ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ 19 ಕೋಟಿ ರೂ ಬಿಡುಗಡೆ: ಸಚಿವ ದೇಶಪಾಂಡೆ

0
37

ಕನ್ನಡಮ್ಮ ಸುದ್ದಿ
ಬೆಳಗಾವಿ:16 ಜಿಲ್ಲೆಯ ಕೈಗಾರಿಕಾ ಪ್ರದೇಶಗಳ ಅಭಿವೃದ್ದಿಗಾಗಿ ರಾಜ್ಯ ಸರಕಾರ 19 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಅವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶುಕ್ರವಾರದಂದು ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಗೃಹದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಇಲಾಖೆಯ ಅಧಿಕಾರಿಗಳು ಮತ್ತು ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಮತ್ತು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಕಳಪೆ ಕಾಮಗಾರಿ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವದು ಎಂದು ಎಚ್ಚರಿಕೆ ನೀಡಿದರು.
ಇಲಾಖೆಯ ಅಧಿಕಾರಿಗಳು ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಕಾಮಗಾರಿಗಳ ಮತ್ತು ಸಮಸ್ಯೆಗಳ ಪರಿಶೀಲನೆ ನಡೆಸಬೇಕು. ಹಿಂದಿನ ಸಭೆಯಲ್ಲಿ ಚರ್ಚಿಸಲಾದ ವಿಷಯಗಳಲ್ಲಿ ಎರಡು ತಿಂಗಳಲ್ಲಿ ಯಾವ ಯಾವ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂಬುದನ್ನು ಪರಿಶೀಲಿಸಬೇಕು. ಸಮಸ್ಯೆ ಮತ್ತು ಕಾಮಗಾರಿಗಳ ಆದ್ಯತಾ ಪಟ್ಟಿ ಸಿದ್ದ ಪಡಿಸಿ ಅದರಂತೆ ಬಗೆಹರಿಸಬೇಕು ಎಂದು ಸೂಚಿಸಿದರು.
ದೂರದ ಅಥಣಿ, ರಾಯಬಾಗ ತಾಲೂಕಿನ ಉದ್ಯಮಿಗಳಿಗೆ ಅನುಕೂಲವಾಗುವಂತೆ ಚಿಕ್ಕೋಡಿಯಲ್ಲಿ ಕಚೇರಿ ಆರಂಭಿಸಬೇಕು ಎಂಬ ಉದ್ಯಮಿಗಳ ಬೇಡಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಯಾವ ಉದ್ಯಮಿಗಳಿಗೂ ಕಚೇರಿಗೆ ಅಲೆಯುವ ಅಗತ್ಯ ಇಲ್ಲ. ಕೆಲವೆ ದಿನಗಳಲ್ಲಿ ಇಲಾಖೆಯ ವ್ಯವಹಾರಗಳನ್ನು ಆನ್‍ಲೈನ್ ವ್ಯವಸ್ಥೆಗೆ ಒಳಪಡಿಸಲಾಗುತ್ತಿದೆ. ಸಾಫ್ಟವೇರ್ ಸಿದ್ದವಾಗುತ್ತಿದೆ ಎಂದರು.
ಹೊನಗಾ ಕೈಗಾರಿಕಾ ಪ್ರದೇಶಕ್ಕೆ ನೀರಿನ ವ್ಯವಸ್ಥೆ ಆಗದ ಬಗ್ಗೆ ಉದ್ಯಮಿಗಳು ಗಮನ ಸೆಳೆದಾಗ ಅದಕ್ಕೆ ಉತ್ತರಿಸಿದ ಇಲಾಖೆಯ ಅಧಿಕಾರಿಗಳು ಹಿಡಕಲ್ ಜಲಾಶಯದಿಂದ ಹೊನಗಾದವರೆಗಿನ ಪೈಪ್‍ಲೈನ್ ಕಾಮಗಾರಿ ಪೂರ್ಣಗೊಂಡಿದೆ.
