ವಚನ ಸಿಂಚನ-38

0
84

ಕಾಮವುಳ್ಳವಂಗೆ ಲಿಂಗದ ಪ್ರೇಮವಿನ್ನೆಲ್ಲಿಯದೊ?

ಕ್ರೌಧವುಳ್ಳವಂಗೆ ಜಂಗಮದ ಪ್ರೇಮವಿನ್ನೆಲ್ಲಿಯದೋ?

ಮದ ಮತ್ಸರವುಳ್ಳವಂಗೆ ಪ್ರಸಾದ ಪ್ರೇಮವಿನ್ನೆಲ್ಲಿಯಲ್ಲಿದೋ?

ಇಂತೀ ಗುಣವಂತರಲ್ಲದೆ ಸಹಜ ಸದ್ಭಕ್ತಿ ನೆಲೆಗೊಳ್ಳದಯ್ಯ

ಅಖಂಡೇಶ್ವರಾ.

ಪರಶಿವನ ಕುರುಹಾದ ಇಷ್ಟಲಿಂಗವನ್ನು, ಪರಶಿವಸ್ವರೂಪಿಯಾದ ಜಂಗಮವನ್ನು ಭಕ್ತಿಯಿಂದ ಪೂಜಿಸಬೇಕು. ಆ ಭಕ್ತಿಯ ಮೂಲಕವೇ ಪರಶಿವಾನುಗ್ರಹವನ್ನು ಹೊಂದಬೇಕು. ಆದರೆ ಆ ಭಕ್ತಿಯು ಸದ್ಗುಣಿ ಸದಾಚಾರಿಗಳಿಗೆ ಮಾತ್ರ ಲಭ್ಯ ಎಂಬುದನ್ನು ತಿಳಿಸುವ ಈ ವಚನ ಜೇವರಗಿ ಷಣ್ಮುಖ ಸ್ವಾಮಿಗಳವರದು.

ಶಿಪೂಜ್ಯೇಷು ಅನುರಾಗೋಭಕ್ತಿಃಷಿ ಪೂಜ್ಯರಲ್ಲಿ, ಪೂಜ್ಯನೀಯ ವಸ್ತುಗಳಲ್ಲಿ ನಾವು ತೋರುವ ಪ್ರೀತಿ ಅಥವಾ ಅನುರಾಗಕ್ಕೆ ಭಕ್ತಿ ಎಂದು ಅನುಭಾವಿಗಳು ಹೆಸರಿಸಿದ್ದಾರೆ. ಲಿಗುರುದೇವತಾದಿಗಳೊಳು ಅನುರಾಗವಿಹುದೇ ನಿಜಭಕ್ತಿಳಿ ಎಂಬ ಅನುಭಾವಿ ನಿಜಗುಣ ಶಿವಯೋಗಿಗಳ ಮಾತು ಅತ್ಯಂತ ಜನಜನಿತವಾದುದು. ಪರಶಿವನಾಗಲಿ, ಪರಶಿವ ಸ್ವರೂಪಿಗಳಾದ ಗುರು ಜಂಗಮರಾಗಲಿ ಭಕ್ತಿಗೆ ಮಾತ್ರ ಒಲಿದು ಅನುಗ್ರಹಿಸುವರು. ಧರ್ಮಗುರು ಬಸವಣ್ಣನವರು ತಮ್ಮ ಅನೇಕ ವಚನಗಳಲ್ಲಿ ಪರಶಿವನು ಭಕ್ತಿಪ್ರಿಯ ಮತ್ತು ಭಕ್ತಿಕಂಪಿತ ಎಂದು ಉಲ್ಲೇಖಿಸಿದ್ದಾರೆ. ಹಾಗಾಗಿ ಪರಶಿವನನ್ನು ಒಲಿಸಿಕೊಳ್ಳಲು ಭಕ್ತಿಯೊಂದು ಸರಳ ಹಾಗು ಸುಲಭ ಮಾರ್ಗ ಎಂಬುದು ಎಲ್ಲರೂ ಒಪ್ಪಿಕೊಳ್ಳುವ ಮಾತು.

