ಜಿಲ್ಲಾ ರಚನೆಗೆ ಮೈನಸ್ ಪಾಯಿಂಟ್

0
56

ಚಿಕ್ಕೋಡಿಯ ಸರಕಾರಿ ಕಛೇರಿಗಳಿಗಿಲ್ಲ ಸ್ವಂತ ಕಟ್ಟಡದ ಭಾಗ್ಯ
ಶಿವಾನಂದ ಪದ್ಮಣ್ಣವರ
ಚಿಕ್ಕೋಡಿ 30: ಗಡಿಜಿಲ್ಲೆ ಬೆಳಗಾವಿ ಇಬ್ಭಾಗವಾದರೆ ಚಿಕ್ಕೋಡಿಗೆ ಜಿಲ್ಲಾ ಸ್ಥಾನ ದೊರೆಯುವುದು ಗ್ಯಾರಂಟಿ ಎನ್ನುವ ಮಾತುಗಳು, ಕಳೆದೆರಡು ದಶಕಗಳಿಂದ ಕೇಳಿಬರುತ್ತಿರುವ ಮಾತು. ಹೀಗೆ ಭವಿಷ್ಯದ ಜಿಲ್ಲಾ ಕೇಂದ್ರವಾಗಲಿರುವ ಚಿಕ್ಕೋಡಿ ಪಟ್ಟಣದಲ್ಲಿರುವ ಬಹುತೇಕ ಸರಕಾರಿ ಕಛೇರಿಗಳಿಗೆ ಈವರೆಗೂ ಸ್ವಂತ ಕಟ್ಟಡದ ಭಾಗ್ಯ ದೊರೆಯದಿರುವುದು ಮೈನಸ್ ಪಾಯಿಂಟ ಆಗಲಿದೆ.
ಈಗಾಗಲೇ ಶೈಕ್ಷಣಿಕವಾಗಿ ಜಿಲ್ಲಾ ಸ್ಥಾನಮಾನ ಪಡೆದುಕೊಂಡಿರುವ ಚಿಕ್ಕೋಡಿ ಪಟ್ಟಣದಲ್ಲಿ ಸಾರಿಗೆ, ಕೃಷಿ, ನ್ಯಾಯಾಲಯ, ಉಪವಿಭಾಗಾಧಿಕಾರಿ, ಲೋಕೋಪಯೋಗಿ, ಪಂಚಾಯತ ರಾಜ್, ನೀರಾವರಿ ಇಲಾಖೆ ಸೇರಿದಂತೆ ಬಹುತೇಕ ಕಛೇರಿಗಳನ್ನು ಹಂತ ಹಂತವಾಗಿ ಅಗತ್ಯತೆಗನುಸಾರವಾಗಿ ಸರಕಾರ ಚಿಕ್ಕೋಡಿ ಪಟ್ಟಣಕ್ಕೆ ನೀಡುತ್ತ ಬರುತ್ತಲಿದೆ.
ಹೀಗೆ ಚಿಕ್ಕೋಡಿ ಪಟ್ಟಣಕ್ಕೆ ಆಗಮಿಸುತ್ತಿರುವ ಸರಕಾರಿ ಇಲಾಖಾ ಕಛೇರಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಹೋಗಲಿದೆ. ಆದರೆ ಹೀಗೆ ಹೆಚ್ಚುತ್ತಿರುವ ಸರಕಾರಿ ಇಲಾಖಾ ಕಛೇರಿಗಳಿಗೆ ಮೂಲಸೌಕರ್ಯ ಸೇರಿದಂತೆ ಸ್ವಂತ ಕಟ್ಟಡಗಳಿಗೆ ಸೂಕ್ತ ಸ್ಥಳಾವಕಾಶ ಒದಗಿಸಿಕೊಡಲು ಸ್ಥಳೀಯ ಜನಪ್ರತಿನಿಧಿಗಳು ಜಿಲ್ಲಾಡಳಿತದ ಮೇಲೆ ಒತ್ತಡ ಹೇರುವುದರ ಜೊತೆಗೆ ಇಲಾಖಾ ಅನುದಾನ ಒದಗಿಸಿಕೊಡುವ ಪ್ರಯತ್ನ ಮಾಡಬೇಕಾಗುತ್ತದೆ.
