ಸತ್ಯ ನಿಷ್ಠ ಶರಣೆ ಸತ್ಯಕ್ಕ

1
1447

ಅರ್ಚನೆ ಪೂರ್ಜನೆ  ನೇಮವಲ್ಲ, ಮಾತ್ರ ತಂತ್ರ ನೇಮವಲ್ಲ.

      ಧೂಪ ದೀಪಾರತಿ ನೇಮವಲ್ಲ

      ಪರಧನ ಪರಸ್ತ್ತ್ರೀ  ಪರದೈವಂಗಳಿಗೆರಗದಿಪ್ಪುದೇ ನೇಮ

      ಶಂಭು ಜಕ್ಕೇಶ್ವರನಲ್ಲಿ ಇವು ಕಾನಿರಣ್ಣ ನಿತ್ಯನೇಮ

ಬಹಿರಂಗದ ಆಡಂಬರದ ಪೂಜೆ ಪುನಸ್ಕಾರಗಳು ಮುಖ್ಯವಲ್ಲ  ಅಂತರಂಗದ  ಶುದ್ದಿ  ಮತ್ತು ಶುದ್ಧ ನಡೆಯೇ  ನಿಜವಾದ ಪೂಜೆ ಎಂದು  ಶರಣೆ ಸತ್ಯಕ್ಕ ಹೇಳುತ್ತಾಳೆ. ಹೆಸರಿಗೆ  ತಕ್ಕಂತೆ ಸತ್ಯ ನುಡಿ  ನಡೆಗೆ ಈಕೆ  ಹೆಸರಾಗಿದ್ದಾಳೆ.  ಶ್ರೇಣಿಕೃತ  ಸನಾತನ ಸಾಮಾಜಿಕ  ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿ ಪ್ರಸಿದ್ದಿ  ಪಡೆಯಬೇಕಾದರೆ  ಕುಲ ಜಾತಿ ಅಂತಸ್ತು  ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತಿದ್ದವು.  ಇದಕ್ಕೆ ಅಪವಾದವೆಂಬವಂತೆ 12 ನೇಯ ಶತಮಾನದ ಶರಣೆಯರು ಕೆಳವರ್ಗದಿಂದ  ಬಂದಿದ್ದರೂ ಶಿಕ್ಷಣದಿಂದ ವಂಚಿತರಾಗಿದ್ದರೂ,  ಮೇಲ್ವರ್ಗದವರ  ಸೇವೆಯನ್ನೇ  ಕಾಯಕವಾಗಿಸಿಕೊಂಡಿದ್ದರೂ ತಮ್ಮ ಕಾಯಕ ನಿಷ್ಠೆ ಮತ್ತು ಸಮಾಜಮುಖಿ ಸಾಧನೆ ಗಳಿಂದ ಪ್ರಸಿದ್ದಿಗೆ  ಬಂದುದು ಗಮನಾರ್ಹವಾಗಿದೆ. ಕಸಗುಡಿಸುವ ಕಾಯಕ  ಮಾಡಿಕೊಂಡಿದ್ದ ಶರಣೆ ಸತ್ಯಕ್ಕೆ  ಅಂಥವರಲ್ಲಿ  ಒಬ್ಬಳಾಗಿದ್ದಾಳೆ.

ಶಿವಭಕ್ತರ ನೆಲೆವೀಡಾಗಿದ್ದ ಶಿವಮೊಗ್ಗಾ  ಜಿಲ್ಲೆಯ  ಹಿರೇ ಜಂಬೂರು ಸತ್ಯಕ್ಕನ ಜನ್ಮಸ್ಥಳವಾಗಿದೆ. ಅಲ್ಲಿ ಶಂಭುಜಕ್ಕೇಶ್ವರ ದೇವಾಲಯವೊಂದಿದೆ.  ಶಂಭು ಜಕ್ಕೇಶ್ವರ ಸತ್ಯಕ್ಕನ ವಚನಾಂಕಿತವೂ ಆಗಿದೆ. ಬಸವರಾಜ ವಿಜಯ  ಚೆನ್ನ ಬಸವ ಪುರಾಣ, ಶಿವತತ್ವ ಚಿಂತಾಮಣಿ, ಭೈರವೇಶ್ವರ ಕಾವ್ಯ ಪುರಾತನ ದೇವಿಯರ ತ್ರಿವಿಧಿಗಳಲ್ಲಿ ಸತ್ಯಕ್ಕನಿಗೆ ಸಂಬಂಧಿಸಿದ ಕಥೆ ಬರುತ್ತದೆ.  ಜಂಬೂರೊಳೆಸೆವ ಸತ್ಯಕ್ಕ ನಮ್ಮವ್ವೆಯಂ ಎಂದು ಹರಿಹರನು ಲಿಂಗಾರ್ಚನೆ  ರಗಳೆಯಲ್ಲಿ ಸ್ಮರಿಸಿಕೊಂಡಿದ್ದಾನೆ. ಜನಪದ ಸಾಹಿತ್ಯದಲ್ಲಿ ಸತ್ಯಕ್ಕನ ಬಗ್ಗೆ ಹಾಡುಗಳಿವೆ.