ಇನ್ನು ಕೆಲವೆ ದಿನಗಳಲ್ಲಿ ನೀರು ವಿತರಣಾ ಕಾಮಗಾರಿ ಪೂರ್ಣಗೊಳಿಸಿ ನೀರು ಸರಬರಾಜು ಮಾಡಲಾಗುವದು ಎಂದು ಸಭೆಗೆ ಮಾಹಿತಿ ನೀಡಿದರು.
ಲೀಜ್ ಕಮ್ ಸೇಲ್ ಡೀಡ್ ಅವಧಿ ಮುಗಿದಿರುವ ಉದ್ಯಮಿಗಳಿಗೆ ಜಾಗದ ಮಾಲಿಕತ್ವ ನೀಡಬೇಕು ಎಂಬ ಉದ್ಯಮಿಗಳ ಬೇಡಿಕೆಗೆ ಸ್ಪಂಧಿಸಿದ ಸಚಿವರು. ಲೀಜ್ ಮುಗಿದ ಉದ್ಯಮಿಗಳಿಗೆ ಜಾಗದ ಮಾಲಿಕತ್ವ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ ಹೂಡಿಕೆದಾರರ ಸಮಾವೇಶದಲ್ಲಿ ವಿವಿಧ ಉದ್ಯಮಿಗಳು ಬೆಳಗಾವಿಯಲ್ಲಿ 30 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ. ಆ ಉದ್ಯಮಿಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಮತ್ತು ಇಲಾಖೆಯ ವತಿಯಿಂದ ಕೊಡಬೇಕಾದ ಕಾಗದ ಪತ್ರಗಳನ್ನು ಕಾಲಮಿತಿಯಲ್ಲಿ ನೀಡಬೇಕು. ಅವರಿಗೆ ಯಾವುದೆ ತೊಂದರೆ ಮತ್ತು ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಇಲಾಖೆಯ ಅಧಿಕಾರಿಗಳು ಕಿತ್ತೂರು ಮತ್ತು ನಿಪ್ಪಾಣಿ ಕೈಗಾರಿಕಾ ಪ್ರದೇಶದಲ್ಲಿ ಕೈಗೊಂಡ ಕಾಮಕಾರಿಗಳ ಬಗ್ಗೆ ವಿವರಣೆ ನೀಡಿದರು. ಕಿತ್ತೂರು ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ ರಸ್ತೆ ಕಾಮಗಾರಿ ಮತ್ತು ನೀರು ಸರಬರಾಜು ಕಾಮಗಾರಿ ಆರಂಭಿಸಲಾಗಿದೆ.
ವಿದ್ಯುತ್ ಸಂಪರ್ಕ ಕಾಮಗಾರಿಯ ಬಗ್ಗೆ ಅಂದಾಜು ವೆಚ್ಚದ ಮಾಹಿತಿ ನೀಡುವಂತೆ ಹೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಂದಾಜು ಪಟ್ಟಿ ಬಂದ ನಂತರ ಸರಕಾರದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವದು. ಅನುದಾನ ಬಂದ ನಂತರ ಟೆಂಡರ್ ಕರೆದು ಕಾಮಗಾರಿಗಳನು ಆರಂಭಿಸಲಾಗುವದು ಎಂದರು.
ಕೈಗಾರಿಕಾ ಸಂಘಕ್ಕೆ ಹೊನಗಾ ಪ್ರದೇಶದಲ್ಲಿ 4 ಗುಂಟೆ ಜಾಗ ನೀಡಬೇಕು ಎಂದು ಬೇಡಿಕೆಗೆ ಸ್ಪಂಧಿಸಿದ ಸಚಿವರು, ತಕ್ಷಣ ಅಲ್ಲಿಂದಲೇ ಇಲಾಖೆಯ ಹಿರಿಯ ಅಧಿಕಾರಿಗೆ ಮೋಬೈಲ್ ಮೂಲಕ ಸಂಪರ್ಕಿಸಿ ಜಾಗ ನೀಡುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಎನ್.ಜಯರಾಂ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here