ಕೃಷ್ಣಾ ಮೇಲ್ದಂಡೆ 3 ನೇ ಹಂತದ ಯೋಜನೆಗೆ-55 ಸಾವಿರ ಕೋಟಿ ರೂ. ಅನುದಾನ ಬಿಡುಗಡೆಗೆ-ಸಚಿವ ಸಂಪುಟದಲ್ಲಿ ಪ್ರಸ್ತಾವಣೆ…

0
71

ಕನ್ನಡಮ್ಮ ಸುದ್ದಿ-ವಿಜಯಪುರ 

ಕೃಷ್ಣಾ ಮೇಲ್ದಂಡೆ 3 ನೇ ಹಂತದ ಯೋಜನೆಗೆ ಅಗತ್ಯವಿರುವ 55 ಸಾವಿರ ಕೋಟಿ ರೂ. ಅನುದಾನ ಬಿಡುಗಡೆಗಾಗಿ ಸಚಿವ ಸಂಪುಟದ ಎದುರು ಪ್ರಸ್ತಾಪಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ಹೊಕ್ಕುಂಡಿಯಲ್ಲಿ ಮುಳವಾಡ ಏತ ನೀರಾವರಿ 3 ನೇ ಹಂತದ ಯೋಜನೆಯಡಿಯಲ್ಲಿ ಬರುವ ಮಲಘಾಣ ಪಶ್ಚಿಮ ಕಾಲುವೆ (93 ಕಿ.ಮೀ.ಯಿಂದ 118.560) ವರೆಗಿನ ಕಾಲುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಕಳೆದ ಸರ್ಕಾರದ ಅವಧಿಯಲ್ಲಿ ಒಟ್ಟು 17207 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದು, ಪ್ರಸಕ್ತ ಸರ್ಕಾರವು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಿದೆ. ಯೋಜನೆಗಾಗಿ 55 ಸಾವಿರ ಕೋಟಿ ರೂ.ಗಳ ಪರಿಷ್ಕøತ ಅನುದಾನಕ್ಕೆ ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಾಗಿದೆ ಎಂದರು.
ರಾಜ್ಯ ಸರ್ಕಾರ ರಾಜ್ಯದಲ್ಲಿ ಒಟ್ಟು 1400 ಕೆರೆಗಳನ್ನು ತುಂಬಲು ಯೋಜಿಸಿದ್ದು, ಇದಕ್ಕಾಗಿ 6 ಸಾವಿರ ಕೋಟಿ ರೂ.ಗಳನ್ನು ಕಾಯ್ದಿರಿಸಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕಳೆದ 20 ವರ್ಷಗಳ ಅವಧಿಯಲ್ಲಿ ಆಗಿರದ ಕೆಲಸ ಕಾರ್ಯಗಳನ್ನು ಕೇವಲ ನಮ್ಮ ಸರ್ಕಾರದ 4 ವರ್ಷಧ ಅವಧಿಯಲ್ಲಿ ಕೈಗೊಳ್ಳಲಾಗಿದೆ. ಅನೇಕ ಬೃಹತ್ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿರುವ ರಾಜ್ಯ ಸರ್ಕಾರ ಬೆಣ್ಣೆತೋರಾ, ಕಾರಂಜಾ, ಬಂಡೂರಿ ನಾಲಾ, ಅಪ್ಪರ ಮಲ್ಲಾಮಾರಿ, ಸನ್ನತಿ ಯೋಜನೆ, ಮಹದಾಯಿ ಯೋಜನೆಗಳ ಜಾರಿ ನಮ್ಮ ಸರ್ಕಾರದ ಅವಧಿಯಲ್ಲಿಯೇ ಆಗಿದೆ ಎಂದರು.
ವಿಜಯಪುರ ಜಿಲ್ಲೆಯಲ್ಲಿ ಮುಳವಾಡ ಏತ ನೀರಾವರಿ ಯೋಜನೆಯನ್ನು 7 ಪ್ಯಾಕೇಜ್‍ಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ಕೆಲವು ಕಾಮಗಾರಿ ಪೂರ್ಣಗೊಂಡು ಇನ್ನೂ ಕೆಲವು ಮುಕ್ತಾಯದ ಹಂತದಲ್ಲಿವೆ. ಒಟ್ಟಾರೆ 118.56 ಕಿ.ಮೀ. ಉದ್ದದ ವಿವಿಧ ಕಾಲುವೆಗಳ ನಿರ್ಮಾಣವನ್ನು 283.98 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಿದ ಅವರು, ಈ ಯೋಜನೆಯಿಂದ ಒಟ್ಟು 19744 ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ ಹದಿಮೂರುವರೆ ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಯೋಜನೆಗಳು ಮತ್ತು 3600 ಕೋಟಿ ರೂ. ವೆಚ್ಚದಲ್ಲಿ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಜಾರಿಗೊಳಿಸಿದ್ದು, ಹೀಗೆ ಒಟ್ಟು 9 ಯೋಜನೆಗಳನ್ನು ಜಿಲ್ಲೆಯಲ್ಲಿ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ರೈತರು ಸಂಕಷ್ಟದಲ್ಲಿರುವ ಹಿನ್ನಲೆಯಲ್ಲಿ ಮಳೆ ಮೇಲೆ ಅವಲಂಬನೆಯಾಗಿರುವುದರಿಂದ ಅವರ ಸಂಕಷ್ಟಕ್ಕೆ ಸ್ಪಂದಿಸಿ ಹೆಚ್ಚೆಚ್ಚು ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ ಕಾರ್ಯರೂಪಕ್ಕೆ ತರುವ ಮಹತ್ವಾಕಾಂಕ್ಷೆಯನ್ನು ತಾವು ಹೊಂದಿ ಈಗಾಗಲೇ ಹಲವಾರು ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷ್ಣಾ ಕಾಡಾ ಅಧ್ಯಕ್ಷ ಜಕ್ಕಪ್ಪ ಎಡವೆ, ಜಿಲ್ಲಾ ಪಂಚಾಯತ್ ಸದಸ್ಯ ಉಮೇಶ ಕೋಳಕೂರ, ಎಪಿಎಂಸಿ ಸದಸ್ಯ ಹಣಮಂತ ಲೋಕೂರಿ, ಮಹೇಶ ಮಾಳಿ, ಕಾರ್ಯನಿರ್ವಹಕ ಅಭಿಯಂತರ ರಾಠೋಡ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪಿ.ಕೆ.ಶಂಕರ, ಶ್ರೀಶೈಲಗೌಡ ಪಾಟೀಲ, ವ್ಹಿ.ಎಸ್.ಪಾಟೀಲ ಸೇರಿದಂತೆ ತಿಗಣಿಬಿದರಿ, ಬಬಲೇಶ್ವರ, ನಿಡೋಣಿ, ಯಕ್ಕುಂಡಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.

loading...