ಸತ್ಯಕ್ಕನ ಏಕದೇವತಾ  ನಿಷ್ಠೆಯ ಬಗ್ಗೆ ಕತೆಯೊಂದು ಪ್ರಚಲಿತವಿದೆ. ಶಿವನಲ್ಲದೇ ಅನ್ಯ ದೈವಗಳನ್ನು ಅವಳು  ನಂಬುತ್ತಿರಲಿಲ್ಲ. ಅನ್ಯದೈವದ ಶಬ್ದ  ಕಿವಿಯಿಂದ  ಕೇಳೆ ಎಂದು ಪ್ರತಿಜ್ಞೆ ಮಾಡಿದ್ದಳು. ಇವಳ ಶಿವ ನಿಷ್ಠೆಯನ್ನು  ಪರೀಕ್ಷಿಸಲೋಸುಗ ಒಮ್ಮೆ  ಶಿವನು ಭಿಕ್ಷುಕನ ವೇಷ ಧರಿಸಿ ಒಂದು  ಹರಿದ  ಜೋಳಿಗೆಯನ್ನು  ತೆಗೆದುಕೊಂಡು ಇವಳ ಮನೆಗೆ ಭಿಕ್ಷೆಗೆ ಬರುತ್ತಾನೆ.  ಸತ್ಯಕ್ಕ ನೀಡಿದ ಕಾಳು ಕೆಳಗೆ ಬೀಳಲು  ಹರಿದ ಶಬ್ದ  ಕಿವಿಗೆ ಬೀಳುತ್ತಲೇ  ಸತ್ಯಕ್ಕ  ಸಿಟ್ಟಿನಿಂದ  ಕೈಯಲ್ಲಿದ್ದ ಸಟ್ಟುಗದಿಂದ  (ಕಟ್ಟಿಗೆಯ ಸೌಟು) ಅವನನ್ನು  ಜೋರಾಗಿ  ಹೊಡೆಯುತ್ತಾಳೆ.   ಅವಳ ಶಿವನಿಷ್ಠೆಗೆ  ಮೆಚ್ಚಿದ ಭಿಕ್ಷುಕ ವೇಷದ ಶಿವನು  ಅವಳಿಗೆ ಕೈಲಾಸ ಪದವಿ ಕೊಡುವೆನೆನ್ನುತ್ತಾನೆ.  ಕಾಯಕ ದಾಸೋಹ  ಅನುಭಾವಕ್ಕೆ ಹೇಳಿ ಸತ್ಯಕ್ಕ  ಕೈಲಾಸ ಪದವಿ  ನಿರಾಕರಿಸುತ್ತಾಳೆ.

ಶಿವಶರಣರ ಒಡನಾಟದಲ್ಲಿ ಸತ್ಯಕ್ಕ ಹಲವಾರು  ದಿನ ಇದ್ದಂತೆ  ತೋರುತ್ತದೆ.  ಬಸವಾದಿ ಶರಣರ ಪ್ರಭಾವ  ಇವರ ವಚನಗಳಲ್ಲಿ ಕಂಡು ಬರುತ್ತದೆ. ಇವಳು ರಚಿಸಿದ  29 ವಚನಗಳು  ಸಮಗ್ರ ವಚನ ಸಂಪುಟ  5 ರಲ್ಲಿ ಪ್ರಕಟವಾಗಿವೆ. ಸತ್ಯ ನಿಷ್ಠತೆ ಸಮಾನತೆ ಶರಣರ ಬಗ್ಗೆ ಅಭಿಮಾನ ಡಂಬಾಚಾರಿಗಳ ಬಗ್ಗೆ ಟೀಕೆ ಇವಳ ವಚನಗಳ ಮುಖ್ಯ ವಿಷಯಗಳಾಗಿವೆ.

