ಭಾವೈಕ್ಯತೆಯ ಮೊಹರಂ ಪ್ರಯುಕ್ತ ಕಳ್ಳೆಬವ್ವ ವೇಷ

0
78

ಗಜೇಂದ್ರಗಡ: ಮುಖಕ್ಕೆ ಕಪ್ಪು ಬಣ್ಣ, ಕೊರಳಲ್ಲೊಂದು ಗೆಜ್ಜೆಸರ, ತಲೆಗೊಂದು ಬಣ್ಣ ಬಣ್ಣದ ಉದ್ದ ಟೋಪಿ, ಲಾಡಿ, ಮೀಸೆ, ಗಡ್ಡದಾರಿಗಳಾಗಿ ಗೆಜ್ಜೆತೊಟ್ಟು ವಿಶೇಷ ವೇಷ ಭೂಷಣದೊಂದಿಗೆ ಒಬ್ಬ ಯುವಕ ನಿಮ್ಮ ಮನೆ ಮುಂದೆ ಅಥವಾ ರಸ್ತೆಯಲ್ಲಿ ನಿಮ್ಮೆದುರಿಗೆ ನಿಲ್ಲಬಹುದು. ಇವರನ್ನು ನೋಡಿ ಬೆಚ್ಚಿ ಬೀಳ ಬೇಡಿ. ಇವರಿಗೆ ಕಳ್ಳೆಬವ್ವ ಅಥವಾ ಅಸಳ್ಳೊಳ್ಳಿಬವ್ವ ಎನ್ನುತ್ತಾರೆ.
ಹೌದು, ತಾಲೂಕಿನಾಧ್ಯಂತ ಹಲವಡೆ ಕಂಡು ಬರುವ ಈ ಯುವಕರು, ಮಕ್ಕಳು ಭಾವೈಕ್ಯತೆಯ ಮೊಹರಂ ಪ್ರಯುಕ್ತ ಹರಕೆ ತೀರಿಸಲು ಈ ವೇಷ ಧರಿಸುತ್ತಾರೆ. ಮಾತನಾಡಲು ಬಂದರೂ ಇವರು ಮಾತನಾಡುವದಿಲ್ಲ. ಅದು ಅವರ ಹರಕೆಯ ನಿಯಮವಂತೆ. ಮೊಹರಂ ಪ್ರಯುಕ್ತ ಅಲೇದೇವರ ಪ್ರತಿಷ್ಠಾಪನೆ ಆಗುತ್ತಿದ್ದಂತೆ ಹರಕೆ ಹೊರುವ ಮುಸ್ಲಿಂ ಅಥವಾ ಹಿಂದು ಯುವಕರು ಈ ವೇಷ ಧರಿಸುತ್ತಾರೆ.
ಕಳ್ಳೆಬವ್ವ (ಅಳ್ಳೊಳ್ಳಿಬವ್ವ) ರ ವೇಷಭೂಷಣ:
ಮುಖಕ್ಕೆ ಇದ್ದಲಿಯ ಕಪ್ಪು ಬಣ್ಣ ಹಚ್ಚಿಕೊಂಡು ತಲೆಗೆ ಉದ್ದನೇಯ ಅಲಂಕಾರ ಗೊಂಡ ಬಣ್ಣ ಬಣ್ಣದ ಟೋಪಿ ಧರಿಸುತ್ತಾರೆ. ಸೊಂಟಕ್ಕೆ ಗೆಜ್ಜೆಸರ ಕಟ್ಟಿಕೊಂಡು ಮೈ ಮೇಲೆ ಹಾಫ್ ಪ್ಯಾಂಟ ಅಥವಾ ಲಂಗೋಟಿ ಮಾದರಿಯ ಬಟ್ಟೆ ಹಾಕಿಕೊಂಡು ಕೈಯಲ್ಲೊಂದು ಲಡ್ಡನ್ನು ಹಿಡಿದುಕೊಂಡು ದಾರಿಯಲ್ಲಿ ಎದುರಾದವರಿಗೆ ಲಡ್ಡಿನಿಂದ ಹೊಡೆಯುತ್ತಾರೆ. ಇವರ ಬಳಿ ಹೊಡೆಸಿಕೊಂಡವರಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಹೊಡೆಸಿಕೊಂಡವರು ಕಳ್ಳೊಳ್ಳಿ ಬವ್ವನಿಗೆ ಪ್ರತಿಯಾಗಿ ತಿಳಿದಷ್ಟು ಹಣ ನೀಡಿ ಭಕ್ತಿ ಮೆರೆಯುತ್ತಾರೆ.
ರಸ್ತೆಯಲ್ಲಿದ್ದರೆ ರೊಕ್ಕ ಮನೆಗೆ ಬಂದರೆ ದವಸ-ಧಾನ್ಯ ನೀಡಬೇಕು:
ರಸ್ತೆಯಲ್ಲಿ ಲಡ್ಡಿನಿಂದ ಹೊಡೆಸಿಕೊಂಡವರು ಹಣ ನೀಡಿ ಬಿಳ್ಕೊಟ್ಟರೆ, ಇವರು ಮನೆಗೆ ಆಗಮಿಸುತ್ತಿದ್ದಂತೆ ಕೆಲವರು ಜೋಳ, ಸಜ್ಜೆ, ಇಲ್ಲವೇ ರೊಟ್ಟಿ, ನೀಡುತ್ತಾರೆ. ಕೆಲವೊಮ್ಮೆ ಇವರಜತೆ ತಂಗಿ ಅಥವಾ ತಮ್ಮ ಇಲ್ಲವೇ ತಾಯಿ ಜೋಳಿಗೆ ಹಿಡಿದುಕೊಂಡು ಬಂದಿರುತ್ತಾರೆ. ಗ್ರಾಮಸ್ಥರು ಕೊಟ್ಟದ್ದನು ಸ್ವೀಕರಿಸಿ ಆರ್ಶಿವದಿಸಿ ತೆರಳುತ್ತಾರೆ.
ಸಮೀಪದ ರೋಣ, ನರೇಗಲ್ ಸೇರಿದಂತೆ ಯಲಬುರ್ಗಾ, ಇಲಕಲ್ ನಿಂದ ಪಟ್ಟಣಕ್ಕೆ ಬಂದ ಕೆಲವು ಕುಟುಂಬದವರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಮುಖಕ್ಕೆ ಕಪ್ಪು ಬಣ್ಣ ಹಚ್ಚಿ ಈ ಆಚರಣೆಗೆ ಮುಂದಾಗಿದ್ದು ಕಂಡು ಬಂತು ಈ ಕುರಿತು ವಿಜಯವಾಣಿ ಸಂಧರ್ಶಿಸಿದಾಗ ನಾವು 5 ವರ್ಷ ಈ ಹರಕೆ ಹೊತ್ತಿದ್ದೇವೆ. ಅದರಂತೆ ಮೊಹರಂ ಬಂದಾಗ ಪ್ರತಿ ವರ್ಷ 3, 5, ಹಾಗೂ 11 ದಿನ ಈ ವೇಷದಲ್ಲಿ ಪ್ರತಿ ಬಡಾವಣೆ ಹಾಗೂ ಗ್ರಾಮಗಳಿಗೆ ತೆರಳಿ ಹಣ ಕೇಳುತ್ತೇವೆ ಧವಸ-ಧಾನ್ಯ ಸ್ವೀಕರಿಸುತ್ತೇವೆ ಎಂದರು.
ಮುಸ್ಲಿಮರೇ ಇಲ್ಲದ ಗ್ರಾಮದಲ್ಲಿ ಸಂಭ್ರಮದ ಮೊಹರಂ ಹಬ್ಬ:
ಮಹಮ್ಮದ ಪೈಗಂಬರ ಮೊಮ್ಮಕ್ಕಳಾದ ಹಸನ್ ಮತ್ತು ಹುಸೇನ್‍ರು ಧರ್ಮ ಪ್ರಸಾರಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ್ದರ ದಿನದಂದು ಮೊಹರಂ ಹಬ್ಬ ಎಂದು ಆಚರಣೆ ಮಾಡುತ್ತಾರೆ. ಮೊಹರಂ ಹಬ್ಬ ಬಂತೆಂದರೆ ಹಿಂದೂ-ಮುಸ್ಲಿಂ ಭಾಂದವರು ಭಾವೈಕತೆಯಿಂದ ರಾಜ್ಯಾಧ್ಯಂತ ಅದರಲ್ಲೂ ಉತ್ತರಕರ್ನಾಟಕದ ಪ್ರತಿಗ್ರಾಮದಲ್ಲೂ ಸಕ್ರೀಯವಾಗಿ ಪಾಲ್ಗೋಂಡು ಆಚರಣೆ ಮಾಡುತ್ತಾರೆ ಇದು ಸಾಮಾನ್ಯ. ಆದರೆ ಮುಸ್ಲೀ ಜನಾಂಗದವರೇ ಇಲ್ಲದ ಬೆಣಸಮಟ್ಟಿ ಮತ್ತು ಇಲ್ಲಿನ ಕೆಲ ಗ್ರಾಮದಲ್ಲಿ ಮೊಹರಂ ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಿ ಕೋಮುಸೌರ್ಹಾದತೆಯ ಕೊಂಡಿಯಾಗಿದ್ದಾರೆ.