ಅನುರಾಗ  ಅಥವಾ ಪ್ರೀತಿಗೆ ಸಂಸ್ಕಾರಕೊಟ್ಟಾಗ ಅಂದರೆ ಅದನ್ನು ಗುರು ದೇವತಾದಿಗಳಿಗೆ ಮೀಸಲಾಗಿರಿಸಿದಾಗ ಅದು ಭಕ್ತಿ ಎನಿಸಿಕೊಳ್ಳುವಂತೆ, ಅದನ್ನೇ ವಿಷಯಾದಿ ಭೋಗಗಳಿಗೆ ಬಳಸಿದಾಗ ಕಾಮವೆನ್ನಿಸಿಕೊಳ್ಳುವುದು ಅರ್ಥಾತ್ ಪ್ರೇಮವೇ ವಿಕೃತಗೊಂಡು ಕಾಮವೆನಿಸಿಕೊಂಡರೆ ಪರಿಷ್ಕರಣಗೊಳ್ಳುವ ಮೂಲಕ ಭಕ್ತಿ ಎನಿಸಿಕೊಳ್ಳುವುದು. ಗುರು ಕರುಣದಿಂದ ನಮಗೆ ಪ್ರಾಪ್ತವಾದ ಇಷ್ಟಲಿಂಗವು ಪರಶಿವನ ಕುರುಹು ಎಂಬಲ್ಲಿ ಎರಡು ಮಾತಿಲ್ಲ. ಅದು ನಮಗೆ ಅತ್ಯಂತ ಪೂಜ್ಯನೀಯವಾದುದು. ಅದರಲ್ಲಿಡುವ ಪ್ರೇಮವು ಸಹಜವಾಗಿಯೇ ಭಕ್ತಿ ಎನಿಸಿಕೊಳ್ಳುವುದು.

ಆದರೆ ವಿಷಯ ಭೋಗಗಳಲ್ಲಿ ನಾವು ಆಸಕ್ತಿಯನ್ನು ಹೊಂದಿದಾಗ ನಮ್ಮ ಪ್ರೇಮವು ವಿಕೃತಗೊಂಡು ಕಾಮವೆನಿಸಿ ಕೊಳ್ಳುವುದು. ಈ ಕಾಮವುಳ್ಳವರ ಮನಸ್ಸು ಸದಾ ರೂಪರಸಗಂಧಾದಿ ವಿಷಯಗಳಲ್ಲಿ ಲಿಪ್ತವಾಗಿರುವುದು. ಅವರು ಭಕ್ತಿಮಾರ್ಗಕ್ಕೆ  ಅನರ್ಹರು. ಅವರಿಗೆಂದೂ ಪರಶಿವ ಸ್ವರೂಪವಾದ ಇಷ್ಟಲಿಂಗದಲ್ಲಿ ಭಕ್ತಿ ನೆಲೆಗೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಲಿಂಗದಲ್ಲಿ ಪ್ರೇಮ ಅಥವಾ ಭಕ್ತಿಯನ್ನು ಹೊಂದಬೇಕಾದವರು ಕಾಮವನ್ನು ವರ್ಜಿಸಬೇಕಾದುದು ಅತ್ಯವಶ್ಯ. ಕಾಮವನ್ನು ಹತೋಟಿಯಲ್ಲಿಡಲು ಯೋಗ್ಯ ಆಹಾರ-ವಿಹಾರಗಳಿಂದ ಮಾತ್ರ ಸಾಧ್ಯ. ಏಕೆಂದರೆ ಅತಿಯಾದ ಆಹಾರ ಸೇವನೆ ಮತ್ತು ಅತಿಯಾದ ನಿದ್ದೆಯಿಂದ ಕಾಮದ ಉತ್ಪತ್ತಿಯಾಗುವುದೆಂದು ಯೋಗ ಬಲ್ಲಿದರು ಹೇಳುವುದುಂಟು. ದುರ್ಗುಣಿ ದುರಾಚಾರಿಗಳ ಸಂಗದಿಂದಲೂ ಮನಸ್ಸಿನಲ್ಲಿ ಕಾಮಭಾವನೆಗಳು ಬರುವುದುಂಟು. ಲಿಸಂಗಾತ್ ಸಂಜಾಯತೇ ಕಾಮಃಳಿ ಎಂದು ಭಗವದ್ಗೀತೆ ಹೇಳಿರುವಲ್ಲಿ ಈ ಭಾವವೇ ವ್ಯಕ್ತವಾಗಿರುವುದು. ಮನಸ್ಸಿನಲ್ಲಿ ಹುಟ್ಟಿದ ಈ ಕಾಮವನ್ನು ನಮ್ಮ ಇಂದ್ರಿಯಗಳು ಪೋಷಿಸುತ್ತವೆ. ಇಂದ್ರಿಯಗಳ ಮೂಲಕ ವಿಷಯಭೋಗ ಮಾಡುವುದರಿಂದ ಕಾಮದ ಶಮನವಾಗುವುದಿಲ್ಲ. ಆದ್ದರಿಂದ ಇಂದ್ರಿಯಗಳನ್ನು ನಿಗ್ರಹಿಸಬೇಕು. ಸಂಯಮದಿಂದ ಇಂದ್ರಿಯಗಳ ಮೇಲೆ ವಿಜಯ ಸಾಧಿಸಿ ಕಾಮದಿಂದ ಮುಕ್ತರಾಗಬಹುದು.