ಇನಿಯನಿಗೆ ತವಕವಿಲ್ಲ ಎನಗೆ ಸೈರಣೆಯಿಲ್ಲ

        ಮನದಿಚ್ಛೆಯನರಿವ  ಸಖಿಯರಿಲ್ಲ ಇನ್ನೇವೆನವ್ವಾ

        ಭಾವನೇಕೆ ಬಾರನೆನ್ನ ಮನೆಗೆ ಆತನ ಕರೆದು ತಾರವ್ವಾ

        ಶಂಭು ಜಕ್ಕೇಶ್ವರನ ನೆರೆದು ನೋಡುವೆನು

        ಸತಿಪತಿ ಭಾವದ ಸತ್ಯಕ್ಕನ ವಚನಗಳು ತುಂಬಾ ಸೊಗಸಾಗಿವೆ.

        ಮೊಲೆ ಮೂಡಿ ಇದ್ದುದೆ ಹೆಣ್ಣೆಂದು ಪ್ರಾಮಾಣಿಸಲಿಲ್ಲ.

        ಕಾಸೆ ಮೀಸೆ ಕಠಾರವಿದ್ದುದೆ ಗಂಡೆಂದು ಪ್ರಮಾಣಿಸಲಿಲ್ಲ

        ಏತರ ಹಣ್ಣಾದಡೂ ಮಧುರವೇ ಕಾರಣ

        ಇದರೆಂದವೆ  ನೀನೇ  ಬಲ್ಲೆ ಶಂಭು ಜಕ್ಕೇಶ್ವರಾ

ಹೆಣ್ಣಿಗೆ  ಮಾಧುರ್ಯವೇ ಸ್ಥಾನಮಾನ ಕಲ್ಪಿಸಿಕೊಡುವಂತೆ ಆತ್ಮಜ್ಞಾನದ  ಆಧಾರದ  ಮೇಲೆ  ವ್ಯಕ್ತಿಯ ಶ್ರೇಷ್ಠತೆ ನಿರ್ಧಾರವಾಗುತ್ತದೆ.  ಎಂದು  ಹೇಳಿ ಗಂಡು ಹೆಣ್ಣು ತಾರತಮ್ಯವನ್ನು ಹೀಗಳೆದಿದ್ದಾಳೆ.

