ಕೇಂದ್ರದ ತಡೆ ಗೋಡೆ

0
132

ಕರ್ನಾಟಕ ಮತ್ತು ತಮಿಳುನಾಡು ನಡುವೆ ಭಾರೀ ಸಂಘರ್ಷ ಸೃಷ್ಟಿಸಿರುವ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಯನ್ನು ಸದ್ಯಕ್ಕೆ ತಡೆಹಿಡಿಯಲು ಕೇಂದ್ರ ಸರ್ಕಾರ ಮುಂದಾಗಿದೆ.ಈ ಹಿಂದೆ ಸುಪ್ರೀಂಕೋರ್ಟ್ ನೀಡಿರುವ ಎರಡು ಆದೇಶಗಳನ್ನು ಮಾರ್ಪಾಡು ಮಾಡುವಂತೆ ನ್ಯಾಯಾಲಯಕ್ಕೆ ನಿನ್ನೆ(ಅ.1)ರಾಜ್ಯ ಸರ್ಕಾರ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಸುಪ್ರೀಂಕೋರ್ಟ್ ಈ ಎರಡೂ ಅರ್ಜಿಗಳನ್ನು ನಾಳೆ (ಅ.3) ಅಂಗೀಕರಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಇದೇ ವೇಳೆ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಮುಕುಲ್ ರೊಹಟಗಿ ಅವರು ಕಾವೇರಿ ನದಿ ನೀರು ಹಂಚಿಕೆ ಸಂಬಂಧ ನಿರ್ವಹಣಾ ಮಂಡಳಿಯನ್ನು ರಚನೆ ಮಾಡುವ ಅಗತ್ಯವಿಲ್ಲ. ಇದನ್ನು ಕೇಂದ್ರ ಸರ್ಕಾರವೇ ಪರಿಹರಿಸಲಿದೆ ಎಂದು ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದುಕೊಡಲಿದ್ದಾರೆ.ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಗೆ ಕರ್ನಾಟಕ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ, ಕಾವೇರಿ ಜಲಾನಯನದ ವ್ಯಾಪ್ತಿಗೆ ಒಳಪಡುವ ಕೇರಳ ಮತ್ತು ಪುದುಚೇರಿ ರಾಜ್ಯಗಳ ಅಭಿಪ್ರಾಯವನ್ನು ಪಡೆಯಲಾಗಿಲ್ಲ. ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ವಹಿಸುತ್ತಿರುವುದರಿಂದ ಉಭಯ ರಾಜ್ಯಗಳ ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಬಗೆಹರಿಸಲು ಸರ್ಕಾರ ಸಿದ್ಧವಿದೆ ಎಂಬುದನ್ನು ಅಟಾರ್ನಿ ಜನರಲ್ ಸ್ಪಷ್ಟಪಡಿಸಲಿದ್ದಾರೆ.ಈಗಾಗಲೇ ಪ್ರಧಾನಿ ನರೇಂದ್ರಮೋದಿ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅವರೊಂದಿಗೆ ಇದರ ಸಾಧಕ-ಬಾಧಕಗಳ ಬಗ್ಗೆ ಮುಕುಲ್ ರೊಹಟಗಿ ಅವರ ಬಳಿ ಚರ್ಚೆ ನಡೆಸಿದ್ದಾರೆ. ಕರ್ನಾಟಕ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಪ್ರಬಲವಾಗಿ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಸದ್ಯಕ್ಕೆ ಮಂಡಳಿ ರಚನೆ ತಡೆಹಿಡಿಯುವುದರ ಮೂಲಕ ರಾಜ್ಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದ ಬಿಜೆಪಿ ಬೀಸೊದೊಣ್ಣೆಯಿಂದ ಪಾರಾಗಲು ಈ ತಂತ್ರ ಅನುಸರಿಸಿದೆ.ಶನಿವಾರ ಸಲ್ಲಿಸಿರುವ ವಿಶೇಷ ಮೇಲ್ಮನವಿಯಲ್ಲಿ ರಾಜ್ಯ ಸರ್ಕಾರವು ಇದೇ ವಿಷಯವನ್ನು ಪ್ರಸ್ತಾಪಿಸಿದೆ. ತಮಿಳುನಾಡು ನಿರ್ವಹಣಾ ಮಂಡಳಿ ರಚನೆ ಮಾಡಬೇಕು ಎಂಬುದರ ಬಗ್ಗೆ ಮಧ್ಯಂತರ ಅರ್ಜಿಯಲ್ಲಿ ಮನವಿ ಮಾಡಿಕೊಂಡಿಲ್ಲ. ಅಲ್ಲದೆ, ಕಾವೇರಿ ನ್ಯಾಯಾಧಿಕರಣ ಮಂಡಳಿ ನೀಡಿರುವ ಅಂತಿಮ ತೀರ್ಪು ಇದೇ ತಿಂಗಳ 18ರಂದು ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಗೆ ಬರಲಿದೆ. ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ರಾಜ್ಯಗಳ ಅಭಿಪ್ರಾಯವನ್ನು ಪಡೆಯದೆ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಆದೇಶಿಸಿರುವುದು ಸರಿಯಲ್ಲ. ಹೀಗಾಗಿ ಹಿಂದೆ ನೀಡಿರುವ ಆದೇಶವನ್ನು ಪರಿಶೀಲಿಸುವಂತೆ ಮೇಲ್ಮನವಿಯಲ್ಲಿ ಕೋರಲಾಗಿದೆ.ಕರ್ನಾಟಕದಲ್ಲಿ ಕಾವೇರಿ ನದಿಗೆ ಅನ್ಯಾಯವಾಗುತ್ತಿರುವುದನ್ನು ವಿರೋಧಿಸಿ ನಿನ್ನೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆಮರಣಾಂತರ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಈ ವಿಷಯ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ನರೇಂದ್ರ ಮೋದಿ ತಕ್ಷಣವೇ ಹಿರಿಯ ಸಚಿವರಾದ ರಾಜನಾಥ್‍ಸಿಂಗ್, ಅರುಣ್‍ಜೇಟ್ಲಿ, ಸುಷ್ಮಾಸ್ವರಾಜ್ ಸೇರಿದಂತೆ ಕೆಲವು ಆಪ್ತರ ಜತೆ ಮಾತುಕತೆ ನಡೆಸಿದರು.ಬಳಿಕ ಬೆಂಗಳೂರಿನಲ್ಲಿದ್ದ ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ ಅವರಿಂದ ಮಾಹಿತಿ ಪಡೆದು ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಲು ಸಿದ್ಧವಿದೆ. ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ದೇವೇಗೌಡರ ಬಳಿ ತೆರಳಿ ಉಪವಾಸ ಕೈ ಬಿಡುವಂತೆ ಮನವೊಲಿಸಬೇಕೆಂದು ಸೂಚಿಸಿದ್ದರು.ಅಲ್ಲದೆ, ಸ್ವತಃ ದೇವೇಗೌಡರ ಜತೆಯೂ ಮಾತುಕತೆ ನಡೆಸಿದ ಮೋದಿ, ಕೇಂದ್ರ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡುವುದಿಲ್ಲ. ನಾಲ್ಕೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಅಭಿಪ್ರಾಯ ಪಡೆಯಲಾಗುವುದು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಅವರನ್ನು ಮಾತುಕತೆ ಆಹ್ವಾನಿಸುವುದು ಸಮಂಜಸವಲ್ಲ. ಹಿರಿಯರಾದ ನೀವು ಈ ವಯಸ್ಸಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದು ಸರಿಯಲ್ಲ. ನಿಮ್ಮ ಜತೆ ನಾವು ಇರುತ್ತೇವೆ ಎಂದು ಮೋದಿ ಅಭಯ ಹಸ್ತ ನೀಡಿದ್ದಾರೆ.ಹೀಗೆ ಪ್ರಧಾನಿ ಅವರ ಸಂದೇಶ ಹೊತ್ತು ಸದಾನಂದಗೌಡ, ಅನಂತ್‍ಕುಮಾರ್, ಜಗದೀಶ್ ಶೆಟ್ಟರ್ ಸೇರಿದಂತೆ ಮತ್ತಿತರ ಬಿಜೆಪಿ ನಾಯಕರು ದೇವೇಗೌಡರ ಬಳಿಗೆ ಬಂದು ಸುದ್ದಿ ತಲುಪಿಸುತ್ತಿದ್ದಂತೆ ಮೋದಿ ಮನವಿಗೆ ಸ್ಪಂದಿಸಿದ ಗೌಡರು ಉಪವಾಸ ಕೈಬಿಟ್ಟರು. ಸದ್ಯಕ್ಕೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಲು ಕೇಂದ್ರ ಸರ್ಕಾರ ಹಿಂದೆ ಸರಿದಿರುವ ಕಾರಣ ಕರ್ನಾಟಕ ಸದ್ಯಕ್ಕೆ ಮಹಾಗಂಡಾಂತರದಿಂದ ಪಾರಾಗಿದೆ.

loading...

LEAVE A REPLY

Please enter your comment!
Please enter your name here