ಲಿಂಗಾಯತ ಧರ್ಮದಲ್ಲಿ ಜಂಗಮಕ್ಕೆ ಲಿಂಗಕ್ಕಿಂತಲೂ ವಿಶೇಷ ಪ್ರಾಶಸ್ತ್ಯವನ್ನು ನೀಡಲಾಗಿದೆ. ಪರಶಿವ ಸ್ವರೂಪಿಯಾದ ಜಂಗಮನು ಲಿಂಗದ ಮುಖವಾಗಿರುವುದರಿಂದ ನಮ್ಮ ಇಷ್ಟಲಿಂಗಕ್ಕೆ ಅರ್ಥಾತ್ ಪರಶಿವನಿಗೆ ಸಲ್ಲಿಸಬೇಕಾದುದೆಲ್ಲವನ್ನೂ ಜಂಗಮದ ಮೂಲಕವೇ ಸಲ್ಲಿಸಬೇಕೆಂಬುದು ಧರ್ಮಗುರುವಿನ ಸ್ಪಷ್ಟ ಆದೇಶ. ಅಂತಹ ಜಂಗಮದಲ್ಲಿಯೂ ನಮ್ಮ ಭಕ್ತಿ ನೆಲೆಗೊಳ್ಳಬೇಕಾದುದು ಅತ್ಯವಶ್ಯ. ಭಕ್ತಿ ಇಲ್ಲದೆ ಜಂಗಮದ ಒಲುಮೆಯೂ ಅಸಾಧ್ಯ. ಅದಕ್ಕಾಗಿ ನಾವು ನಯ-ವಿನಯಾದಿ ಸದ್ಗುಣಗಳನ್ನು ಹೊಂದಿರಬೇಕು. ಕಿಂಕರಭಾವದಿಂದ ಮಾಡುವ ಭಕ್ತಿಗೆ ಮಾತ್ರ ಜಂಗಮನು ಒಲಿದು ಪ್ರಸನ್ನಗೊಳ್ಳುವನು. ಅದನ್ನೇ ಜಂಗಮ ಪ್ರೇಮವೆಂದು ಷಣ್ಮುಖ ಶಿವಯೋಗಿಗಳು ಕರೆದಿರುವರು. ಆದರೆ ಕ್ರೌಧವುಳ್ಳವರಿಗೆ ಎಂದೂ ಜಂಗಮಪ್ರೇಮ ಅಳವಡದು. ಮೇಲೆ ಉಲ್ಲೇಖಿಸಿದ ಕಾಮವೇ ಈ ಕ್ರೌಧದ ಜನನಿ. ಕಾಮಾತ್ ಸಂಜಾಯತೇ ಕ್ರೌಧಃ ಎಂಬುದು ಗೀತೆಯ ಸ್ಪಷ್ಟೌಕ್ತಿ. ಆದ್ದರಿಂದ ಲಿಂಗಜಂಗಮಗಳಲ್ಲಿ ಭಕ್ತಿಯನ್ನು ಆಚರಿಸಬೇಕೆನ್ನುವವರು ಈ ಕಾಮಕ್ರೌಧಗಳೆರಡರಿಂದಲೂ ಮುಕ್ತಗೊಳ್ಳಬೇಕಾದುದು ಅತ್ಯವಶ್ಯ.