ಸಮೀಪದ ಬೆಣಸಮಟ್ಟಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಜನಾಂಗದವರೇ ಹೆಚ್ಚಿರುವ ಇಲ್ಲಿ ಹಲವಾರು ದಶಕಗಳಿಂದಲೂ ಗುಡಿಸಲನ್ನು ಮಸೀದಿಯನ್ನಾಗಿಸಿ ಅಲ್ಲಿ ಪಾಂಜಾ(ದೇವರುಗಳು)ಗಳನ್ನು ಪ್ರತಿಷ್ಠಾಪಿಸಿ ಅದ್ದೂರಿಯಾಗಿ ಮೊಹರಂ ಆಚರಿಸುತ್ತಾ ಬಂದಿದ್ದಾರೆ. ಸಧ್ಯ ಕೆಲ ಗಣ್ಯರ ಸಹಾಯಸ್ತ ಮತ್ತು ಗ್ರಾಮ ಪಂಚಾಯಿತಿಯಲ್ಲಿನ ಅನುದಾನದಲ್ಲಿ ಪ್ರತ್ಯೇಕ ದರ್ಗಾ(ಮಸೀದಿ) ನಿರ್ಮಿಸಿ ಮೊಹರಂ ಸಂದರ್ಭದಲ್ಲಿ ಕೊರಿಸಿದ ದೇವರಿಗೆ ನಡೆದುಕೊಳ್ಳುತ್ತಾರೆ. ಸಕ್ಕರೆ ಎಂದ ಒಂದು ಬಗೆಯ ಸಿಹಿ ತಿಂಡಿಯನ್ನು ಸಮರ್ಪಿಸುತ್ತಾರೆ. ಬೆಣಸಮಟ್ಟಿ ಗ್ರಾಮವಲ್ಲದೆ ಸಮೀಪದ ಮ್ಯಾಕಲಝರಿ, ಪುರ್ತಗೇರಿ, ನಾಗರಸಕೊಪ್ಪ ಗ್ರಾಮಗಳಲ್ಲಿಯೂ ಮುಸ್ಲಿಂರೇ ಇಲ್ಲ. ಆದರೂ ಭಾವೈಕತೆಯಿಂದ ಆಚರಣೆ ಮಾಡುತ್ತಿದ್ದಾರೆ. ಪುರ್ತಗೇರಿಯಲ್ಲಿಯೂ ಗ್ರಾಮದ ಮುಖಂಡರಿಂದಲೇ ಮಸೀದಿಯನ್ನು ನಿರ್ಮಿಸಿದ್ದಾರೆ.
ಒಟ್ಟಾರೆ, ಮೊಹರಂ ಹಬ್ಬ ಹಿಂದೂ ಮುಸ್ಲಿಮರ ಭಾವೈಕ್ಯದ ಪ್ರತೀಕ. ಈ ಹಬ್ಬದಲ್ಲಿ ಗಮನ ಸೆಳೆಯುವ ವಿಶೇಷ ಆಚರಣೆ ಎಂದರೆ ಅಳ್ಳೊಳ್ಳಿಬವ್ವ. ಇದರ ಮತ್ತೊಂದು ವಿಶೇಷ ಇದು ಹರಿಕೆ ಹೊತ್ತವರಿಗೆ ಮಾತ್ರ. ಈಗ ತಾಲೂಕಿನಾಧ್ಯಂತ ಅಳ್ಳೊಳ್ಳಿಬವ್ವ ವೇಷಧಾರಿಗಳ ಅಬ್ಬರ ಜೋರಾಗಿದ್ದು ವೇಷಧಾರಿಗಳು ಮಕ್ಕಳ ಗಮನ ಸೆಳೆಯುತ್ತಿದ್ದಾರೆ.
***** ******
“ಗ್ರಾಮೀಣ ಭಾಗದಲ್ಲಿ ಈ ಸಂಪ್ರದಾಯ ಇಂದಿಗೂ ವಿಶೇಷವಾಗಿ ನಡೆದುಕೊಂಡು ಬಂದಿದೆ. ಪಟ್ಟಣಗಳಲ್ಲಿ ಕೆಲವರು ಈ ಸಂಪ್ರದಾಯ ಮರೆಯುತ್ತಿದ್ದಾರೆ. ಅಲೆ ದೇವರ ಬಗ್ಗೆಯೂ ಜನರಲ್ಲಿ ಮೊದಲಿದ್ದ ನಂಬಿಕೆ, ವಿಶ್ವಾಸ ಕಡಿಮೆಯಾಗುತ್ತಿರುವುದು ವಿಷಾಧಕರ.” ಪ್ರೋ. ಬಿ.ಎ. ಕೆಂಚರೆಡ್ಡಿ, ಸಾಹಿತಿ.

loading...

LEAVE A REPLY

Please enter your comment!
Please enter your name here