ಇದರಿಂದ ಈ ಭಾಗದಲ್ಲಿ ಇನ್ನುಳಿದ ಇಲಾಖೆಗಳು ತಮ್ಮ ಕಛೇರಿ ಸ್ಥಾಪಿಸಲು ಮುಂದೆ ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಜೊತೆಗೆ ಈಗಿರುವ ಕಛೇರಿಗಳು ಚಿಕ್ಕೋಡಿ ಬಿಟ್ಟು ಹೋಗಬಾರದಂತಾಗುತ್ತದೆ. ಇದು ಜಿಲ್ಲಾ ಬೇಡಿಕೆಗೆ ಇನ್ನಷ್ಟು ಬಲ ತುಂಬುವದು. ಈ ಭಾಗಕ್ಕೆ ತುರ್ತಾಗಿ ಅಗತ್ಯವಿರುವ ವಾರ್ತಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಉಪನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಕಛೇರಿಗಳನ್ನು ನೀಡುವಂತೆ ಆಯಾ ಇಲಾಖೆಗಳ ಮೇಲೆ ಒತ್ತಡ ಹೇರಬಹುದು.
ಚಿಕ್ಕೋಡಿ ಜಿಲ್ಲಾ ರಚನೆಯ ಕೂಗು ಹೊಸ ಸರಕಾರ ಬಂದಾಗಲೊಮ್ಮೆ ಆರಂಭವಾಗುತ್ತದೆ. ಆದರೆ ಅವಿಭಜಿತ ಸಂಪೂರ್ಣ ಜಿಲ್ಲೆಯ ಮೇಲೆ ಹಿಡಿತ ಸಾಧಿಸಬೇಕೆನ್ನುವ ಕೆಲವು ಜನಪ್ರತಿನಿಧಿಗಳ ದುರಾಸೆಯಿಂದಾಗಿ ಚಿಕ್ಕೋಡಿ ಜಿಲ್ಲಾ ರಚನೆಯ ಕಾರ್ಯ ಸರಕಾರ ಮುಂದೂಡುತ್ತಲೇ ಇದೆ. ಆದರೆ ಜಿಲ್ಲಾ ರಚನೆ ಬಲಗೊಳ್ಳಬೇಕಾದರೆ ಸರಕಾರದ ಇಲಾಖಾ ಕಛೇರಿಗಳನ್ನು ಚಿಕ್ಕೋಡಿಗೆ ಬರಬೇಕು.
ಆದರೆ, ಚಿಕ್ಕೋಡಿ ಪಟ್ಟಣಕ್ಕೆ ಬಂದಿರುವ ಬಹುತೇಕ ಸರಕಾರಿ ಕಛೇರಿಗಳು ಕಾರ್ಯನಿರ್ವಹಿಸಲು ಆರಂಭಿಸಿ ದಶಕಗಳೇ ಕಳೆಯುತ್ತ ಬಂದಿದೆ. ಈ ಕಛೇರಿಗಳಿಗೆ ಸೂಕ್ತ ಸ್ಥಳಾವಕಾಶ ಒದಗಿಸಿ, ಸ್ವಂತ ಕಟ್ಟಡ ನಿರ್ಮಿಸುವ ಕೆಲಸ ಮಾಡುವತ್ತ ಜನಪ್ರತಿನಿಧಿಗಳು ದೃಷ್ಠಿಹರಿಸಬೇಕಾಗಿತ್ತು ಆದರೆ ಈ ಕಾರ್ಯ ಇಂದಿಗೂ ಸಾಧ್ಯವಾಗಿಲ್ಲ.
ಇದರಿಂದಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿ, ಅಪರ ಜಿಲ್ಲಾ ಆರೋಗ್ಯಾಧಿಕಾರಿಗಳ ಕಛೇರಿ, ಸಹಕಾರಿ ಸಂಘಗಳ ಉಪನಿಬಂಧಕರ ಕಛೇರಿ, ಕೃಷಿ ಉಪನಿರ್ದೇಶಕರ ಕಛೇರಿ, ಮೀನುಗಾರಿಕಾ ಇಲಾಖೆ, ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಜಲ ಮಂಡಳಿ, ಕರ್ನಾಟಕ ಒಳಚರಂಡಿ ಮಂಡಳಿ ಸೇರಿದಂತೆ ಬಹುತೇಕ ಕಛೇರಿಗಳು ಇಂದಿಗೂ ಸ್ವಂತ ಕಟ್ಟಡವಿಲ್ಲದೇ ಅಲ್ಲಿ-ಇಲ್ಲಿ ಬಾಡಿಗೆ ಕಟ್ಟಡಗಳಲ್ಲಿ ತಮ್ಮ ಕಛೇರಿಗಳನ್ನು ನಡೆಸುತ್ತಿದ್ದಾರೆ.