ಮದ ಮತ್ಸರಗಳೂ ಕೂಡ ದುರ್ಗುಣಗಳೇ. ಸೊಕ್ಕಿನಿಂದ (ಮದ) ಮೆರೆಯುವ, ಇನ್ನೊಬ್ಬರನ್ನು ಕಂಡು ಮತ್ಸರಿಸುವ ಗುಣವುಳ್ಳವರು ಪರಶಿವನ ಅನುಗ್ರಹಕ್ಕೆ (ಪ್ರಸಾದ) ಎಂದೂ ಪಾತ್ರರಾಗರು. ಅರ್ಥಾತ್ ಪ್ರಸಾದ (ಪರಶಿವಾನುಗ್ರಹ)ವನ್ನು ಬಯಸುವವರು ಮದ-ಮತ್ಸರಗಳಿಂದ ಮುಕ್ತರಾಗಿರಬೇಕು. ಹೀಗೆ ಲಿಂಗಜಂಗಮದಲ್ಲಿ ಭಕ್ತಿಯನ್ನು ಆಚರಿಸಬೇಕೆನ್ನುವವರು, ಆ ಭಕ್ತಿಯ ಬಲದಿಂದ ಪರಶಿವಾನುಗ್ರಹ(ಪ್ರಸಾದ)ವನ್ನು ಪಡೆಯಬೇಕೆನ್ನುವವರು ಕಾಮ, ಕ್ರೌಧ, ಲೋಭ ಮೋಹ, ಮದ ಮತ್ತು ಮತ್ಸರಗಳೆಂಬ ಈ ಆರೂ ದುರ್ಗುಣಗಳನ್ನು ಮನದಿಂದ ಕಿತ್ತೆಸೆದು ಸದ್ಗುಣಿಗಳಾಗಲೇಬೇಕು. ಸದ್ಗುಣಿಗಳಲ್ಲದವರಿಗೆ ಅಥವಾ ಸದ್ಗುಣಿಗಳಾಗದವರಿಗೆ ಸದ್ಭಕ್ತಿ ಸಾಧ್ಯವಾಗದು ಅಂದರೆ ಅವರಲ್ಲಿ ಭಕ್ತಿಭಾವ ನೆಲೆಗೊಳ್ಳಲಾರದು ಎಂದು ಷಣ್ಮುಖ ಶಿವಯೋಗಿಗಳು ತಿಳಿಸಿರುವಲ್ಲಿ ಕಾಮ ಕ್ರೌಧ ಮದಮತ್ಸರಗಳಿಂದ ಮುಕ್ತರಾಗಿ ಪರಶಿವಾನುಗ್ರಹಕ್ಕೆ ಪಾತ್ರರಾಗಬೇಕೆಂಬ ಆಶಯ ವ್ಯಕ್ತವಾಗಿದೆ.

 

 

 

 

loading...

LEAVE A REPLY

Please enter your comment!
Please enter your name here