ಕನ್ನಡಮ್ಮ ಸುದ್ದಿ-ನವಲಗುಂದ : ಧಾರವಾಡ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿರುವ ಹೆಚ್.ವಿ. ಮಾಡಳ್ಳಿ ಅವರು ಹಳ್ಳಿಕೇರಿ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದಂತೆ ಬಿಜೆಪಿಯ ಅವಧಿಯಲ್ಲಿ ಅನುದಾನ ಬಿಡುಗಡೆಗೊಂಡಿದೆ ಎಂದು ಪತ್ರಿಕಾ ಹೇಳಿಕೆ ನೀಡಿರುವುದು ನೋಡಿದರೆ ಅವರಿಗೆ ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಇಲ್ಲದಂತೆ ಕಾಣಿಸುತ್ತಿದೆ ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಬಿ. ಗಂಗಾಧರಮಠ ಆರೋಪವನ್ನು ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹಳ್ಳಿಕೇರಿ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನವಲಗುಂದ ಶಾಸಕರಾದ ಎನ್.ಹೆಚ್.ಕೋನರಡ್ಡಿ ಅವರು ಹಲವು ಬಾರಿ ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಇದಕ್ಕಾಗಿ ಅವರು ಕರ್ನಾಟಕ ಪ್ರಗತಿ ಪರಿಶೀಲನಾ ಸಭೆ ಹಾಗೂ ವಿಧಾನಸಭೆಯ ಅಧಿವೇಶನದಲ್ಲಿ ಹೋರಾಡಿ ಈ ಅನುದಾನವನ್ನು ತಂದಿದ್ದಾರೆ. ಅಲ್ಲದೆ ಇದು 2014ರಲ್ಲಿಯೇ ಬಿಡುಗಡೆಗೊಂಡಿದೆ. ಆದರೂ ಧಾರವಾಡ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಇದು ಬಿಜೆಪಿ ಅವಧಿಯಲ್ಲಿ ಆಗಿದೆ ಎಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾಡಳ್ಳಿ ಅವರಿಗೆ ಕ್ಷೇತ್ರದ ಅಭಿವೃದ್ಧಿಗಿಂತ ಬಿಜೆಪಿಯನ್ನು ಹೊಗಳುವುದು ಹಾಗೂ ಜೆಡಿಎಸ್ ಶಾಸಕರನ್ನು ಟೀಕಿಸುವುದೇ ಮುಖ್ಯವೆನಿಸುತ್ತಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಇಂತಹ ರಾಜಕೀಯ ಪ್ರೇರಿತ ಹೇಳಿಕೆ ನೀಡುವ ಮುನ್ನ ಅವರು ಹಲವು ಬಾರಿ ಯೋಚಿಸಿ ಹೇಳಿಕೆ ನೀಡುವುದು ಒಳಿತು ಯಾಕೆಂದರೆ ನವಲಗುಂದ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ ಕೋನರಡ್ಡಿ ಆಯ್ಕೆಯಾದ ನಂತರ ಕ್ಷೇತ್ರವೂ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಂಡಿದೆ. ಅದನ್ನು ಸಹಿಸದೆ ಈ ರೀತಿ ಜನರ ದಿಕ್ಕು ತಪ್ಪಿಸುವ ಹೇಳಿಕೆ ನೀಡುವುದು ಅವರ ಹುದ್ದೆಗೆ ಶೋಭೆ ನೀಡುವುದಿಲ್ಲ. ಅವರು ಕ್ಷೇತ್ರದ ಅಭಿವೃದ್ಧಿ ಮೂಲಕ ವಿರೋಧ ಪಕ್ಷದಲ್ಲಿದ್ದರೂ ನಿಜವಾದ ಹೋರಾಟಗಾರ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಇದನ್ನು ಯಾರೊಬ್ಬರು ಮರೆಯುವಂತಿಲ್ಲ ಇಂತಹ ಸುಳ್ಳು ಹೇಳಿಕೆಗಳು ಏನಿದ್ದರೂ ಅದು ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಸರಿ ಹೊಂದುತ್ತದೆ. ಹೀಗಾಗಿ ಜನರ ಮುಂದೆ ಅಪಹಾಸ್ಯಕ್ಕೆ ಗುರಿಯಾಗುವ ಮುನ್ನ ಅವರು ಸಾರ್ವಜನಿಕವಾಗಿ ಶಾಸಕರಾದ ಕೋನರಡ್ಡಿ ಅವರ ಬಳಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹ ಮಾಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ. ಪಾಟೀಲರ ಅವರ ಜೊತೆಗೆ ಚರ್ಚಿಸಿ ಅನುದಾನ ಬಿಡುಗಡೆಗೊಳಿಸಿದ್ದೇನೆ ಎಂದು ಮಾಡಳ್ಳಿ ಅವರು ಹೇಳಿಕೆ ನೀಡಿರುವುದು ಸರಿಯಲ್ಲ. ಇದು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕರ ಸಂವಿಧಾನಾತ್ಮಕ ಹಕ್ಕನ್ನು ಪ್ರಶ್ನಿಸಿದಂತಾಗುತ್ತದೆ. ಅದನ್ನು ಮೊಟಕುಗೊಳಿಸುವ ಮತ್ತು ಅದನ್ನು ಹತ್ತಿಕ್ಕಲು ಪ್ರಯತ್ನಿಸುವ ಹಕ್ಕು ಯಾರಿಗೂ ಇಲ್ಲ ಎಂಬುದನ್ನು ಅವರು ಮೊದಲು ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆಗೊಂಡಾಗ ಅದು ಸಹಜವಾಗಿಯೇ ಕ್ಷೇತ್ರದ ಶಾಸಕರಿಗೆ ಗೌರವ ಸಲ್ಲುತ್ತದೆ ಎಂಬ ಸಾಮಾನ್ಯ ಜ್ಞಾನಕೂಡ ಅವರಿಗೆ ಇಲ್ಲದಿರುವುದು ದುರಂತದ ಸಂಗತಿ ಎಂದು ವ್ಯಂಗ್ಯವಾಡಿದ್ದಾರೆ.
ಒಂದು ವೇಳೆ ಹಳ್ಳಿಕೇರಿ ಕುಡಿಯುವ ನೀರು ಯೋಜನೆಗೆ ಅನುದಾನ ಬಿಡುಗಡೆಗೊಳಿಸಿರುವುದಕ್ಕೆ ಅವರಿಗೆ ಅನುಮಾನಗಳಿದ್ದರೆ ಅವರದೇ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಅದನ್ನು ಸಚಿವರ ಸಮ್ಮುಖದಲ್ಲಿಯೇ ಕಡತವನ್ನು ತೆಗೆದು ನೋಡಿಕೊಳ್ಳಲಿ. ಆಗ ಸತ್ಯ ಏನೆಂಬುದು ಅವರಿಗೆ ತಿಳಿಯುತ್ತದೆ. ಅದು ಬಿಟ್ಟು ರಾಜ್ಯದಲ್ಲಿ ಅವರದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಸುಖಾಸುಮ್ಮನೇ ಬಿಜೆಪಿ ಅವಧಿಯಲ್ಲಿ ಅನುದಾನ ಬಿಡುಗಡೆಗೊಂಡಿದೆ ಎಂದು ಹೇಳಿರುವುದು ನೋಡಿದರೆ 2014ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತೇ. ಅಥವಾ ಕಾಂಗ್ರೆಸ್‍ನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರವಿತ್ತೇ ಎಂಬುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಬಿ.ಗಂಗಾಧರಮಠ ತಿಳಿಸಿದ್ದಾರೆ.

loading...