        ಲಂಚ ವಂಚನಕ್ಕೆ ಕೈಯಾನದ ಭಾಷೆ

        ಬಟ್ಟೆಯಲ್ಲಿ  ಹೊನ್ನು ವಸ್ತ್ತ್ರ ಬಿದ್ದಿದ್ದಡೆ

        ಕೈಮುಟ್ಟಿ  ಎತ್ತಿದೆ ನಾದಡೆ ಅಯ್ಯಾ ನಿಮ್ಮಾಣೆ

        ನೀವಿಕ್ಕಿದ ಭಿಕ್ಷೆಯೊಳಗಿಪ್ಪೆನಯ್ಯಾ ಶಂಭು ಜಕ್ಕೇಶ್ವರಾ

ಅತ್ಯಕ್ಕನದು ದೃಢ ನಿಲುವಿನ ನಿಷ್ಠಾಭಕ್ತಿ  ಸತ್ಯ ಶುದ್ಧ ಕಾಯಕದಿಂದ  ಬಂದ   ದ್ರವ್ಯದಿಂದ  ದಾಸೋಹವನ್ನು ಆಚರಿಸಿದ  ತೃಪ್ತಿ  ಜೀವನ ಅವಳದಾಗಿದೆ. ಸತ್ಯಕ್ಕ ಹೆಸರು  ಅವಳಿಗೆ  ಅನ್ವರ್ಥವಾಗಿದೆ.  ಪರದ್ರವ್ಯಕ್ಕೆ  ಆಸೆ ಮಾಡಿದೆನಾದಡೆ ಎನ್ನ ನರಕದಲ್ಲದ್ದಿ ನೀನೆದ್ದು ಹೋಗು  ಎಂದು ದೇವರಿಗೇ  ಸವಾಲು ಹಾಕಿದ್ದಾಳೆ. ನಿಷ್ಠೆಗೆ  ತಕ್ಕ ಗಟ್ಟಿ ಮಾತು ಅವಳದು. ತನ್ನ ವೃತ್ತಿ  ಪರಿಭಾಷೆಯನ್ನು ಸಮರ್ಪಕವಾಗಿ  ಕಲಾತ್ಮಕವಾಗಿ ತನ್ನ ವಚನಗಳಲ್ಲಿ  ಬಳಸಿಕೊಂಡಿದ್ದಾಳೆ. ಬಸವಣ್ಣನವರು ಒದಗಿಸಿದ ಸ್ವಾತಂತ್ರ್ಯವನ್ನು  ಮುಕ್ತವಾಗಿ ಸ್ವೀಕರಿಸಿ ಅವರು ನಡೆಸಿದ  ಸಮಾಜೋ ದಾರ್ಮಿಕ ಆಂದೋಲನದಲ್ಲಿ ಸಕ್ರೀಯವಗಿ ಭಾಗವಹಿಸಿ ಶರಣರ ಅಪೂರ್ವವಾದ ವಚನ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ಶರಣರ ಅಪೂರ್ವವಾದ ವಚನ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿ ಶರಣೆಯರ ಇತಿಹಾಸ ಪುಟಗಳಲ್ಲಿ ವಿಶೇಷ ಸ್ಥಾನ ಪಡೆದಿದ್ದಾಳೆ.

ಹಿರೇ ಜಂಬೂರಿನಲ್ಲಿ ಸತ್ಯಕ್ಕನ ಗುಡಿಯಿದೆ. ಹಳೆಯದಾಗಿದ್ದ ಈ  ಗುಡಿಯನ್ನು ಜೀರ್ಣೋದ್ದಾರ ಮಾಡಲಾಗಿದ್ದು ಅಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಪ್ರತಿ ವರ್ಷ  ಶ್ರಾವಣ  ಮಾಸದಲ್ಲಿ ಸತ್ಯಕ್ಕನ  ಜಾತ್ರೆ ನಡೆಯುತ್ತದೆ.  ಸತ್ಯಕ್ಕನು ಒಂದು  ನಾಯಿಯಿಂದ  ವೇದ ಓದಿಸಿದ್ದಳಂತೆ ವೇದ ಓದಿದ  ಆ ನಾಯಿಯ ಕಲ್ಲಿನ ವಿಗ್ರಹ ಸತ್ಯಕ್ಕನ  ಗುಡಿಯಲ್ಲಿದೆ.  ವಿಗ್ರಹವನ್ನು ಜಾವಲಿಂಗ ಎಂದು ಕರೆಯುತ್ತಾರೆ. ಇದೇ ಊರಲ್ಲಿ ಸತ್ಯಕ್ಕನ  ಪಾದಗಳ ಗುರುತಿರುವ ಶಿಲೆಯೊಂದಿದ್ದು ಜನರು ಭಕ್ತಿಭಾವದಿಂದ ಅದನ್ನು ಪೂಜಿಸಿ ತಮ್ಮ ಇಷ್ಟಾರ್ಥವನ್ನು ಈಡೇರಿಸಿ            ಕೊಳ್ಳುತ್ತಾರೆ.

 

ಆರ್. ಎಸ್. ಚಾಪಗಾವಿ

ಬೆಳಗಾವಿ,  ಮೋ: 9480455146

 

 

 

 

loading...

1 COMMENT

  1. ನಮಗೆ ತುಂಬಾ ಇಷ್ಟ ಆಯ್ತು ಶರಣೆ ಸತ್ಯಕನ ವಿಷಯ ವಿಚಾರ ತಿಳಿದು ನಿಮಗೆ ನಮ್ಮ ಧನ್ಯವಾದಗಳು ಎಲ್ಲಾ ಶರಣಿಯರ ಜೀವನ ಶೈಲಿ ಮತ್ತು ವಚನ, ಅಂಕಿತನಾಮ, ಪುಟ್ಟದಾಗಿ ಹಾಕಿದರೆ ಎಲ್ರಿಗೂ ತುಂಬಾ ಸಹಾಯವಾಗುವುದು ಶರಣರೇ ನಮಗೆ ನಮ್ಮ ಶರಣು ಶರಣಾರ್ಥಿ.

LEAVE A REPLY

Please enter your comment!
Please enter your name here