ಇದರಿಂದಾಗಿ ಜಿಲ್ಲಾಮಟ್ಟದ ಕಛೇರಿಗಳ ಕೆಲಸ ಕಾರ್ಯಗಳನ್ನು ಕೈಕೊಳ್ಳುವ ಸಲುವಾಗಿ ನೆರೆಯ ಅಥಣಿ, ರಾಯಬಾಗ, ಹುಕ್ಕೇರಿ ತಾಲೂಕುಗಳ ಜನಸಾಮಾನ್ಯರು ಯಾವ ಕಛೇರಿ ಎಲ್ಲಿದೆ ಎನ್ನುವುದು ಗೊತ್ತಾಗದೇ ದಿನವಿಡಿ ಕಛೇರಿ ಹುಡುಕಾಟದಲ್ಲೇ ಕಾಲ ಕಳೆಯಬೇಕಾದ ಅನಿವಾರ್ಯತೆ ಬಂದೊದಗಿದೆ.
ಜಿಲ್ಲಾ ಸ್ಥಾನಮಾನ ಪಡೆಯಲು ಹೋರಾಟ ಸಮಿತಿಗಳು ನಡೆಸುತ್ತಿರುವ ಪ್ರಯತ್ನಗಳಿಗೆ ಈ ಭಾಗದ ಎಲ್ಲ ಜನಪ್ರತಿನಿಧಿಗಳು ಕೈ ಜೋಡಿಸಿದ್ದರೆ ಇಂದಿಗೆ ಜಿಲ್ಲಾಮಟ್ಟದ ಎಲ್ಲ ಕಛೇರಿಗಳು ಚಿಕ್ಕೋಡಿ ಪಟ್ಟಣದಲ್ಲಿ ಕಾರ್ಯನಿರ್ವಹಿಸುವದರ ಜೊತೆಗೆ ಜಿಲ್ಲಾರಚನೆಯ ಕೂಗಿಗೆ ಬಲತಂದುಕೊಡಬಹುದಾಗಿತ್ತು.
ಪ್ರತಿಕ್ರಿಯೆ:
ಐದು ತಾಲೂಕಾ ವ್ಯಾಪ್ತಿಗೆ ಒಳಪಡುವ ಕೃಷಿ ಉಪನಿರ್ದೇಶಕರ ಕಛೆರಿ ಆರಂಭವಾಗಿ ಎರಡು ವರ್ಷ ಸಮೀಪಿಸುತ್ತಿದೆ. ಕಛೇರಿ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದ್ದು, ಸ್ವಂತ ಕಟ್ಟಡ ನಿರ್ಮಿಸಲು ಸ್ಥಳಾವಕಾಶ ಒದಗಿಸುವಂತೆ ಉಪವಿಭಾಗಾಧಿಕಾರಿಗಳಿಗೆ ಕಳೆದ ವರ್ಷ ಮನವಿ ಸಲ್ಲಿಸಲಾಗಿದೆ.
ಎಲ್.ಐ. ರೋಡಗಿ
ಕೃಷಿ ಉಪನಿರ್ದೇಶಕರು

ಬಹುತೇಕ ಸರಕಾರಿ ಕಛೇರಿಗಳು ಇಂದಿಗೂ ಸ್ವಂತ ಕಟ್ಟಡ ಹೊಂದಿಲ್ಲ ಇದರಿಂದ ಚಿಕ್ಕೋಡಿ ಜಿಲ್ಲಾಯಾಗಬೇಕೆಂಬ ಕನಸು ಮುಂದೂಡುತ್ತ ಸಾಗುತ್ತಲಿದೆ. ಶಾಸಕ-ಸಂಸದರು ಸೇರಿ ಈ ಭಾಗದ ಎಲ್ಲ ಜನಪ್ರತಿನಿಧಿಗಳು ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ವೇಗ ನೀಡಬೇಕು.
ಚಂದ್ರಕಾಂತ ಹುಕ್ಕೇರಿ
ಸಂಸ್ಥಾಪಕರು, ಅನ್ನದಾನ ಸಮಿತಿ

loading...

LEAVE A REPLY

Please enter your comment!
Please enter your name here