ಉಚಿತ ಕಣ್ಣಿನ ತಪಾಸಣೆ, ಪೊರೆ ಶಸ್ತ್ರಚಿಕಿತ್ಸಾ ಶಿಬಿರ

0
141

ಕನ್ನಡಮ್ಮ ಸುದ್ದಿ-ಯಲ್ಲಾಪುರ : ಕಣ್ಣು ದೇಹದ ಎಲ್ಲ ಅಂಗಾಂಗಳಿಗಿಂತ ಹೆಚ್ಚು ಪ್ರಧಾನವಾಗಿದ್ದು ಅತೀ ಸೂಕ್ಷ್ಮ ಇಂದ್ರಿಯವಾಗಿದ್ದು ಇದರ ರಕ್ಷಣೆ ಮಹತ್ವದ ಕಾರ್ಯವಾಗಿದೆಯಲ್ಲದೇ ನೇತ್ರಧಾನ ಮಾಡುವುದು ಅತ್ಯಂತ ಶ್ರೇಷ್ಠವೆನಿಸಿದೆ ಎಂದು ಶಿರಸಿಯ ರೋಟರಿ ಆಸ್ಪತ್ರೆಯ ವೈದ್ಯೆ ಡಾ.ಪೂಜಾ ವೆರ್ಣೇಕರ ಹೇಳಿದರು. ಅವರು ತಾಲೂಕಿನ ಕಿರವತ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಕಣ್ಣಿನ ಪೊರೆ ಹಾಗೂ ಕಣ್ಣಿನ ಸಂಬಂಧಿ ಇತರೆ ಕಾಯಿಲೆಗಳ ತಪಾಸಣೆ/ಪೊರೆ ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಶಿರಸಿಯ ರೋಟರಿ ಚ್ಯಾರಿಟೇಬಲ್ ಆಸ್ಪತ್ರೆ, ರೋಟರಿಕ್ಲಬ್ ಶಿರಸಿ, ಜಿಲ್ಲಾ ಅಂದತ್ವ ನಿವಾರಣಾ ಸಂಸ್ಥೆ ಕಾರವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕಾರವಾರ, ಕಾರವಾರದ ಕೆ.ಡಿ.ಡಿ.ಸಿ. ಸಮಾಜ ಸೇವಾ ಸಂಸ್ಥೆ, ಕಿರವತ್ತಿಯ ಸಾಧನ ಮಹಾ ಸಂಘ ಹಾಗೂ ಕಿರವತ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಿಭಿರದಲ್ಲಿ ಪ್ರಯೋಜನ ಪಡೆದ ಪ್ರತಿಯೊಬ್ಬರೂ ಈ ರೀತಿಯ ಸಮಸ್ಯೆ ಇರುವ ಜನರಿಗೆ ಈ ಬಗ್ಗೆ ಮಾಹಿತಿ ನೀಡಿ ದೃಷ್ಟಿ ನೀಡಲು ಮುಂದಾಗಬೇಕು ಎಂದರು.
ಅತಿಥಿಗಳಾಗಿ ಪಾಲ್ಗೊಂಡ ರೋಟರಿ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಗಿರೀಶ ಕಣ್ಣಿನ ಪೊರೆ ನಿವಾರಣೆ, ಅಂಧತ್ವ ನಿರ್ಮೂಲನೆ ಬಗ್ಗೆ ಸಂಸ್ಥೆಯು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕೆ.ಡಿ.ಡಿ.ಸಿ. ಸಂಸ್ಥೆಯ ಮಹಿಳಾ ಅಭಿವೃದ್ಧಿ ನಿಯೋಜನೆಯ ಸಂಯೋಜಕ ಹರಿಶ್ಚಂದ್ರ ಹರಿಕಾಂತ ಮಾತನಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಗೌರಯುತವಾಗಿ ಬಾಳಬೇಕಾದರೆ ಪ್ರತಿಯೊಬ್ಬರೂ ತಮ್ಮ ಕೈಲಾದ ಸಮಾಜ ಸೇವೆಯನ್ನು ಕೈಗೊಳ್ಳಬೇಕು. ಸಮಾಜದ ಸಂಘ ಸಂಸ್ಥೆಗಳು ಸೇರಿಕೊಂಡು ಇಂತಹ ಶಿಭಿರಗಳನ್ನು ಇನ್ನು ಹೆಚ್ಚು ಆಯೋಜನೆಗೊಳಿಸಿ ಬಡ ಜನರ ಬಾಳಿಗೆ ಆಶಾ ಕಿರಣವಾಗಬೇಕೆಂದರು. ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ.ಭಟ್ಟ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು. ಸಾಧನಾ ಮಹಾ ಸಂಘದ ಸದಸ್ಯರು ಪ್ರಾರ್ಥಿಸಿದರು. ಕೆ.ಡಿ.ಡಿ.ಸಿ. ಕಾರ್ಯಕರ್ತೆ ಅಕ್ಷತಾ ಕಲಾಲ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸುಮಾರು 75 ಕ್ಕೂ ಹೆಚ್ಚು ಜನ ಮಾಹಿತಿಯನ್ನು ಪಡೆದುಕೊಂಡು ಚಿಕಿತ್ಸೆ ಪಡೆದರು. 13 ಜನ ಕಣ್ಣಿನ ಪೊರೆ ಚಿಕಿತ್ಸೆಗೆ ಆಯ್ಕೆಯಾದರು.

loading...

LEAVE A REPLY

Please enter your comment!
Please enter your name here