪ್ಪ ಕೊಂಚಾಡಿ ಪ್ರಸ್ತಾವಿಕವಾಗಿ ಮಾತನಾಡಿ ಶಿಬಿರದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹಿರಿಯ ಬುಡಕಟ್ಟು ಕಲಾವಿದ ಮಾದೇವ ವೇಳಿಪ, ಕ.ರಾ.ರೈ.ಪ್ರಾ.ಸಂಘದ ಜಿಲ್ಲಾ ಕಾರ್ಯದರ್ಶಿ ಶಾಂತಾರಾಮ ನಾಯಕ ಉಪಸ್ಥಿತರಿದ್ದರು. ತಾಲೂಕಾ ಅಧ್ಯಕ್ಷ ಪ್ರೇಮಾನಂದ ವೇಳಿಪ ಸ್ವಾಗತಿಸಿದರೆ, ರಾಜ್ಯ ಸಹ ಸಮಿತಿ ಸಂಚಾಲಕ ವಿಠಲ ಮಲೆಕೊಡಿಯಾ ವಂದಿಸಿದರು. ಉದ್ಘಾಟನೆ ನಂತರ ಶಿಬಿರದ ಕಾರ್ಯಾಗಾರ ಆರಂಬಗೊಂಡಿತು.

loading...

LEAVE A REPLY

Please enter your comment!
Please enter your name here